ನವ ದೆಹಲಿ: ಅಧಿಕಾರ ಬೇಕು, ಮತ್ತೂ ಬೇಕು..ಮುಂದಿನ ಅವಧಿಗೂ ಬೇಕು ಎಂಬ ಹೆಬ್ಬಯಕೆ ರಾಜಕಾರಣಿಗಳಿಗೆ ತೀರುವುದೇ ಇಲ್ಲ. ಬಹುತೇಕ ರಾಜಕೀಯ ನಾಯಕರು ಆಡಳಿತ ಚುಕ್ಕಾಣಿ ಹಿಡಿದೇ ಇರಬೇಕು ಎಂದೇ ಬಯಸುತ್ತಾರೆ. ಹೀಗಿರುವಾಗ ನ್ಯೂಜಿಲ್ಯಾಂಡ್ ಪ್ರಧಾನಮಂತ್ರಿ ಜಸಿಂದಾ ಆರ್ಡರ್ನ್ ಅದಕ್ಕೆ ವ್ಯತಿರಿಕ್ತ ಎನ್ನಿಸಿದ್ದಾರೆ. 2017ರಿಂದಲೂ ನ್ಯೂಜಿಲ್ಯಾಂಡ್ ಪ್ರಧಾನಮಂತ್ರಿ ಹುದ್ದೆಯಲ್ಲಿರುವ ಜಸಿಂದಾ, ‘ನನಗಿನ್ನು ಅಧಿಕಾರ ಸಾಕು’ ಎನ್ನುತ್ತ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನ್ಯೂಜಿಲ್ಯಾಂಡ್ನಲ್ಲಿ ಇನ್ನು 9ತಿಂಗಳಲ್ಲಿ ಕೇಂದ್ರ ಚುನಾವಣೆ ಇದೆ. ಅದರ ಮಧ್ಯೆ ಜಸಿಂದಾ ರಾಜೀನಾಮೆ ಕುತೂಹಲ ಮೂಡಿಸಿದೆ.
ಜಸಿಂದಾ ಆರ್ಡರ್ನ್ ನಿಜಕ್ಕೂ ಯಾಕಾಗಿ ರಾಜೀನಾಮೆ ನೀಡಿದರು ಎಂಬುದು ಖಚಿತವಾಗಿಲ್ಲ. ಅವರೂ ಕೂಡ ತಮಗೆ ಅಧಿಕಾರ ಸಾಕು ಎಂದು ಹೇಳಿದ್ದಾರೆ ಹೊರತು, ಇಂಥದ್ದೇ ಕಾರಣಕ್ಕೆ ಸ್ಥಾನ ಬಿಡುತ್ತೇನೆ ಎಂದು ಹೇಳಿಕೊಂಡಿಲ್ಲ. ಪ್ರಧಾನಿ ಹುದ್ದೆಗೆ ಹೊಸ ಅಭ್ಯರ್ಥಿಯನ್ನು ಇದುವರೆಗೆ ನ್ಯೂಜಿಲೆಂಡ್ ಲೇಬರ್ ಪಾರ್ಟಿ ಹೆಸರಿಸಿಲ್ಲ. ರಾಜೀನಾಮೆ ಬಳಿಕ ಸುದ್ದಿಗಾರರೊಂದಿಗೆ ಭಾವನಾತ್ಮಕವಾಗಿ ಮಾತನಾಡಿದ ಜಸಿಂದಾ, ‘ರಾಜೀನಾಮೆ ಕೊಡಬೇಕು ಎಂಬುದು ನನ್ನ ವೈಯಕ್ತಿಕ ನಿರ್ಧಾರ. ಫೆ.7ಕ್ಕೆ ನನ್ನ ಅಧಿಕಾರ ಅವಧಿ ಮುಗಿಯುತ್ತದೆ. ನಾನು ಕಳೆದ 6ವರ್ಷಗಳಿಂದ ಪ್ರಧಾನಿ ಹುದ್ದೆಯಲ್ಲಿದ್ದೇನೆ. ಈ ಪುಟ್ಟ ದ್ವೀಪವನ್ನು ಮುನ್ನಡೆಸುವುದು ನನಗೇನೂ ಸುಲಭವಾಗರಲಿಲ್ಲ. ಅತ್ಯಂತ ಸವಾಲಿನ ಕೆಲಸವಾಗಿತ್ತು. ಹಾಗಂತ ಕಷ್ಟ ಎಂಬ ಕಾರಣಕ್ಕೇ ಪ್ರಧಾನಿ ಹುದ್ದೆ ಬಿಡುತ್ತಿಲ್ಲ’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಈಗಿನ ಪ್ರಧಾನಿ ಆಯ್ಕೆಗೆ ಮರು ಚುನಾವಣೆ ನಡೆಯುವುದನ್ನೂ ನಾನು ಬಯಸುತ್ತಿಲ್ಲ ಎಂದಿದ್ದಾರೆ.
ಜಸಿಂದಾ ಆರ್ಡರ್ನ್ ಮೂಲತಃ ಬಡಕುಟುಂಬದವರು. ಇವರ ತಂದೆ ಪೊಲೀಸ್ ಅಧಿಕಾರಿ. ನ್ಯೂಜಿಲ್ಯಾಂಡ್ ಮಾಜಿ ಪ್ರಧಾನಿ ಹೆಲೆನ್ ಕ್ಲಾರ್ಕ್ ಅವರ ಕಚೇರಿಯಲ್ಲಿ ಕೆಲಸಕ್ಕೆ ಸೇರುವ ಮೂಲಕ ತಮ್ಮ ರಾಜಕೀಯ ವೃತ್ತಿ ಜೀವನ ಪ್ರಾರಂಭಿಸಿದ ಜಸಿಂದಾ, ಬಳಿಕ ಬ್ರಿಟನ್ನಲ್ಲಿ ಟೋನಿ ಬ್ಲೇರ್ ಪ್ರಧಾನಿಯಾಗಿದ್ದಾಗ ಅವರ ಸರ್ಕಾರದಲ್ಲಿ ನೀತಿ ಸಲಹೆಗಾರರಾಗಿ ಕೆಲಸ ಮಾಡಲು ಹೋದರು. ಅಲ್ಲಿಂದ ವಾಪಸ್ ಬಂದು, ಮೊಟ್ಟ ಮೊದಲು 2008ರಲ್ಲಿ ನ್ಯೂಜಿಲ್ಯಾಂಡ್ ಸಂಸತ್ತಿಗೆ ಆಯ್ಕೆಯಾದರು. ಬಳಿಕ 2017ರಲ್ಲಿ ಪ್ರಧಾನಿ ಹುದ್ದೆಗೆ ಏರಿದರು. ಪ್ರಧಾನಿ ಹುದ್ದೆಯಲ್ಲಿದ್ದಾಗಲೇ ಮಗುವಿಗೆ ಜನ್ಮ ನೀಡಿದ ವಿಶ್ವದ ಎರಡನೇ ಪ್ರಧಾನಿ ಎಂಬ ಖ್ಯಾತಿಯನ್ನೂ ಪಡೆದರು. ಮೊದಲ ಖ್ಯಾತಿ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರದ್ದು. ಹಾಗೇ, ಕೊವಿಡ್ 19 ಸನ್ನಿವೇಶದಲ್ಲಿ ಅತ್ಯಂತ ಸಮರ್ಪಕವಾಗಿ ಆಡಳಿತ ನಡೆಸಿ, ಕೊರೊನಾ ಸವಾಲನ್ನು ಮೆಟ್ಟಿನಿಂತ ಪ್ರಧಾನಿ ಎಂಬ ಹೆಗ್ಗಳಿಕೆಗೂ ಜಸಿಂದಾ ಪಾತ್ರರಾಗಿದ್ದಾರೆ.
ಇದನ್ನೂ ಓದಿ: INDvsNZ ODI | ಭಾರತಕ್ಕೆ ಗಿಲ್ ಮಾಂಗೆ ಮೋರ್; ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕ ದಿನ ಪಂದ್ಯದಲ್ಲಿ 12 ರನ್ ಜಯ