Site icon Vistara News

Nigeria Genocide: ನೈಜೀರಿಯಾದಲ್ಲಿ ಜನಾಂಗೀಯ ದಾಳಿ, 113 ಸಾವು

Nigeria Genocide

ಲಾಗೋಸ್‌: ನೈಜೀರಿಯಾದಲ್ಲಿ ಜನಾಂಗೀಯ ಗಲಭೆ (Nigeria Genocide) ಸ್ಫೋಟಗೊಂಡಿದೆ. ಹಲವು ಬುಡಕಟ್ಟುಗಳ ಸಶಸ್ತ್ರ ಗುಂಪುಗಳು ಸೇರಿ ಮಧ್ಯ ನೈಜೀರಿಯಾದಲ್ಲಿ ನಡೆಸಿದ ಸರಣಿ ದಾಳಿಗಳಲ್ಲಿ 113ಕ್ಕೂ ಅಧಿಕ ಜನ ಸತ್ತಿದ್ದಾರೆ.

ಕಳೆದ ಭಾನುವಾರ ಸಶಸ್ತ್ರ ಗುಂಪುಗಳ ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 113ಕ್ಕೆ ಏರಿಕೆಯಾಗಿದೆ. ಪಟ್ಟಣಗಳ ವಸತಿ ಬಡಾವಣೆಗಳನ್ನು ಗುರಿಯಾಗಿಸಿಕೊಂಡು ಸರಣಿ ದಾಳಿ ನಡೆಸಲಾಗಿದೆ ಎಂದು ಅಲ್‌-ಜಝೀರಾ ವರದಿ ಮಾಡಿದೆ.

ಶನಿವಾರ ಮತ್ತು ಭಾನುವಾರ ಮಧ್ಯ ನೈಜೀರಿಯಾದಾದ್ಯಂತ ಸುಮಾರು 20 ಸಮುದಾಯದ ಬಡಾವಣೆಗಳನ್ನು ಗುರಿಯಾಗಿಸಿಕೊಂಡು ಸಶಸ್ತ್ರ ಗುಂಪುಗಳು ನಡೆಸಿದ ದಾಳಿಗಳಲ್ಲಿ 16 ಜನರು ಮೃತಪಟ್ಟಿದ್ದರು ಎಂದು ನೈಜೀರಿಯಾ ಸೇನೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಸೋಮವಾರ ಮುಂಜಾನೆಯ ವೇಳೆಗೆ ಮೃತಪಟ್ಟವರ ಸಂಖ್ಯೆ 113ಕ್ಕೆ ಏರಿಕೆಯಾಗಿದೆ. ಸುಮಾರು 300 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ನಾಗರಿಕರ ವಿರುದ್ಧ ನಡೆಯುತ್ತಿರುವ ದಾಳಿಗಳನ್ನು ತಡೆಯಲು ಸರ್ಕಾರವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ ಎಂದು ನೈಜೀರಿಯಾದ ಪ್ಲೇಟೂ ರಾಜ್ಯದ ಗವರ್ನರ್ ಕ್ಯಾಲೆಬ್ ಮುಟ್ಫ್ವಾಂಗ್ ಅವರ ವಕ್ತಾರ ಗ್ಯಾಂಗ್ ಬೆರೆ ತಿಳಿಸಿದ್ದಾರೆ.

ಪ್ಲೇಟೂ ಮಧ್ಯ ನೈಜೀರಿಯಾದ ಒಂದು ರಾಜ್ಯ. ವೈವಿಧ್ಯಮಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಮುದಾಯಗಳು ಇಲ್ಲಿ ಜತೆಯಾಗಿ ವಾಸಿಸುತ್ತಿವೆ. ಕೃಷಿಯನ್ನು ಅವಲಂಬಿಸಿರುವ ಮುಸ್ಲಿಮರು, ಕ್ರೈಸ್ತರು ಮತ್ತು ಸ್ಥಳೀಯ ಮೂಲನಿವಾಸಿ ಬುಡಕಟ್ಟುಗಳ ನಡುವೆ ಆಗಾಗ ಸಂಘರ್ಷ ಭುಗಿಲೇಳುತ್ತಿದೆ. ಕಳೆದ ಮೇ ತಿಂಗಳಿನಲ್ಲಿ ಇದೇ ಪ್ರದೇಶದಲ್ಲಿ ನಡೆದ ಜನಾಂಗೀಯ ಸಂಘರ್ಷದಲ್ಲಿ 100ಕ್ಕೂ ಅಧಿಕ ಜನರು ಮೃತಪಟ್ಟಿದ್ದರು.

ಮಧ್ಯ ನೈಜೀರಿಯಾದಲ್ಲಿ ಪದೇ ಪದೆ ನಡೆಯುತ್ತಿರುವ ಜನಾಂಗೀಯ ಸಂಘರ್ಷವನ್ನು ತಡೆಯುವಲ್ಲಿ ಅಲ್ಲಿನ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಆರೋಪಿಸಿದೆ. ಈ ತಿಂಗಳ ಆರಂಭದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರ ಮೇಲೆ ನಡೆದ ಮಿಲಿಟರಿ ಡ್ರೋನ್ ದಾಳಿಯಲ್ಲಿ 85 ನಾಗರಿಕರು ಕೊಲ್ಲಲ್ಪಟ್ಟಿದ್ದರು. ಈ ಘಟನೆ ಕುರಿತು ನೈಜೀರಿಯಾದ ಅಧ್ಯಕ್ಷ ಬೋಲಾ ಟಿನುಬು ತನಿಖೆಗೆ ಆದೇಶಿಸಿದ್ದಾರೆ.

ಇದನ್ನೂ ಓದಿ: ಬೆನ್ನು ಮೂಳೆ ಡೊಂಕು; ನೈಜೀರಿಯಾ ಬಾಲಕಿಗೆ ಮರು ಜೀವ ಕೊಟ್ಟ ಬೆಂಗಳೂರು ಡಾಕ್ಟರ್ಸ್‌

Exit mobile version