ಕ್ಯಾಲಿಫೋರ್ನಿಯಾ: ಮಾಧ್ಯಮ ಉದ್ಯಮದ ಮೊಘಲ್ ಎಂದೇ ಖ್ಯಾತರಾಗಿರುವ, ಬಿಲಿಯನೇರ್ ರೂಪರ್ಟ್ ಮುರ್ಡೋಕ್ (Rupert Murdoch) ಅವರು ತಮ್ಮ 92ನೇ ವಯಸ್ಸಿನಲ್ಲಿ 5ನೇ ಮದುವೆಯಾಗುತ್ತಿದ್ದಾರೆ. ಈ ಬಗ್ಗೆ ಅವರೇ ಅಧಿಕೃತವಾಗಿ ಘೋಷಿಸಿದ್ದಾರೆ. ಕೀತ್ ರೂಪರ್ಟ್ ಮುರ್ಡೋಕ್ ಅವರು ಹುಟ್ಟಿದ್ದು ಆಸ್ಟ್ರೇಲಿಯಾದಲ್ಲಿ ಆದರೂ, ಬಳಿಕ ಅಮೆರಿಕಕ್ಕೆ ಬಂದು ಉದ್ಯಮ ದಿಗ್ಗಜ ಎನ್ನಿಸಿದರು. ತಮ್ಮ ನ್ಯೂಸ್ ಕಾರ್ಪೋರೇಟ್ ಕಂಪನಿಯ ಮೂಲಕ ವಿಶ್ವದಾದ್ಯಂತ ನೂರಾರು ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಬ್ಲಿಕೇಶನ್ ಮಳಿಗೆಗಳನ್ನು ಸ್ಥಾಪಿಸಿದ್ದಾರೆ. ಎಂಟು ತಿಂಗಳ ಹಿಂದೆಯಷ್ಟೇ ಅವರು ತಮ್ಮ ನಾಲ್ಕನೇ ಪತ್ನಿ, ಮಾಡೆಲ್ ಮತ್ತು ನಟಿ ಜೆರ್ರಿ ಹಾಲ್ಗೆ ವಿಚ್ಛೇದನ ನೀಡಿದ್ದರು.
ಇದೀಗ ರೂಪರ್ಟ್ ಮುರ್ಡೋಕ್ ಅವರು ಆನ್ ಲೆಸ್ಲಿ ಸ್ಮಿತ್ (66)ಅವರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಇವರ ಮೊದಲ ಪತಿ ಚೆಸ್ಟರ್ ಸ್ಮಿತ್ ಗಾಯಕನಾಗಿದ್ದರು. ರೇಡಿಯೋ ಮತ್ತು ಟಿವಿ ಕಾರ್ಯನಿರ್ವಾಹಕರಾಗಿದ್ದರು. ಚೆಸ್ಟರ್ ತೀರಿಕೊಂಡಿದ್ದರಿಂದ ಲೆಸ್ಲಿ ಸ್ಮಿತ್ ಒಂಟಿಯಾಗಿದ್ದರು. ಆಕೆಯನ್ನೀಗ ಈ ಬಿಲಿಯನೇರ್ ಮಾಧ್ಯಮ ಉದ್ಯಮಿ ರೂಪರ್ಟ್ ಮದುವೆಯಾಗುತ್ತಿದ್ದಾರೆ
. ಈ ಬಗ್ಗೆ ರೂಪರ್ಟ್ ಅವರು ನ್ಯೂಯಾರ್ಕ್ ಪೋಸ್ಟ್ಗೆ ಹೇಳಿಕೆ ನೀಡಿ, ‘ನಾನು ತುಂಬ ನರ್ವಸ್ ಆಗಿದ್ದೇನೆ. ನನಗೆ ನಿಜಕ್ಕೂ ಮತ್ತೊಮ್ಮೆ ಪ್ರೀತಿಸಲು ಭಯವಾಯಿತು. ಆದರೂ ಇದು ನನ್ನ ಕೊನೇ ಪ್ರೀತಿ ಎಂದು ನನಗೆ ಗೊತ್ತಿದೆ. ಖಂಡಿತ ಅತ್ಯುತ್ತಮವಾಗಿರುತ್ತದೆ. ನಾನೀಗ ಸಂತೋಷವಾಗಿದ್ದೇನೆ’ ಎಂದಿದ್ದಾರೆ. ಅಂದಹಾಗೇ, ರೂಪರ್ಟ್ ಮತ್ತು ಲೆಸ್ಲಿ ಸ್ಮಿತ್ ಮುಂದಿನ ತಿಂಗಳು ಮದುವೆಯಾಗಲಿದ್ದಾರೆ ಎನ್ನಲಾಗಿದ್ದು ‘ಉಳಿದ ಜೀವನವನ್ನು ನಾವಿಬ್ಬರೂ ಒಟ್ಟಿಗೇ ಕಳೆಯಲು ಇಚ್ಛಿಸುತ್ತೇವೆ’ ಎಂದು ರೂಪರ್ಟ್ ಹೇಳಿಕೊಂಡಿದ್ದಾರೆ. ಇವರಿಬ್ಬರೂ 2022ರ ಸೆಪ್ಟೆಂಬರ್ ತಿಂಗಳಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನಡೆದ ಸಮಾರಂಭವೊಂದರಲ್ಲಿ ಮೊಟ್ಟಮೊದಲು ಭೇಟಿಯಾಗಿದ್ದರು.
ತಮ್ಮ ಮಾಧ್ಯಮ ಉದ್ಯಮವನ್ನು ವಿಶ್ವದ್ಯಾದ್ಯಂತ ವಿಸ್ತರಿಸಿದ್ದಾರೆ ರೂಪರ್ಟ್, ನ್ಯೂಯಾರ್ಕ್ನಲ್ಲಿರುವ ಫಾಕ್ಸ್ನ್ಯೂಸ್ ಮತ್ತು ಯುಕೆಯ ಟ್ಯಾಬ್ಲ್ಯಾಯ್ಡ್ ಮಾಧ್ಯಮ ಸನ್ ಕೂಡ ಇವರ ಒಡೆತನದ್ದೇ. ಅವರು ಈ ಹಿಂದಿನ ಮದುವೆಗಳಿಂದ ಒಟ್ಟು 6 ಮಕ್ಕಳನ್ನು ಹೊಂದಿದ್ದಾರೆ. ಇವರ ಮೊದಲ ಪತ್ನಿ ಹೆಸರು ಪೆಟ್ರೀಷಿಯಾ ಬೂಕರ್, ಇವರು ಆಸ್ಟ್ರೇಲಿಯಾದಲ್ಲಿ ವಿಮಾನ ಪರಿಚಾರಕಿಯಾಗಿದ್ದರು. ಅದಾದ ಬಳಿಕ ಸ್ಕಾಟಿಕ್ ಪತ್ರಕರ್ತೆ ಅನ್ನಾಮನ್ರೊಂದಿಗೆ ಮದುವೆಯಾದರು. ನಂತರ ಅವರಿಗೂ ಡಿವೋರ್ಸ್ ಕೊಟ್ಟು, ಚೀನಾದ ಉದ್ಯಮಿ ವೆಂಡಿ ಡೆಂಗ್ರನ್ನು ವಿವಾಹ ಮಾಡಿಕೊಂಡಿದ್ದರು. ಅವರನ್ನು ಬಿಟ್ಟು ನಟಿ ಜೆರ್ರಿ ಹಾಲ್ರೊಂದಿಗೆ ಜೀವನ ಸಾಗಿಸುತ್ತಿದ್ದರು. ಆದರೆ 8 ತಿಂಗಳ ಹಿಂದೆ ಅವರಿಗೂ ಡಿವೋರ್ಸ್ ಕೊಟ್ಟಿದ್ದರು. 1931ರ ಮಾರ್ಚ್ 11ರಂದು ಜನಿಸಿದ ರೂಪರ್ಟ್ ಮುರ್ಡೋಕ್ ಇದೇ ವರ್ಷ ಮಾ.11ರಂದು ತಮ್ಮ ಜನ್ಮದಿನ ಆಚರಿಸಿಕೊಂಡಿದ್ದಾರೆ. ಅದರ ಬೆನ್ನಲ್ಲೇ ಹೊಸ ಮದುವೆ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: Child Marriage: ಬಾಲ್ಯ ವಿವಾಹ ತಡೆಯಲು 200 ಕೋಟಿ ರೂ. ಮೀಸಲಿಟ್ಟ ಅಸ್ಸಾಂ ಸರ್ಕಾರ!