ನವ ದೆಹಲಿ: ಭಾರತದಲ್ಲಿ ಕೊವಿಡ್ 19 ನಾಲ್ಕನೇ ಅಲೆ ಬಾರದಂತೆ ತಡೆಯಲು ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಆಯಾ ರಾಜ್ಯಗಳು ಕೊರೊನಾ ತಪಾಸಣೆ, ಪತ್ತೆ, ಚಿಕಿತ್ಸೆ ಹಾಗೂ ಕ್ಷಿಪ್ರವಾಗಿ ಚಿಕಿತ್ಸೆ ನೀಡಲು ಕ್ರಮ ತೆಗೆದುಕೊಳ್ಳಬೇಕು ಕೇಂದ್ರ ಆರೋಗ್ಯ ಸಚಿವರು ಈಗಾಗಲೇ ಸೂಚನೆ ನೀಡಿದ್ದಾರೆ. ಅದರ ಬೆನ್ನಲ್ಲೇ ಈಗ ಇನ್ನೊಂದು ಮಹತ್ವದ ಪ್ರಕಟಣೆಯನ್ನು ಕೇಂದ್ರ ಆರೋಗ್ಯ ಇಲಾಖೆ ಇಂದು ಹೊರಡಿಸಿದೆ.
‘ಚೀನಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ಥೈಲ್ಯಾಂಡ್ ದೇಶಗಳಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ಆರ್ಟಿ-ಪಿಸಿಆರ್ ತಪಾಸಣೆ ಕಡ್ಡಾಯ’ ಎಂದು ಹೇಳಿದೆ. ಈ ಎಲ್ಲ ದೇಶಗಳಲ್ಲಿ ಕೊರೊನಾ ಸೋಂಕು ಮಿತಿಮೀರಿದ್ದರಿಂದ, ಅಲ್ಲಿಂದ ಬರುವ ಪ್ರಯಾಣಿಕರಿಗೆ ಕೊರೊನಾ ತಪಾಸಣೆ ಕಡ್ಡಾಯ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವಿಯ ಹೇಳಿದ್ದಾರೆ . ಹಾಗೇ, ‘ತಪಾಸಣೆ ವೇಳೆ ಯಾರಿಗಾದರೂ ಸೋಂಕು ದೃಢಪಟ್ಟರೆ, ಅವರು ಕ್ವಾರಂಟೈನ್ಗೆ ಒಳಪಡಬೇಕು’ ಎಂದೂ ಅವರು ತಿಳಿಸಿದ್ದಾರೆ.
ಚೀನಾದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿರುವ ಬೆನ್ನಲ್ಲೇ ಭಾರತದಲ್ಲೂ ಸೋಂಕಿಗೆ ಕಡಿವಾಣ ಹಾಕಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವಿಯ ಅವರು ಸಭೆ ನಡೆಸಿ, ದೇಶದಲ್ಲಿನ ಕೊರೊನಾ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ. ಚೀನಾದಲ್ಲಂತೂ ಕೊರೊನಾ ಮಿತಿಮೀರಿದ್ದು, ಈಗಾಗಲೇ ಇಡೀ ದೇಶದ ಶೇ.18ರಷ್ಟು ಜನರಿಗೆ ಕೊರೊನಾ ತಗುಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ದೇಶದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೊನಾ ವೈರಸ್; ಇಂದು 7 ಸಾವಿರಕ್ಕೂ ಅಧಿಕ ಕೇಸ್ ದಾಖಲು