Site icon Vistara News

ಪೋರ್ಚುಗಲ್​​ನಲ್ಲಿ ಮೃತಪಟ್ಟ ಭಾರತದ ಗರ್ಭಿಣಿ; ಕೆಲವೇ ಹೊತ್ತಲ್ಲಿ ಅಲ್ಲಿನ ಆರೋಗ್ಯ ಸಚಿವೆ ರಾಜೀನಾಮೆ

Portugal health minister

ಪೋರ್ಚುಗಲ್​ಗೆ ಪ್ರವಾಸಕ್ಕೆ ಹೋಗಿದ್ದ ಭಾರತದ ಗರ್ಭಿಣಿಯೊಬ್ಬರು ಅಲ್ಲಿಯೇ ಮೃತಪಟ್ಟಿದ್ದಾರೆ. 34 ವರ್ಷದ ಇವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಪೋರ್ಚುಗಲ್​​ನ ಲಿಸ್ಬನ್​​ನಲ್ಲಿದ್ದ ಆಕೆ ಮೊದಲು ಒಂದು ಆಸ್ಪತ್ರೆಗೆ ಹೋದರು. ಆದರೆ ಅಲ್ಲಿ ಹೆರಿಗೆ ವಾರ್ಡ್​​ಗಳೆಲ್ಲ ಪೂರ್ತಿ ತುಂಬಿದ್ದರಿಂದ ದಾಖಲಿಸಿಕೊಳ್ಳಲು ನಿರಾಕರಿಸಲಾಯಿತು. ಆದರೆ ಅಲ್ಲಿಂದ ಮತ್ತೊಂದು ಆಸ್ಪತ್ರೆಗೆ ಕರೆದೊಯ್ದರೂ, ಆಕೆಗೆ ಹೃದಯಸ್ತಂಭನವಾಗಿ ಮೃತಪಟ್ಟಿದ್ದಾರೆ. ಇದೇ ಘಟನೆಯೀಗ ಅಲ್ಲಿನ ಆರೋಗ್ಯ ಸಚಿವೆ ಡಾ ಮಾರ್ಟಾ ಟೆಮಿಡೊ ರಾಜೀನಾಮೆಗೆ ಕಾರಣವಾಗಿದೆ.

ಪೋರ್ಚುಗಲ್​​ನ ಹಲವು ಆಸ್ಪತ್ರೆಗಳ ಈ ಹೆರಿಗೆ ವಾರ್ಡ್​ ಸೇರಿ, ಇನ್ನಿತರ ವೈದ್ಯಕೀಯ ವ್ಯವಸ್ಥೆ ಬಗ್ಗೆ ಹಲವು ತಿಂಗಳುಗಳಿಂದಲೂ ಅಪಸ್ವರ ಎದ್ದಿದೆ. ಡಾ ಮಾರ್ಟಾ ಟೆಮಿಡೊ 2018ರಿಂದಲೂ ಆರೋಗ್ಯ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೊವಿಡ್ 19 ಸಾಂಕ್ರಾಮಿಕ ಕಾಲವನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಆದರೆ ಆಸ್ಪತ್ರೆಗಳಲ್ಲಿ, ಅದರಲ್ಲೂ ಹೆರಿಗೆ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಉಂಟಾಗಿದೆ. ಗರ್ಭಿಣಿ-ಬಾಣಂತಿಯರ ಚಿಕಿತ್ಸೆ ವಿಳಂಬವಾಗುತ್ತಿದೆ ಎಂಬ ಟೀಕೆ ಇತ್ತೀಚೆಗೆ ಹೆಚ್ಚಾಗಿತ್ತು. ಅಷ್ಟೇ ಅಲ್ಲ, ಕೆಲವು ಹೆರಿಗೆ ಆಸ್ಪತ್ರೆಗಳನ್ನು ಸಿಬ್ಬಂದಿ ಇಲ್ಲದೆ ಮುಚ್ಚಲಾಗಿದೆ. ಗರ್ಭಿಣಿಯರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವಾಗ ಅವರು ಅಪಾಯಕ್ಕೆ ಒಳಗಾಗುವ ಸಾಧ್ಯತೆ ತುಂಬ ಹೆಚ್ಚು ಎಂದು ಅನೇಕರು ಆರೋಪಿಸಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಇದೀಗ ಮೃತಪಟ್ಟ ಭಾರತದ ಮಹಿಳೆಯನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅಲ್ಲಿ ತುರ್ತು ಶಸ್ತ್ರ ಚಿಕಿತ್ಸೆ ಮಾಡಿ ಮಗುವನ್ನು ಜೀವಂತವಾಗಿ ಹೊರಗೆ ತೆಗೆಯಲಾಯಿತಾದರೂ, ಮಹಿಳೆಗೆ ಹೃದಯಸ್ತಂಭನವಾಗಿತ್ತು. ಕೊವಿಡ್​ 19 ಸಂದರ್ಭ ಯಶಸ್ವಿಯಾಗಿ ನಿಭಾಯಿಸಿದ್ದರೂ, ಲಸಿಕಾ ಅಭಿಯಾನವನ್ನು ಅಚ್ಚುಕಟ್ಟಾಗಿ ಮಾಡಿದ್ದರೂ ಈಗ ಹೆರಿಗೆ ಆಸ್ಪತ್ರೆ ಮತ್ತು ಪೋರ್ಚುಗಲ್​ನ ದೊಡ್ಡದೊಡ್ಡ ಆಸ್ಪತ್ರೆಗಳಲ್ಲಿನ ಹೆರಿಗೆ ಘಟಕದ ಅವ್ಯವಸ್ಥೆಗೆ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವೆ ರಾಜೀನಾಮೆ ನೀಡಿದ್ದಾರೆ. ನಮ್ಮಲ್ಲಿನ ಸಚಿವ, ಶಾಸಕರು ಅದೆಷ್ಟೋ ಹಗರಣಗಳು ಸಾಬೀತಾದ ಬಳಿಕವೂ ಅಧಿಕಾರ ಉಳಿಸಿಕೊಳ್ಳಲು ಹೋರಾಡುವಾಗ, ಪೋರ್ಚುಗಲ್​ ಆರೋಗ್ಯ ಸಚಿವೆ ನಡೆ ಸ್ವಲ್ಪ ಮಟ್ಟಿಗೆ ಮಾದರಿ ಎನಿಸಿದೆ.

ಇದನ್ನೂ ಓದಿ: Asia Cup- 2022 | ಶ್ರೀಲಂಕಾ, ಅಫಘಾನಿಸ್ತಾನ ನಡುವೆ ಇಂದು ಮೊದಲ ಹಣಾಹಣಿ

Exit mobile version