ನವ ದೆಹಲಿ: ಆದಿಪುರುಷ್ ದೇಶ ಮತ್ತು ವಿದೇಶಗಳಲ್ಲಿ ಟೀಕೆಗಳನ್ನು ಎದುರಿಸುತ್ತಿದ್ದು, ಕೆಲವು ಸಂಭಾಷಣೆಗಳನ್ನು ಬದಲಾಯಿಸಲು ಚಿತ್ರ ನಿರ್ಮಾಪಕರು ಒಪ್ಪಿಕೊಂಡಿದ್ದಾರೆ. ಆದರೆ ಈಗ ನೇಪಾಳದ ಕಠ್ಮಂಡು ಮೇಯರ್ ಬಾಲೆನ್ ಶಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಭಾರತೀಯ ಚಲನಚಿತ್ರವನ್ನು ಕಠ್ಮಂಡು ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಪ್ರದರ್ಶಿಸಲು ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ. ನಿಷೇಧದ ಬಗ್ಗೆ ಎಲ್ಲಾ ಚಿತ್ರಮಂದಿರಗಳಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ. ‘ಸೀತೆ ಭಾರತದ ಮಗಳು’ ಎಂಬ ಹೇಳಿಕೆಗೆ ಆಕ್ಷೇಪಿಸಿ ಅವರು ಈ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಸಿನಿಮಾ ಮತ್ತೆ ಮತ್ತೆ ವಿವಾದಗಳ ಸುಳಿಗೆ ಸಿಲುಕುತ್ತಿದೆ.
— Balen Shah (@ShahBalen) June 18, 2023
ಈ ಹಿಂದೆ ಮೇಯರ್ ಬಾಲೆನ್ ಶಾ ಈ ಸಂಭಾಷಣೆ ತೆಗೆದುಹಾಕಲು ಮೂರು ದಿನಗಳ ಕಾಲಾವಕಾಶ ನೀಡಿದ್ದರು. ಮೂರು ದಿನಗಳಲ್ಲಿ ಸಂಭಾಷಣೆಯನ್ನು ಎಡಿಟ್ ಮಾಡದಿದ್ದರೆ ಎಲ್ಲಾ ಭಾರತೀಯ ಚಲನಚಿತ್ರಗಳನ್ನು ನಿಷೇಧಿಸುವುದಾಗಿ ಮೇಯರ್ ಬೆದರಿಕೆ ಹಾಕಿದ್ದರು. ಹೀಗಾಗಿ ಕಳೆದ ಶುಕ್ರವಾರ, ಆದಿಪುರುಷ್ ಕಠ್ಮಂಡುವಿನಲ್ಲಿ ಬಿಡುಗಡೆಯಾಗಲಿಲ್ಲ. ಚಿತ್ರ ತಂಡ ಸಂಭಾಷಣೆಯನ್ನು ಬದಲಿಸಲು ಒಪ್ಪಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಕಠ್ಮಂಡು ಮೇಯರ್ ಭಾಗವನ್ನು ನೇಪಾಳದಲ್ಲಿ ಮಾತ್ರವಲ್ಲದೆ ಭಾರತಲ್ಲೂ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆದಿಪುರುಷ್ ಸಿನಿಮಾದ ಆಕ್ಷೇಪಾರ್ಹ ಭಾಗವನ್ನು ತೆಗೆದುಹಾಕುವವರೆಗೂ ಕಠ್ಮಂಡು ಮೆಟ್ರೋಪಾಲಿಟನ್ನಲ್ಲಿ ಎಲ್ಲಾ ಭಾರತೀಯ ಚಲನಚಿತ್ರಗಳಿಗೆ ನಿಷೇಧ ಹೇರುತ್ತೇವೆ ಎಂದು ಬಾಲನ್ ಶಾ ಭಾನುವಾರ ಹೇಳಿದ್ದಾರೆ. “ಸೀತೆಯನ್ನು ಭಾರತದ ಮಗಳು” ಎಂದು ವಿವರಿಸುವ ಸಂಭಾಷಣೆಯನ್ನು ಬದಲಾಯಿಸಿದ ನಂತರವೇ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಪ್ರದರ್ಶಿಸಲು ಅನುಮತಿ ನೀಡಲಾಗುವುದು ಎಂಬುದಾಗಿ ನೇಪಾಳದ ಚಲನಚಿತ್ರ ಪ್ರಮಾಣೀಕರಣ ಮಂಡಳಿಯೂ ಹೇಳಿದೆ.
ಆದಿಪುರುಷ್ ಚಿತ್ರದಲ್ಲಿ ಜಾನಕಿ ಭಾರತದ ಮಗಳು ಎಂದು ಡೈಲಾಗ್ ಇದೆ. ಇದು ಆಕ್ಷೇಪಾರ್ಹವಾಗಿದೆ ಮತ್ತು ಅದನ್ನು ಸರಿಪಡಿಸಲು ನಾವು ಮೂರು ದಿನಗಳ ಅಂತಿಮ ಗಡುವು ನೀಡಿದ್ದೆವು. ನೇಪಾಳ ಮತ್ತು ಅದರ ಸ್ವಾತಂತ್ರ್ಯ, ಸ್ವಾತಂತ್ರ್ಯ ಮತ್ತು ಆತ್ಮಗೌರವವನ್ನು ಹಾಗೇ ಉಳಿಸಿಕೊಳ್ಳುವ ಮೂಲಕ ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸುವುದು ಪ್ರತಿ ಸರ್ಕಾರ, ಸರ್ಕಾರಿ ಸಂಸ್ಥೆ ಮತ್ತು ಸರ್ಕಾರೇತರ ವಲಯ ಮತ್ತು ನೇಪಾಳಿ ನಾಗರಿಕರ ಮೊದಲ ಕರ್ತವ್ಯವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಬಾಲನ್ ಶಾ ಬರೆದಿದ್ದಾರೆ.
ಚಿತ್ರವನ್ನು ಈಗಿರುವಂತೆ ತೋರಿಸಿದರೆ, ನೇಪಾಳದ ರಾಷ್ಟ್ರೀಯತೆ, ಸಾಂಸ್ಕೃತಿಕ ಏಕತೆ ಮತ್ತು ರಾಷ್ಟ್ರೀಯ ಅಸ್ಮಿತೆಗೆ ಸರಿಪಡಿಸಲಾಗದಷ್ಟು ಹಾನಿಯಾಗುತ್ತದ. ಆ ಚಲನಚಿತ್ರದಿಂದ ನೇಪಾಳದ ಮೇಲಿನ ಸಾಂಸ್ಕೃತಿಕ ಅತಿಕ್ರಮಣವಾಗಿದೆ ಎಂದು ಶಾ ಹೇಳಿದ್ದಾರೆ.
ಚಲನಚಿತ್ರವನ್ನು ದೇಶ ಮತ್ತು ವಿದೇಶದ ಇತರ ಪ್ರದೇಶಗಳಲ್ಲಿ ಪ್ರದರ್ಶಿಸಲು ಅನುಮತಿಸಿದರೆ, ಅದು ದಾರಿತಪ್ಪಿಸಿದಂತೆ. ಆಕ್ಷೇಪಾರ್ಹ ಭಾಗಗಳನ್ನು ಚಿತ್ರದಿಂದ ತೆಗೆದುಹಾಕುವವರೆಗೂ ಕಠ್ಮಂಡು ಮೆಟ್ರೋಪಾಲಿಟನ್ ನಗರದಲ್ಲಿ ಯಾವುದೇ ಭಾರತೀಯ ಚಲನಚಿತ್ರವನ್ನು ಪ್ರದರ್ಶಿಸಲಾಗಿದೆ ಎಂದು ಮೇಯರ್ ಬರೆದಿದ್ದಾರೆ.
ಹಿಂದೂ ದೇವತೆಗಳ ಬಾಯಲ್ಲಿ ಕಳಪೆ ಸಂಭಾಷಣೆಗಳನ್ನು ಹೇಳಿಸುವ ಮೂಲಕ ಹಿಂದೂ ಭಾವನೆಗಳನ್ನು ನೋಯಿಸಲಾಗಿದೆ ಎಂಬುದಾಗಿ ಆದಿಪುರುಷ್ ಭಾರತದಲ್ಲಿಯೂ ಟೀಕೆಗಳನ್ನು ಎದುರಿಸುತ್ತಿದೆ. ಪ್ರೇಕ್ಷಕರಿಗೆ ಆಕ್ಷೇಪಾರ್ಹವೆಂದು ಕಂಡುಬರುವ ಸಂಭಾಷಣೆಗಳನ್ನು ಪರಿಷ್ಕರಿಸಲಾಗುವುದು ಎಂದು ಬರಹಗಾರ ಮನೋಜ್ ಮುಂಡಾಶಿರ್ ಭಾನುವಾರ ಪ್ರಕಟಿಸಿದ್ದಾರೆ. ಆದಿಪುರುಷ್ ಚಿತ್ರಕ್ಕಾಗಿ ವಿರೋಧ ಪಕ್ಷದ ನಾಯಕರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.