ನವದೆಹಲಿ: ಮ್ಯಾನ್ಮಾರ್ ದೇಶದಲ್ಲಿ ಆಡಳಿತ ನಡೆಸುತ್ತಿರುವ ಅಲ್ಲಿನ ಸೇನೆ, ಮಂಗಳವಾರ ಹಳ್ಳಿಯೊಂದರ ಮೇಲೆ ಏರ್ಸ್ಟ್ರೈಕ್ (ವಾಯುದಾಳಿ- Myanmar Airstrike) ನಡೆಸಿದ ಪರಿಣಾಮ ಅಲ್ಲಿ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಹೀಗೆ ದಾಳಿ ನಡೆಸಿದ್ದನ್ನು ಮ್ಯಾನ್ಮಾರ್ ಸೇನೆ ದೃಢಪಡಿಸಿದೆ. ‘ಸಾಗಯಿಂಗ್ ಎಂಬ ಪ್ರದೇಶದ ಕನ್ಬಲು ಟೌನ್ಶಿಪ್ನಲ್ಲಿರುವ ಪಜಿಗಿ ಎಂಬ ಹಳ್ಳಿ ಮೇಲೆ ಏರ್ಸ್ಟ್ರೈಕ್ ಮಾಡಿದ್ದೇವೆ. ಅಲ್ಲಿನ ಜನರೆಲ್ಲ ಸೇರಿ, ದೇಶವಿರೋಧಿ ಚಳವಳಿ ಆಯೋಜಿಸಲು ಯೋಜನೆ ರೂಪಿಸುತ್ತಿದ್ದರು. ಅದಕ್ಕಾಗಿ ಆ ಹಳ್ಳಿಯಲ್ಲಿ ಒಂದು ಕಚೇರಿ ನಿರ್ಮಾಣ ಮಾಡಿದ್ದರು. ಅದರ ಉದ್ಘಾಟನೆ ಸಮಾರಂಭ ಮಂಗಳವಾರ ಮುಂಜಾನೆ 8ಗಂಟೆಗೆ ನಡೆಯುತ್ತಿತ್ತು. ಇದೇ ವೇಳೆ ವೈಮಾನಿಕ ದಾಳಿ ನಡೆಸಿದ್ದೇವೆ’ ಎಂದು ಮ್ಯಾನ್ಮಾರ್ ಜುಂಟಾ (ಸೇನಾಡಳಿತ) ವಕ್ತಾರ ಜಾವ್ ಮಿನ್ ಟುನ್ ತಿಳಿಸಿದ್ದಾರೆ.
ಪಜಿಗಿ ಎಂಬ ಹಳ್ಳಿಯಲ್ಲಿ ನಿರ್ಮಾಣವಾದ ನೂತನ ಕಚೇರಿ ಉದ್ಘಾಟನೆ ವೇಳೆ ಸುಮಾರು 150 ಮಂದಿ ಇದ್ದರು. ಅದರಲ್ಲಿ ಮಹಿಳೆಯರು, 20-30 ಮಕ್ಕಳು ಸೇರಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇನ್ನು ಸ್ಥಳೀಯವಾಗಿ ರಚಿಸಲಾಗಿದ್ದ ಸರ್ಕಾರ ವಿರೋಧಿ ಸಶಸ್ತ್ರಪಡೆಗಳ ನಾಯಕರು, ಮತ್ತು ಇತರ ವಿರೋಧಿ ಸಂಸ್ಥೆಗಳ ನಾಯಕರೂ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮೊದಲು ವೈಮಾನಿಕ ದಾಳಿ ನಡೆಯಿತು. ಆದರೆ ಅದಾಗಿ ಅರ್ಧಗಂಟೆಯಾದರೂ ಹೆಲಿಕಾಪ್ಟರ್ ಕಾಣಿಸಲಿಲ್ಲ. ಬಳಿಕ ಕಾಣಿಸಿಕೊಂಡಿತು. ಮತ್ತೆ ಆ ಸ್ಥಳದಲ್ಲಿ ಗುಂಡಿನ ದಾಳಿ ನಡೆಸಲಾಯಿತು. 100ಕ್ಕೂ ಹೆಚ್ಚಿನ ಜನರು ಮೃತಪಟ್ಟಿದ್ದು ಹೌದಾದರೂ, ನಿಖರ ಸಂಖ್ಯೆ ಗೊತ್ತಾಗಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: Tiger Census : ಏಪ್ರಿಲ್ 9ರಂದು ಹುಲಿ ಗಣತಿ ಬಿಡುಗಡೆ ಮಾಡಲಿದ್ದಾರೆ ಪಿಎಂ ಮೋದಿ, ಕರ್ನಾಟಕವೇ ನಂಬರ್ ಒನ್?
ಮ್ಯಾನ್ಮಾರ್ನಲ್ಲಿ ಇದ್ದ ಪ್ರಜಾಸತ್ತಾತ್ಮಕ ಸರ್ಕಾರವನ್ನು ಅಲ್ಲಿನ ಸೇನೆ 2021ರಲ್ಲಿ ಪತನಗೊಳಿಸಿದೆ. ಆಗ ಸೇನಾ ದಂಗೆಯೇ ನಡೆದುಹೋಗಿತ್ತು. ಆದರೆ ಮ್ಯಾನ್ಮಾರ್ನಲ್ಲಿನ ಸೇನಾ ಆಡಳಿತವನ್ನು ಅಲ್ಲಿನ ಜನರು ವಿರೋಧಿಸುತ್ತಿದ್ದಾರೆ. ಆಡಳಿತದಲ್ಲಿರುವ ಸೇನೆಯ ವಿರುದ್ಧ ಹೋರಾಡಲೆಂದೇ ಪೀಪಲ್ಸ್ ಡಿಫೆನ್ಸ್ ಫೋರ್ಸ್ ರಚನೆಯಾಗಿದೆ. ಈಗಾಗಲೇ ಹಲವು ಬಾರಿ ಅವರು ಬೀದಿಗೆ ಇಳಿದು ಹೋರಾಟ ನಡೆಸಿದ್ದಾರೆ. ಆದರೂ ಸೇನೆ ಅವರನ್ನು ನಿಯಂತ್ರಿಸಲು ಕೆಲವು ಕ್ರೂರ ನಿಯಮಗಳನ್ನು ಕೈಗೊಳ್ಳುತ್ತಿದೆ. ಈಗ ದಾಳಿ ನಡೆದ ಸ್ಥಳದಲ್ಲಿ ಗಣಿಗಳು ಇದ್ದು, ಸೇನೆ ನಡೆಸಿದ ಏರ್ಸ್ಟ್ರೈಕ್ನಿಂದ ಅವೂ ಸ್ಪೋಟಗೊಂಡಿವೆ. ಹೀಗಾಗಿಯೇ ಹೆಚ್ಚಿನ ಸಾವಾಗಿದೆ ಎಂದೂ ವರದಿಯಾಗಿದೆ.