Site icon Vistara News

Pneumonia Outbreak: ಚೀನಾಗೆ ಪ್ರಯಾಣ ನಿಷೇಧಿಸಲು ಅಮೆರಿಕದ ಅಧ್ಯಕ್ಷ ಬೈಡೆನ್‌ಗೆ ಸೆನೆಟರ್‌ಗಳ ಒತ್ತಾಯ

pneumonia outbreak

ಹೊಸದಿಲ್ಲಿ: ಚೀನಾ ದೇಶದಲ್ಲಿ ವೇಗವಾಗಿ ಹರಡುತ್ತಿರುವ ನ್ಯುಮೋನಿಯಾ (Pneumonia Outbreak) ಹಾಗೂ ನಿಗೂಢ ಉಸಿರಾಟದ ಕಾಯಿಲೆಯ (Mystery Illness) ಬಗ್ಗೆ ಪೂರ್ಣ ಮಾಹಿತಿ ದೊರೆಯುವವರೆಗೆ ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ನಡುವಿನ ಪ್ರಯಾಣವನ್ನು ನಿಷೇಧಿಸುವಂತೆ ಮಾರ್ಕೊ ರೂಬಿಯೊ ನೇತೃತ್ವದ ರಿಪಬ್ಲಿಕನ್ ಸೆನೆಟರ್‌ಗಳ ಗುಂಪು ಅಧ್ಯಕ್ಷ ಜೋ ಬೈಡೆನ್‌ಗೆ (Joe Biden) ಪತ್ರ ಬರೆದಿದೆ.

ಮಕ್ಕಳಲ್ಲಿ ಉಸಿರಾಟದ ಕಾಯಿಲೆಗಳು ಮತ್ತು ನ್ಯುಮೋನಿಯಾ ಕ್ಲಸ್ಟರ್‌ಗಳ ಇತ್ತೀಚಿನ ಹೆಚ್ಚಳದ ಕುರಿತು ಸಮಗ್ರ ಮಾಹಿತಿಯನ್ನು ಒದಗಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ (WHO) ಚೀನಾವನ್ನು ವಿನಂತಿಸಿದೆ.

“ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ (PRC) ಎಲ್ಲೆಡೆ ಹರಡುತ್ತಿರುವ ಅಜ್ಞಾತ ಉಸಿರಾಟದ ಕಾಯಿಲೆಯ ಹಿನ್ನೆಲೆಯಲ್ಲಿ, ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ನಡುವಿನ ಪ್ರಯಾಣವನ್ನು ತಕ್ಷಣವೇ ನಿರ್ಬಂಧಿಸಲು ನಾವು ನಿಮ್ಮನ್ನು ಕೇಳುತ್ತೇವೆ. ಚೀನೀ ಕಮ್ಯುನಿಸ್ಟ್ ಪಕ್ಷ (CCP) ಸಾರ್ವಜನಿಕ ಆರೋಗ್ಯ ಬಿಕ್ಕಟ್ಟುಗಳ ಬಗ್ಗೆ ಸುಳ್ಳು ಹೇಳುವ ಸುದೀರ್ಘ ಇತಿಹಾಸವನ್ನು ಹೊಂದಿದೆ. COVID-19 ಸಾಂಕ್ರಾಮಿಕ ಸಮಯದಲ್ಲಿ, CCPಯ ಅಸ್ಪಷ್ಟತೆ ಮತ್ತು ಪಾರದರ್ಶಕತೆಯ ಕೊರತೆಯು ಅಮೆರಿಕದಿಂದ ರೋಗ ಮತ್ತು ಅದರ ಮೂಲದ ಬಗ್ಗೆ ಮುಖ್ಯವಾಗಿ ಬೇಕಿದ್ದ ಮಾಹಿತಿಯನ್ನು ಕಸಿದುಕೊಂಡಿತು” ಎಂದು ಸೆನೆಟರ್ ರೂಬಿಯೊ, ಜೆಡಿ ವ್ಯಾನ್ಸ್, ರಿಕ್ ಸ್ಕಾಟ್, ಟಾಮಿ ಟ್ಯೂಬರ್ವಿಲ್ಲೆ ಮತ್ತು ಮೈಕ್ ಬ್ರೌನ್ ಅವರ ಪತ್ರದಲ್ಲಿ ಬರೆದಿದ್ದಾರೆ.

ಕೋವಿಡ್ ಸಾಂಕ್ರಾಮಿಕದ ಉದ್ದಕ್ಕೂ, ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಚೀನಾದ ಅಧಿಕಾರಿಗಳು ಪ್ರದರ್ಶಿಸಿದ ಸಹಯೋಗದ ಕೊರತೆಯ ಬಗ್ಗೆ WHO ಪದೇ ಪದೆ ಕಳವಳ ವ್ಯಕ್ತಪಡಿಸಿತ್ತು.

“CCPಗೆ ಡೊಗ್ಗು ಸಲಾಮು ಹಾಕಿದ WHO ಕ್ರಮ ತೆಗೆದುಕೊಳ್ಳುವವರೆಗೆ ನಾವು ಕಾಯಬಾರದು. ನಾವು ಅಮೆರಿಕನ್ನರ ಆರೋಗ್ಯ ಮತ್ತು ನಮ್ಮ ಆರ್ಥಿಕತೆಯನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ನಾವು ಚೀನಾ- ಯುನೈಟೆಡ್ ಸ್ಟೇಟ್ಸ್ ನಡುವಿನ ಪ್ರಯಾಣವನ್ನು ತಕ್ಷಣವೇ ನಿರ್ಬಂಧಿಸಬೇಕು. ಈ ಹೊಸ ಅನಾರೋಗ್ಯದಿಂದ ಉಂಟಾಗುವ ಅಪಾಯಗಳ ಬಗ್ಗೆ ನಮಗೆ ಹೆಚ್ಚು ತಿಳಿಯುವವರೆಗೂ ಚೀನಾ ಮೇಲಿನ ಪ್ರಯಾಣದ ಮೇಲಿನ ನಿಷೇಧವು ನಮ್ಮ ದೇಶವನ್ನು ಸಾವು, ಲಾಕ್‌ಡೌನ್‌ಗಲಿಂದ ರಕ್ಷಿಸಬಹುದು” ಎಂದು ಪತ್ರದಲ್ಲಿ ಬರೆಯಲಾಗಿದೆ.

COVID-19 ಸಾಂಕ್ರಾಮಿಕ ರೋಗದ ಆರಂಭಿಕ ದಿನಗಳಲ್ಲಿ ಚೀನಾದಿಂದ ಯುನೈಟೆಡ್ ಸ್ಟೇಟ್ಸ್‌ಗೆ ಪ್ರಯಾಣವನ್ನು ನಿರ್ಬಂಧಿಸುವ ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ಸೆನೆಟರ್‌ಗಳು ಸಮರ್ಥಿಸಿಕೊಂಡರು. ಅಂದಿನ ಪ್ರಯಾಣ ನಿಷೇಧವು ಅನೇಕರಿಂದ ಟೀಕೆಗಳನ್ನು ಎದುರಿಸಿತ್ತು. ಆದರೂ ಆ ಪ್ರಯಾಣ ನಿಷೇಧ ಸರಿಯಾದ ನಿರ್ಧಾರವಾಗಿತ್ತು ಎಂದು ಸೆನೆಟರ್‌ಗಳು ವಾದಿಸಿದರು. “ಇತಿಹಾಸ ಮತ್ತು ಸಾಮಾನ್ಯ ಜ್ಞಾನವು ಅವರ ನಿರ್ಧಾರ ಸರಿಯಾಗಿದೆ ಎಂದು ತೋರಿಸುತ್ತದೆ” ಎಂದು ಪತ್ರದಲ್ಲಿ ಬರೆಯಲಾಗಿದೆ.

ಚೀನಾದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಉಸಿರಾಟದ ಕಾಯಿಲೆಗಳ ಸುತ್ತಲಿನ ಕಳವಳಗಳನ್ನು ಉದ್ದೇಶಿಸಿ, ಅಲ್ಲಿನ ವಿದೇಶಾಂಗ ಸಚಿವ ವಾಂಗ್ ಯಿ ಸ್ಪಷ್ಟನೆ ನೀಡಿದ್ದಾರೆ. ಇದು ಪ್ರಚಲಿತ ಜಾಗತಿಕ ಸಮಸ್ಯೆಯಾಗಿದೆ ಮತ್ತು ಚೀನಾದ ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ. “ಇತ್ತೀಚೆಗೆ ನಾವು ಚೀನಾದ ಕೆಲವು ಭಾಗಗಳಲ್ಲಿ ಮಕ್ಕಳಲ್ಲಿ ಕೆಲವು ಫ್ಲೂ ಪ್ರಕರಣಗಳನ್ನು ನೋಡಿದ್ದೇವೆ. ವಾಸ್ತವವಾಗಿ, ಇದು ಅನೇಕ ದೇಶಗಳಲ್ಲಿ ಬಹಳ ಸಾಮಾನ್ಯವಾದ ವಿದ್ಯಮಾನವಾಗಿದೆ ಮತ್ತು ಚೀನಾದಲ್ಲಿ ಪರಿಣಾಮಕಾರಿ ನಿಯಂತ್ರಣಕ್ಕೆ ಒಳಪಟ್ಟಿದೆ” ಎಂದು ವಾಂಗ್ ಹೇಳಿದ್ದಾರೆ.

ಇದನ್ನೂ ಓದಿ: ಚೀನಾದಲ್ಲಿ ನಿಗೂಢ ನ್ಯುಮೋನಿಯಾ; ಆಸ್ಪತ್ರೆಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲು ರಾಜ್ಯಗಳಿಗೆ ಸೂಚನೆ

Exit mobile version