ನವ ದೆಹಲಿ: ಬಾಲಿವುಡ್ ನಟ ಆಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಭಾರತದಲ್ಲಿ ಬ್ಯಾನ್ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿರುವ ಹಾಗೂ ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚೇನೂ ಸದ್ದು ಮಾಡದಿದ್ದರೂ ಸಿನಿಮಾ ಕುರಿತು ಆಸ್ಕರ್ (Oscar) ಮೆಚ್ಚುಗೆ ವ್ಯಕ್ತಪಡಿಸಿದೆ. ದಿ ಅಕಾಡೆಮಿಯ ಸಾಮಾಜಿಕ ಜಾಲತಾಣದಲ್ಲಿ ಲಾಲ್ ಸಿಂಗ್ ಚಡ್ಡಾ ಕುರಿತು ಶ್ಲಾಘಿಸಲಾಗಿದೆ.
“ವ್ಯಕ್ತಿಯೊಬ್ಬ ತನ್ನ ವಿನಮ್ರತೆ ಹಾಗೂ ಮುಗ್ಧತೆಯಿಂದಲೇ ಹೇಗೆ ಜಗತ್ತನ್ನು ಬದಲಾಯಿಸುತ್ತಾನೆ ಎಂಬ ಕತೆಯನ್ನು ರಾಬರ್ಟ್ ಜೆಮೆಕಿಸ್ ಹಾಗೂ ಎರಿಕ್ ರೋತ್ ಅವರು ಫಾರೆಸ್ಟ್ ಗಂಪ್ ಚಿತ್ರದಲ್ಲಿ ಮನೋಜ್ಞವಾಗಿ ಹೆಣೆದಿದ್ದರು. ಭಾರತದಲ್ಲೂ ಈ ಕತೆಯನ್ನು ಸಾರವನ್ನು ಉತ್ತಮವಾಗಿ ಅಳವಡಿಸಿಕೊಳ್ಳಲಾಗಿದೆ. ಅದ್ವೈತ್ ಚಂದನ್ ಹಾಗೂ ಅತುಲ್ ಕುಲಕರ್ಣಿಯವರ ಲಾಲ್ ಸಿಂಗ್ ಚಡ್ಡಾ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ. ಎಲ್ಲರ ಗಮನ ಸೆಳೆದ ಟಾಮ್ ಹ್ಯಾಂಕ್ಸ್ ಪಾತ್ರವನ್ನು ಆಮಿರ್ ಖಾನ್ ನಿಭಾಯಿಸಿದ್ದಾರೆ” ಎಂದು ದಿ ಅಕಾಡೆಮಿ ಟ್ವೀಟ್ ಮಾಡಿದೆ. ಹಾಗೆಯೇ ಫಾರೆಸ್ಟ್ ಗಂಪ್ ಹಾಗೂ ಲಾಲ್ ಸಿಂಗ್ ಚಡ್ಡಾ ಸಿನಿಮಾದ ದೃಶ್ಯಗಳನ್ನು ಹೋಲಿಸಿ ವಿಡಿಯೊ ಒಂದನ್ನು ಪೋಸ್ಟ್ ಮಾಡಿದೆ.
ಫಾರೆಸ್ಟ್ ಗಂಪ್ 1994ರಲ್ಲಿ ಬಿಡುಗಡೆಯಾದ ಹಾಲಿವುಡ್ ಸಿನಿಮಾ ಆಗಿದ್ದು, ಇದು 13 ಆಸ್ಕರ್ ಅವಾರ್ಡ್ ಪಡೆದಿದೆ. ಇದೇ ಸಿನಿಮಾವನ್ನು ಬಾಲಿವುಡ್‌ಗೆ ರಿಮೇಕ್ ಮಾಡಲಾಗಿದ್ದು, ಆಮಿರ್ ಖಾನ್ ಹಾಗೂ ಕರೀನಾ ಕಪೂರ್ ನಟಿಸಿದ್ದಾರೆ. ಆದರೆ, ದೇಶದಲ್ಲಿ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ನಿಷೇಧಿಸಬೇಕು ಎಂದು ಹಲವೆಡೆ ಪ್ರತಿಭಟನೆ ನಡೆಸಲಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಸಿನಿಮಾ ವಿರುದ್ಧ ಅಭಿಯಾನ ನಡೆಯುತ್ತಿದೆ. ಹಣದ ಗಳಿಕೆಯಲ್ಲೂ ಚಿತ್ರವು ಹಿಂದುಳಿದಿದೆ. ಇಷ್ಟೆಲ್ಲ ನಕಾರಾತ್ಮಕ ಅಂಶಗಳ ಮಧ್ಯೆಯೇ ಸಿನಿಮಾ ಕುರಿತು ಆಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿರುವುದು ಸಿನಿಮಾ ತಂಡಕ್ಕೆ ಸಂತಸ ತಂದಿದೆ.
ಇದನ್ನೂ ಓದಿ | ವಿಸ್ತಾರ Explainer | ಆಮಿರ್ ಖಾನ್‌ನ ಲಾಲ್ ಸಿಂಗ್ ಚಡ್ಡಾಗೆ ಬಾಯ್ಕಾಟ್ ಏಕೆ?