ನವ ದೆಹಲಿ: ನೊಬೆಲ್ ಪ್ರಶಸ್ತಿ ಪುರಸ್ಕೃತ ಬೆಲಾರಸ್ನ ಮಾನವ ಹಕ್ಕುಗಳ ಹೋರಾಟಗಾರ ಅಲೆಸ್ ಬಿಯಾಲಿಯಾಟ್ಸ್ಕಿಗೆ ಅಲ್ಲಿನ ಕೋರ್ಟ್ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಸರಕಾರದ ವಿರುದ್ಧ ಪ್ರತಿಭಟನೆಗೆ ಆರ್ಥಿಕ ನೆರವು ನೀಡಿದ ಆರೋಪಗಳು ಅವರ ಮೇಲಿವೆ. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಶುಕ್ರವಾರ ತೀರ್ಪು ಪ್ರಕಟಿಸಿದೆ.
ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲು ಆರ್ಥಿಕ ನೆರವು ನೀಡಿದ್ದಾರೆ ಎಂಬ ಆರೋಪದಲ್ಲಿ ಅಲೆಸ್ ಹಾಗೂ ಅವರ ಮೂವರು ಸಹಚರರನ್ನು ಬಂಧಿಸಿ ಜೈಲಿನಲ್ಲಿ ಇಡಲಾಗಿತ್ತು. ಏತನ್ಮಧ್ಯೆ ಅವರಿಗೆ ನೊಬೆಲ್ ಪುರಸ್ಕಾರ ದೊರಕಿತ್ತು. ಇದೀಗ ಅವರ ಪ್ರಕರಣದ ವಿಚಾರಣೆ ನಡೆದು ಜೈಲು ಶಿಕ್ಷೆ ವಿಧಿಸಲಾಗಿದೆ.
ಇದನ್ನೂ ಓದಿ : ರಾಜ ಮಾರ್ಗ | ಹೆಣ್ಮಕ್ಕಳಿಗೆ ಶಾಲೆಯೇ ಕನಸಾಗಿದ್ದ ಕಾಲದಲ್ಲಿ ಆಕೆ ಎರಡು ನೊಬೆಲ್ ಗೆದ್ದರು!: ಇದು ಮೇರಿ ಕ್ಯೂರಿಯ ಕಥೆ
ಬೆಲಾರಸ್ನ ಸರ್ವಾಧಿಕಾರಿ ಅಲೆಕ್ಸಾಂಡರ್ ಲುಕಶೆಂಕೊ ಅವರು 2020ರ ಚುನಾವಣೆಯಲ್ಲಿ ಮತ್ತೊಮ್ಮೆ ಅಧ್ಯಕ್ಷ ಗಾದಿಗೆ ಏರಿದ್ದನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಈ ಪ್ರಕರಣದಲ್ಲಿ ‘ವಯಸ್ನಾ ಮಾನವ ಹಕ್ಕು ಕೇಂದ್ರ’ದ ಸ್ಥಾಪಕರಾಗಿರುವ ಅಲೆಸ್ ಹಾಗೂ ಇತರ ಮೂವರು ಸಹೋದ್ಯೋಗಿಗಳು ಬಂಧಿತರಾಗಿದ್ದರು. ತಮ್ಮ ಸಂಘಟನೆಯ ಹಣವನ್ನು ರಾಜಕೀಯ ಕೈದಿಗಳ ಕಾನೂನು ಪ್ರಕ್ರಿಯೆಗಳಿಗಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪದಲ್ಲಿ ಅವರನ್ನು ಬಂಧಿಸಲಾಗಿತ್ತು.
ಸಿಯಾಟ್ಲಾನಾ ಮಾಡಿರುವ ಟ್ವೀಟ್ ಹೀಗಿದೆ
ಅಲೆಸ್ ಅವರ ಬಂಧನವನ್ನು ವಿರೋಧ ಪಕ್ಷದ ನಾಯಕಿ ಸಿಯಾಟ್ಲಾನಾ ಟಿಕಾನೊಸ್ಕಾಯ ಖಂಡಿಸಿದ್ದಾರೆ. ಅಲೆಸ್ ನಿಜವಾದ ಹೀರೋ. ಅವರನ್ನೇ ಬಂಧಿಸಿ ಜೈಲಿನಲ್ಲಿಡುವ ಮೂಲಕ ಸರ್ವಾಧಿಕಾರಿ ಧೋರಣೆ ತಾಳಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.