Site icon Vistara News

ನ್ಯೂಯಾರ್ಕ್​ ಸಿಟಿಯಲ್ಲಿ ದೀಪಾವಳಿ ಹಬ್ಬಕ್ಕೆ ಶಾಲೆಗಳಿಗೆ ಸಾರ್ವತ್ರಿಕ ರಜೆ; ಬರುವ ವರ್ಷದಿಂದ ನಿಯಮ ಜಾರಿ

Deepavali Festival

ವಾಷಿಂಗ್ಟನ್​: 2023ರಿಂದ ನ್ಯೂಯಾರ್ಕ್​ ಸಿಟಿಯಲ್ಲಿ ದೀಪಾವಳಿ ಹಬ್ಬದಂದು ಶಾಲೆಗಳಿಗೆ ಸಾರ್ವತ್ರಿಕ ರಜೆ ನೀಡಲಾಗುವುದು ಎಂದು ಅಲ್ಲಿನ ಮೇಯರ್​ ಎರಿಕ್​ ಅಡಮ್ಸ್​ ತಿಳಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೀಪಾವಳಿ ಹಬ್ಬದ ಹಿನ್ನೆಲೆ, ಪ್ರಾಮುಖ್ಯತೆ ಬಗ್ಗೆ ನಾನು ಹಲವು ವಿಷಯಗಳನ್ನು ತಿಳಿದುಕೊಂಡಿದ್ದೇನೆ. ಆ ಹಬ್ಬದಂದು ನಾವು ಶಾಲೆಗಳಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡುವುದರಿಂದ ಮಕ್ಕಳೂ ಮನೆಯಲ್ಲಿ ಹಬ್ಬ ಆಚರಿಸಲು ಸಾಧ್ಯವಾಗುತ್ತದೆ. ಅವರಲ್ಲೂ ಹಬ್ಬಗಳ ಮಹತ್ವದ ಅರಿವು ಮೂಡುತ್ತದೆ’ ಎಂದು ಹೇಳಿದ್ದಾರೆ.

‘ದೀಪಾವಳಿ ಹಬ್ಬ ಆಚರಣೆಗೆ ಪ್ರೋತ್ಸಾಹ ಕೊಡುವುದೇ ನಮ್ಮ ಪ್ರಮುಖ ಉದ್ದೇಶ. ನ್ಯೂಯಾರ್ಕ್​ ಸಿಟಿಯಲ್ಲಿ ಅನೇಕರು ಈ ದೀಪಗಳ ಹಬ್ಬವನ್ನು ಆಚರಣೆ ಮಾಡುತ್ತಾರೆ. ಅವರ ಸಂಭ್ರಮದಲ್ಲಿ ನಾವೂ ಜತೆಯಾಗುವ ಜತೆ, ಮಕ್ಕಳಿಗೆ ಹಬ್ಬಗಳ ಪ್ರಾಮುಖ್ಯತೆ ತಿಳಿಸಬೇಕು. ಶೈಕ್ಷಣಿಕವಾಗಿಯೂ ಇದು ಮಹತ್ವ ಪಡೆದಿದೆ. ದೀಪಗಳ ಹಬ್ಬ ದೀಪಾವಳಿ, ನಮ್ಮೊಳಗೂ ಕೂಡ ಬೆಳಕು ಮೂಡಿಸುತ್ತದೆ ಎಂಬುದು ಮಕ್ಕಳಿಗೆ ಅರ್ಥವಾಗಬೇಕು’ ಎಂದೂ ಎರಿಕ್​ ಅಡಮ್ಸ್​ ತಿಳಿಸಿದ್ದಾರೆ.

ನ್ಯೂಯಾರ್ಕ್​ ಸಿಟಿಯಲ್ಲಿ 2023ರಿಂದ ದೀಪಾವಳಿಗೆ ಶಾಲೆಗಳಿಗೆ ರಜೆ ಇರಲಿದೆ ಎಂಬ ವಿಷಯ ಪ್ರಕಟವಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ, ನ್ಯೂಯಾರ್ಕ್​​​ನಲ್ಲಿರುವ ಭಾರತೀಯ ಕಾನ್ಸುಲ್​ ಜನರಲ್​ ರಣಧೀರ್ ಜೈಸ್ವಾಲ್​ ‘ದೀಪಾವಳಿಗೆ ಸಾರ್ವತ್ರಿಕ ರಜಾ ಘೋಷಣೆಯಾಗಬೇಕು ಎಂಬುದು ಅಮೆರಿಕದಲ್ಲಿರುವ ಭಾರತೀಯ ಮೂಲದ ಅನೇಕಾನೇಕರ, ಸುದೀರ್ಘ ಸಮಯದಿಂದಲೂ ಇರುವ ಬೇಡಿಕೆ. ಈಗ ಅದು ನ್ಯೂಯಾರ್ಕ್​ ಸಿಟಿಯಲ್ಲಿ ಈಡೇರಿದೆ. ಈ ಮೂಲಕ ಭಾರತೀಯ ಪರಂಪರೆ, ಸಂಪ್ರದಾಯವನ್ನು ಎಲ್ಲ ವರ್ಗದ ಜನರೂ ಆಚರಿಸಲು ಮುಕ್ತ ಅವಕಾಶ ಸಿಕ್ಕಂತಾಗಿದೆ. ಹಾಗೇ, ವೈವಿಧ್ಯತೆಗೆ ಅರ್ಥ ದೊರೆತಂತಾಯಿತು ಎಂದು ತಿಳಿಸಿದ್ದಾರೆ. ಹಾಗೇ, ಮೇಯರ್​​ಗೆ ಎರಿಕ್​ ಅಡಮ್ಸ್​ಗೆ ಧನ್ಯವಾದ ಸಲ್ಲಿಸಿದ್ದಾರೆ.

ಹಾಗೇ, ಎರಿಕ್​ ನಿರ್ಧಾರದ ಬಗ್ಗೆ ಖುಷಿ ವ್ಯಕ್ತಪಡಿಸಿದ ನ್ಯೂಯಾರ್ಕ್​ ಅಸೆಂಬ್ಲಿ ಸದಸ್ಯೆ ಜೆನಿಫರ್​ ರಾಜಕುಮಾರ್​ ‘ನ್ಯೂಯಾರ್ಕ್​​ನಲ್ಲಿ ಹಿಂದುಗಳು, ಬೌದ್ಧ ಧರ್ಮೀಯರು, ಸಿಖ್​ ಮತ್ತು ಜೈನ ಸಮುದಾಯಕ್ಕೆ ಸೇರಿದ ಸುಮಾರು 200,000 ಜನರು ದೀಪಾವಳಿ ಆಚರಣೆ ಮಾಡುತ್ತಾರೆ. ಇಂಥದ್ದೊಂದು ಹಬ್ಬಕ್ಕೆ ಮನ್ನಣೆ ಸಿಕ್ಕಂತಾಯಿತು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಸ್ತಾರ Explainer | ಸಲ್ಮಾನ್‌ ರಶ್ದಿಗೇಕೆ ಇರಿತ? 6 ತಿಂಗಳಲ್ಲಿ 56 ಬಾರಿ ಮನೆ ಬದಲಿಸಿದ್ದ ಅಜ್ಞಾತವಾಸಿ ಲೇಖಕ

Exit mobile version