Site icon Vistara News

Philippine Ferry Fire: ಸಾಗರದ ಮಧ್ಯೆ ಬೆಂಕಿಯಿಂದ ಹೊತ್ತಿ ಉರಿದ ದೋಣಿ; 31 ಪ್ರಯಾಣಿಕರ ದುರ್ಮರಣ

Philippine ferry fire 31 died and over 200 people rescued

#image_title

ಫಿಲಿಪೈನ್ಸ್​ ದೇಶದ ದಕ್ಷಿಣ ಭಾಗದ ಸಾಗರದಲ್ಲಿ ಸಂಚಾರ ಮಾಡುತ್ತಿದ್ದ, 250 ಕ್ಕೂ ಹೆಚ್ಚು ಪ್ರಯಾಣಿಕರನ್ನೊಳಗೊಂಡ ದೋಣಿ ಬೆಂಕಿ (Philippine Ferry Fire)ಯಿಂದ ಹೊತ್ತಿ ಉರಿದು, ಸುಮಾರು 31 ಮಂದಿ ಮೃತಪಟ್ಟಿದ್ದಾರೆ. ರಾತ್ರಿ ವೇಳೆ ದುರ್ಘಟನೆ ನಡೆದಿದ್ದು, ಅನೇಕ ಪ್ರಯಾಣಿಕರು ಕತ್ತಲಲ್ಲೇ ನೀರಿಗೆ ಹಾರಿ, ಪ್ರಾಣ ಉಳಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಇನ್ನೂ ಕೆಲವರಿಗೆ ಮೈಯಿಗೆಲ್ಲ ಬೆಂಕಿ ಹೊತ್ತಿಕೊಂಡು, ಉರಿ ತಾಳಲಾರದೆ ನೀರಿಗೆ ಧುಮುಕಿದ್ದಾರೆ. ಹೀಗೆ ನೀರಿಗೆ ಜಂಪ್​ ಮಾಡಿದವರನ್ನು, ಅಲ್ಲಿನ ನೌಕಾಪಡೆ ಸಿಬ್ಬಂದಿ, ಕರಾವಳಿ ರಕ್ಷಕ ಪಡೆ ಸಿಬ್ಬಂದಿ, ಸ್ಥಳೀಯ ಮೀನುಗಾರರು ಎಲ್ಲ ಸೇರಿ ರಕ್ಷಣೆ ಮಾಡಿದ್ದಾರೆ. ಸುಮಾರು 200 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಈ ದೋಣಿ ಲೇಡಿ ಮೇರಿ ಜಾಯ್ -3 (Lady Mary Joy 3) ಜಾಂಬೊಂಗಾ ನಗರದ ಮಿಂಡಾನೋ ದ್ವೀಪದಿಂದ, ಸುಲು ಪ್ರಾಂತ್ಯದಲ್ಲಿರುವ ಜೋಲೋ ದ್ವೀಪಕ್ಕೆ ಸಂಚಾರ ಮಾಡುತ್ತಿತ್ತು. ಇದರಲ್ಲಿ 36 ಮಂದಿ ದೋಣಿ ನಿರ್ವಹಣಾ ಸಿಬ್ಬಂದಿಯೇ ಇದ್ದರು. ಮೊದಲ ದೊಡ್ಡದಾಗಿ ಸ್ಫೋಟವುಂಟಾಯಿತು. ಬಳಿಕ ಬೆಂಕಿ ಧಗಧಗನೆ ಹೊತ್ತಿ ಉರಿಯಿತು. 35ಕ್ಕೂ ಹೆಚ್ಚು ಮಂದಿ ತಕ್ಷಣವೇ ನೀರಿಗೆ ಧುಮುಕಿದರು. ರಾತ್ರಿ 11ಗಂಟೆ ಹೊತ್ತಿಗೆ ಈ ಘಟನೆ ನಡೆದಿದ್ದರಿಂದ, ಆ ಸಮಯದಲ್ಲಿ ಪ್ರಯಾಣಿಕರೆಲ್ಲ ನಿದ್ರಿಸುತ್ತಿದ್ದರು. ಕೆಲವರು ಆಗ ತಾನೇ ಮಲಗಿದ್ದರು. ಒಮ್ಮೆಲೇ ಏನಾಯಿತು ಎಂದು ಗೊತ್ತಾಗದೆ ದಿಗಿಲು ಬಿದ್ದರು ಎಂದು ಸ್ಥಳೀಯ ವಿಪತ್ತು ನಿರ್ವಹಣಾ ಅಧಿಕಾರಿ ನಿಕ್ಸನ್ ಅಲೋಂಜೊ ತಿಳಿಸಿದ್ದಾರೆ. ಹಾಗೇ, ರಕ್ಷಣಾ ಕಾರ್ಯಾಚರಣೆ ಶುರು ಮಾಡಿದಾಗ 18 ಶವಗಳು ಸಿಕ್ಕಿದ್ದವು, ಅದೀಗ ದ್ವಿಗುಣಗೊಂಡಿದೆ. ಬಹುತೇಕ ಮೃತದೇಹಗಳು ಸಂಪೂರ್ಣ ಸುಟ್ಟು ಹೋಗಿವೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: Boat tragedy | ಗಂಗಾ ನದಿಯಲ್ಲಿ ದೋಣಿ ಮಗುಚಿ ದುರಂತ, 10 ಮಂದಿ ಕಾರ್ಮಿಕರು ನಾಪತ್ತೆ

ದೋಣಿ ದುರಂತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ

ಹೀಗೆ ಪ್ರಯಾಣಿಕರ ದೋಣಿಯಲ್ಲಿ ಸ್ಫೋಟವಾಗಿ, ಬೆಂಕಿ ಹೊತ್ತಿದ್ದು ಬಸಿಲಾನ್ ಎಂಬ ಪ್ರಾಂತ್ಯದಲ್ಲಿ. ತಕ್ಷಣವೇ ನೌಕಾಪಡೆ, ಕರಾವಳಿ ರಕ್ಷಕ ಪಡೆ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ. ಅಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದ ಹಲವು ಫೋಟೋ, ವಿಡಿಯೊಗಳನ್ನು ಬಸಿಲಾನ್ ಪ್ರಾಂತ್ಯದ ಸರ್ಕಾರವೇ ಸೋಷಿಯಲ್ ಮೀಡಿಯಾಗಳಲ್ಲಿ ಬಿಡುಗಡೆ ಮಾಡಿದೆ. ಹಾಗೇ, ಪ್ರಮುಖ ಮಾಧ್ಯಮಗಳಿಗೂ ನೀಡಿದೆ. ಇಲ್ಲಿ ದೋಣಿ ದುರಂತದಲ್ಲಿ ಸಿಲುಕಿದವರ ರಕ್ಷಣೆಗೆ ಬಸಿಲಾನ್ ಪ್ರಾಂತ್ಯದ ನಿವಾಸಿಗಳೂ ಕೈಜೋಡಿಸಿದ್ದಾರೆ ಎನ್ನಲಾಗಿದೆ. ದೋಣಿಯೂ ಸಂಪೂರ್ಣ ಸುಟ್ಟುಹೋಗಿದೆ ಎಂದು ವರದಿಯಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಫಿಲಿಪೈನ್ಸ್​ನ ರಾಜಧಾನಿ ಮನಿಲಾದ ಪೂರ್ವ ಭಾಗದಲ್ಲಿ 134 ಪ್ರಯಾಣಿಕರನ್ನು ಒಳಗೊಂಡ ದೋಣಿಯೊಂದು ಬೆಂಕಿಗೆ ಆಹುತಿಯಾಗಿತ್ತು. ಅದರಲ್ಲಿ 7 ಮಂದಿ ಮೃತಪಟ್ಟಿದ್ದರು.

Exit mobile version