ಲಂಡನ್: ಬ್ರಿಟನ್‌ನ ಹೆಸರಾಂತ ಲೇಖಕ ಹಾಗೂ ಇತಿಹಾಸಕಾರರಾಗಿದ್ದ ಪ್ಯಾಟ್ರಿಕ್ ಫ್ರೆಂಚ್ (Patrick French) ಅವರು ಗುರುವಾರ ನಿಧನರಾಗಿದ್ದಾರೆ. 56 ವರ್ಷದ ಅವರು ಕಳೆದ ನಾಲ್ಕು ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು.
ಭಾರತ ಮತ್ತು ಟಿಬೆಟ್ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಪ್ಯಾಟ್ರಿಕ್ ಅವರು ಭಾರತ ಮತ್ತು ಟಿಬೆಟ್ ಕುರಿತು ಯಂಗ್ ಹಸ್ಬೆಂಡ್, ಲಿಬರ್ಟಿ ಆರ್ ಡೆತ್, ಟಿಬೆಟ್, ಮತ್ತು ದಿ ವರ್ಲ್ಡ್ ಈಸ್ ವಾಟ್ ಇಟ್ ಇಸ್ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದರು.
1966ರಲ್ಲಿ ಇಂಗ್ಲೆಂಡ್‌ನಲ್ಲಿ ಜನಿಸಿದ ಫ್ರೆಂಚ್, 1998ರಲ್ಲಿ ನ್ಯೂಯಾರ್ಕ್‌ನ ಕೆಲಸವೊಂದರ ನಿಮಿತ್ತ ಯುವ ಪತ್ರಕರ್ತರಾಗಿ ಭಾರತಕ್ಕೆ ಆಗಮಿಸಿದ್ದರು. ಪ್ಯಾಟ್ರಿಕ್ ಅವರು ಭಾರತ ಮೂಲದ ಬ್ರಿಟನ್ ಲೇಖಕ ವಿ ಎಸ್ ನೈಪಾಲ್ ಅವರ ಜತೆ ಸ್ನೇಹಿತರಾಗಿದ್ದರು. ನೊಬೆಲ್ ಪ್ರಶಸ್ತಿ ಪಡೆದಿದ್ದ ನೈಪಾಲ್ ಅವರ ಜೀವನ ಚರಿತ್ರೆಯನ್ನೂ ಬರೆದಿದ್ದರು. ನೈಪಾಲ್ ಬಗ್ಗೆ ಬರೆದ ದಿ ವರ್ಲ್ಡ್ ಈಸ್ ವಾಟ್ ಇಟ್ ಈಸ್ ಪುಸ್ತಕಕ್ಕೆ ನ್ಯಾಷನಲ್ ಬುಕ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ ದೊರಕಿದೆ.
ಇದನ್ನೂ ಓದಿ: Kannada Sahitya Parishat: ನಿರ್ಮಲಾ ಎಲಿಗಾರ್ ಅಮಾನತು: ಕಸಾಪ ಅಧ್ಯಕ್ಷ ಜೋಶಿ ವರ್ತನೆಗೆ ಲೇಖಕಿಯರ ಸಂಘ ಖಂಡನೆ
ಪ್ಯಾಟ್ರಿಕ್ ಅವರು 1992ರಲ್ಲಿ ಗ್ರೀನ್ ಪಾರ್ಟಿ ಅಭ್ಯರ್ಥಿಯಾಗಿ ಬ್ರಿಟನ್‌ನ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು. ಪರಿಸರ ಸಂರಕ್ಷಣೆ ಬಗ್ಗೆಯೂ ಅಪಾರ ಕಾಳಜಿ ಹೊಂದಿದ್ದರು. ಬ್ರಿಟನ್‌ನ ಟಿಬೆಟ್ ಬೆಂಬಲ ಗುಂಪಿನ ಕಾರ್ಯಕಾರಿ ಸಮಿತಿಯಲ್ಲೂ ಸದಸ್ಯರಾಗಿದ್ದರು.