Site icon Vistara News

Taliban Rule | ತಾಲಿಬಾನ್‌ ಕಪಿಮುಷ್ಟಿಗೆ ಸಿಲುಕಿ ಆಫ್ಘನ್‌ಗೆ ಒಂದು ವರ್ಷ, ಏನೆಲ್ಲ ನಡೆದುಹೋಯ್ತು?

Afghanistan

ಕಾಬೂಲ್: ಅಫಘಾನಿಸ್ತಾನವು ತಾಲಿಬಾನ್‌ ಉಗ್ರರ ಕಪಿಮುಷ್ಟಿಗೆ (Taliban Rule) ಸಿಲುಕಿ ಒಂದು ವರ್ಷ ತುಂಬಿದ್ದು, ಇಷ್ಟು ದಿನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ, ಮಹಿಳೆಯರ ಮೇಲೆ ದೌರ್ಜನ್ಯ, ಬಲವಂತದ ಮದುವೆ ಸೇರಿ ಹಲವು ಅನಾಚಾರಗಳಿಗೆ ದೇಶ ಸಾಕ್ಷಿಯಾಗಿದೆ. ದೇಶವನ್ನು ಹಿಡಿತಕ್ಕೆ ತೆಗೆದುಕೊಂಡು ಆಗಸ್ಟ್‌ 15ಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ತಾಲಿಬಾನಿಗಳು ಸರಕಾರಿ ರಜೆ ಘೋಷಿಸಿದರೂ ಜನರಲ್ಲಿ ಯಾವುದೇ ಉತ್ಸಾಹ, ಸಂಭ್ರಮ ಕಾಣಿಸದಿರುವುದೇ ಇದಕ್ಕೆ ನಿದರ್ಶನವಾಗಿದೆ.

ಅಮೆರಿಕವು ಆಫ್ಘನ್‌ನಲ್ಲಿ ನಿಯೋಜಿಸಿದ್ದ ಸೇನೆಯನ್ನು ಸಂಪೂರ್ಣವಾಗಿ ವಾಪಸ್‌ ಪಡೆದ ಬಳಿಕ ತಾಲಿಬಾನಿಗಳು ಇಡೀ ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಇದನ್ನು ಆ ದೇಶದ ಪ್ರಜೆಗಳೇ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರು. ಸಾವಿರಾರು ಜನ ಬೇರೆ ದೇಶಗಳಿಗೆ ವಲಸೆ ಹೋಗಿದ್ದರು, ಹೋಗಲು ಯತ್ನಿಸಿದ್ದರು. ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಸಿಕ್ಕ ಸಿಕ್ಕ ವಿಮಾನ ಹತ್ತಿ ದೇಶ ಬಿಡಲು ಯತ್ನಿಸಿದ ಸಾವಿರಾರು ಜನರ ಬವಣೆಗಳು ವಿಶ್ವದೆಲ್ಲೆಡೆ ಬಿತ್ತರಗೊಂಡಿದ್ದವು. ಈ ಹಿನ್ನೆಲೆಯಲ್ಲಿ, ಜನರ ಒಲವನ್ನೂ ಕಳೆದುಕೊಂಡಿದ್ದ ತಾಲಿಬಾನ್‌, ಅಧಿಕಾರ ಮರುಸ್ಥಾಪನೆಯೊಂದರ ಹೊರತಾಗಿ ಕಳೆದೊಂದು ವರ್ಷದಲ್ಲಿ ಏನನ್ನೂ ಸಾಧಿಸಿಲ್ಲ.

ಆಫ್ಘನ್‌ ವಿದ್ಯಾರ್ಥಿನಿ ಮುಖದಲ್ಲಿ ಮನೆಮಾಡಿರುವ ಆತಂಕ.

ಮಾನವ ಹಕ್ಕುಗಳ ಉಲ್ಲಂಘನೆ

ಕಳೆದೊಂದು ವರ್ಷದಲ್ಲಿ ಮಾನವ ಹಕ್ಕುಗಳು, ಅದರಲ್ಲೂ ಪ್ರಮುಖವಾಗಿ ಮಹಿಳಾ ಹಕ್ಕುಗಳು, ಪದೇಪದೆ ಉಲ್ಲಂಘನೆಯಾಗಿವೆ ಎಂಬ ಮಾತು ವ್ಯಾಪಕವಾಗಿದೆ. ಇದೇ ಹಿನ್ನೆಲೆಯಲ್ಲಿ, ಸುಮಾರು 40 ಮಹಿಳೆಯರು ʻಆಹಾರ, ದುಡಿಮೆ ಮತ್ತು ಸ್ವಾತಂತ್ರ್ಯʼ ಎಂಬ ಘೋಷವಾಕ್ಯಗಳನ್ನು ಹೊತ್ತು, ಕಾಬೂಲಿನ ಶಿಕ್ಷಣ ಸಚಿವಾಲಯದ ಕಟ್ಟಡದೆದುರು ಪ್ರದರ್ಶನ ನಡೆಸಿದರು. ʻಆಗಸ್ಟ್‌ 15 ಕರಾಳ ದಿನʼ ಎಂಬ ಫಲಕಗಳನ್ನು ಹಿಡಿದಿದ್ದ ಅವರು, ದುಡಿಯುವ ಮತ್ತು ರಾಜಕೀಯವಾಗಿ ಪಾಲ್ಗೊಳ್ಳುವ ಹಕ್ಕುಗಳನ್ನು ನೀಡುವಂತೆ ಆಗ್ರಹಿಸಿದರು. ಮುಸುಕು ಧರಿಸದೆ ಬಂದಿದ್ದ ಮಹಿಳೆಯರನ್ನು ಉಗ್ರರು ಚದುರಿಸಿದ್ದರು.

ತಾಲಿಬಾನ್‌ ಮತ್ತೆ ಬಂದ ನಂತರ, ದೇಶದ ಸಾಮಾನ್ಯ ನಾಗರಿಕರಿಗೆಲ್ಲ, ಅದರಲ್ಲೂ ಮುಖ್ಯವಾಗಿ ಮಹಿಳೆಯರಿಗೆ, ಬದುಕು ದುರ್ಬರವಾಗಿದೆ. ಆರಂಭದ ದಿನಗಳಲ್ಲಿ ತನ್ನ ತೀವ್ರಗಾಮಿ ಧೋರಣೆಯನ್ನು ಮೃದುಗೊಳಿಸಿಕೊಂಡಿರುವುದಾಗಿ ಹೇಳಿದ್ದ ಉಗ್ರ ಸಂಘಟನೆ, ಕ್ರಮೇಣ ತನ್ನ ಎಂದಿನ ಧೋರಣೆಯನ್ನೇ ಅನುಸರಿಸುತ್ತಿದೆ. ಸರಕಾರದ ಎಲ್ಲ ಹುದ್ದೆಗಳಿಂದಲೂ ಮಹಿಳೆಯರನ್ನು ಮನೆಗೆ ಕಳಿಸಲಾಗಿದೆ. ಸಾವಿರಾರು ಹೆಣ್ಣು ಮಕ್ಕಳ ಶಿಕ್ಷಣ ಕುಂಠಿತಗೊಳಿಸಲಾಗಿದೆ. ವಸ್ತ್ರಸಂಹಿತೆಯನ್ನಂತೂ ಕಠಿಣವಾಗಿಯೇ ಹೇರಲಾಗಿದೆ. ʻಅವರು ಮತ್ತೆ ಬಂದ ದಿನದಿಂದ ನಮ್ಮ ಬದುಕು ಅರ್ಥವನ್ನೇ ಕಳೆದುಕೊಂಡಿದೆ. ನಮ್ಮ ಖಾಸಗಿ ಜೀವನದಲ್ಲೂ ಮೂಗು ತೂರಿಸುತ್ತಿರುವ ಅವರು ನಮ್ಮ ಸರ್ವಸ್ವವನ್ನೂ ಕಿತ್ತುಕೊಂಡಿದ್ದಾರೆʼ ಎಂದು ಕಾಬೂಲ್‌ ನಿವಾಸಿ ಒಗಾಯ್‌ ಅಮೇಲ್‌ ಶೋಕಿಸುತ್ತಾರೆ.

ಬೆಲೆಯೇರಿಕೆ ಬರೆ

ತಾಲಿಬಾನ್‌ ಮರಳಿ ಬಂದಾಗಿನಿಂದ ತಿಕ್ಕಾಟ, ಪ್ರತಿರೋಧಗಳು ಕಡಿಮೆಯಾಗಿವೆ ಎಂಬುದು ನಿಜ. ಆದರೆ ಮಾನವೀಯ ನೆಲೆಯಲ್ಲಿ ಸಂಘರ್ಷಗಳು ಹೆಚ್ಚುತ್ತಲೇ ಇವೆ. ʻಅಗತ್ಯ ವಸ್ತುಗಳ ಬೆಲೆಗಳು ಎಷ್ಟೊಂದು ಹೆಚ್ಚಿವೆ ಎಂದರೆ, ನಮ್ಮ ಮೇಲೆಯೇ ನಮಗೆ ಜಿಗುಪ್ಸೆ ಬರುವಂತಾಗಿದೆʼ ಎಂದು ಕಾಂದಹಾರ್‌ನ ಅಂಗಡಿಯೊಂದರ ಮಾಲಿಕ ನೂರ್‌ ಮೊಹಮ್ಮದ್‌ ಹೇಳುತ್ತಾರೆ.

ಇಂಥದ್ದೆಲ್ಲ ಸಮಸ್ಯೆ ಎಂದು ತಾಲಿಬಾನಿಗಳಿಗೆ ಅನಿಸುವುದೇ ಇಲ್ಲ. ಜನರ ಸುಖಕ್ಕಿಂತ ಇಸ್ಲಾಂ ರಾಷ್ಟ್ರ ಮರುಸ್ಥಾಪನೆಯಾಗಿದೆ ಎಂಬುದೇ ಅವರಿಗೆ ಸಮಾಧಾನ. ʻನಾವು ಬಡವರಿರಬಹುದು, ಕಷ್ಟದಲ್ಲಿರಬಹುದು. ಆದರೆ ಅಫಘಾನಿಸ್ತಾನದಲ್ಲಿ ಇಸ್ಲಾಂ ಧ್ವಜ ಹಾರಾಡುತ್ತಿದೆ ಎಂಬುದೇ ಖುಷಿʼ ಎನ್ನುತ್ತಾನೆ ಕಾಬೂಲ್‌ನ ಒಬ್ಬ ತಾಲಿಬಾನಿ. ಒಂದು ವರ್ಷ ತುಂಬಿರುವ ಈ ಹೊತ್ತಿನಲ್ಲಿ ದೇಶದ ಉಳಿದ್ಯಾವ ಕಷ್ಟವೂ ಅವರ ಕಣ್ಣಿಗೆ ಕಾಣುತ್ತಲೇ ಇಲ್ಲ.

ತಾಲಿಬಾನಿಗಳ ಕಪಿಮುಷ್ಟಿಯಿಂದ ಮುಕ್ತಿ ಯಾವಾಗ ಎಂದು ಯೋಚಿಸುವಂತಿದೆ ಮಹಿಳೆ ನಿಂತಿರುವ ರೀತಿ.

ಈಗ ಹೇಗಿದೆ ಪರಿಸ್ಥಿತಿ?

ಅಪಾರ ಸಂಖ್ಯೆಯಲ್ಲಿ ದೇಶ ಬಿಡಲು ಜನ ಯತ್ನಿಸಿದ್ದರಿಂದ ಕಳೆದ ವರ್ಷ ಸುದ್ದಿಯಾಗಿದ್ದ ಕಾಬೂಲ್‌ ವಿಮಾನ ನಿಲ್ದಾಣ ಈಗ ಏನೋ ಒಂದು ಸ್ಥಿತಿಯಲ್ಲಿದೆ. ಕೆಲವು ಅಂತಾರಾಷ್ಟ್ರೀಯ ವಿಮಾನಗಳೂ ಅಲ್ಲೀಗ ಸದ್ದು ಮಾಡುತ್ತಿವೆ. ಆದರೆ ವಿದೇಶಿ ವಿಮಾನಯಾನ ಸಂಸ್ಥೆಗಳ ಸಹಕಾರವಿಲ್ಲದೆ ಇಲ್ಲಿ ಹೆಚ್ಚಿನದೇನೂ ನಡೆಯುವುದಿಲ್ಲ. ವಿಮಾನ ಹಾರಾಟದ ತಾಂತ್ರಿಕ ಮತ್ತು ಭದ್ರತಾ ವ್ಯವಸ್ಥೆಗಳನ್ನು ನಿರ್ವಹಿಸಲು ಅಬುಧಾಬಿಯ ಸಂಸ್ಥೆಯೊಂದಕ್ಕೆ ತಾಲಿಬಾನ್‌ ನೀಡಿದೆ. ಉಜ್ಬೇಕಿಸ್ತಾನ ಮತ್ತು ಕತಾರ್‌ನಲ್ಲಿ ತರಬೇತಿ ಪಡೆದ ಆಫ್ಘನ್ನರೇ ವಿಮಾನ ಸಂಚಾರ ನಿಯಂತ್ರಣ ನಿರ್ವಹಿಸುತ್ತಿದ್ದಾರೆ. ಅಂತೂ, ಕಾಬೂಲ್‌ ವಿಮಾನ ನಿಲ್ದಾಣ ಸಂಪೂರ್ಣ ಕಾರ್ಯೋನ್ಮುಖವಾಗುವುದು ಅಫಘಾನಿಸ್ತಾನದ ಆರ್ಥಿಕ ಚೇತರಿಕೆಯ ದೃಷ್ಟಿಯಿಂದ ಮಹತ್ವದ್ದು ಎನ್ನಲಾಗುತ್ತಿದೆ.

ಈ ಹಿಂದಿನ ಪ್ರತಿರೋಧ, ತಿಕ್ಕಾಟಗಳು ಈಗ ಇಲ್ಲದೆ, ಗುಂಡಿನ ಮೊರೆತ ಕಡಿಮೆಯಾಗಿರುವುದೇನೋ ನಿಜ. ಆದರೆ ಬಡತನ, ಬರಗಾಲ, ಅಪೌಷ್ಟಿಕತೆ, ನಿರಾಸೆಯ ಬದುಕು ಜನರನ್ನು ಇನ್ನಷ್ಟು ಹತಾಶೆಗೆ ದೂಡುತ್ತಿದೆ. ಹೆರಾಯಿನ್‌, ಅಫೀಮು ಉತ್ಪಾದನೆಗೆ ಮೂಲದ್ರವ್ಯವಾಗಿದ್ದ ಗಸಗಸೆ ಬೆಳೆಯುವುದನ್ನು ತಾಲಿಬಾನ್‌ ನಿಷೇಧಿಸಿದೆ. ಗಸಗಸೆ ಬೆಳೆಯನ್ನು ನಾಶ ಮಾಡುವಂತೆ ಬೆಳೆಗಾರರ ಮೇಲೆ ಒತ್ತಡ ಹೇರಲಾಗುತ್ತಿದೆ. ಆದರೆ ಈ ಉಪಕ್ರಮಗಳ ಸ್ಪಷ್ಟ ಫಲಿತಾಂಶ ಇನ್ನಷ್ಟೇ ಗೋಚರಿಸಬೇಕಿದೆ.

ಇದನ್ನೂ ಓದಿ | ಕಾಬೂಲ್‌ನ ಶಾಲೆಯಲ್ಲಿ ಬಾಂಬ್‌ ಸ್ಫೋಟ, ತಾಲಿಬಾನ್‌ ಧರ್ಮಗುರು ಹಕ್ಕಾನಿ ಸಾವು

Exit mobile version