ನವ ದೆಹಲಿ: ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಇಂದು ಬೆಳಗ್ಗೆ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದಾಗ ಗುಂಡೇಟು ಬಿದ್ದು ಅಸ್ವಸ್ಥರಾಗಿದ್ದಾರೆ. ಅಲ್ಲಿನ ಕಾಲಮಾನದ ಪ್ರಕಾರ ಬೆಳಗ್ಗೆ 11.30ರ ಹೊತ್ತಿಗೆ ಅವರು ಜಪಾನ್‌ನ ಪಶ್ಚಿಮದ ನಗರ ನಾರಾದಲ್ಲಿ ಚುನಾವಣಾ ಭಾಷಣ ಮಾಡುತ್ತಿದ್ದಾಗ ಅವರ ಮೇಲೆ ಫೈರಿಂಗ್ ಆಗಿದೆ. ಶಂಕಿತ ಆರೋಪಿ ತೆಟ್ಸಾಯ ಯಾಮಗಾಮಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಜುಲೈ 10ರಂದು ನಡೆಯಲಿರುವ ಜಪಾನ್ ಮೇಲ್ಮನೆ ಚುನಾವಣೆ ನಿಮಿತ್ತ ನಾರಾದಲ್ಲಿ ಅಬೆ ಪ್ರಚಾರ ನಡೆಸುತ್ತಿದ್ದರು. ಆದರೆ ಅವರ ಮೇಲೆ ಏಕಾಏಕಿ ಗುಂಡಿನ ದಾಳಿ ಆಗಿದೆ. ಈ ಗುಂಡಿನ ದಾಳಿ ಆಗಿದ್ದೇಕೆ?, ಸದ್ಯ ಅಬೆ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಈಗ ಬಂಧಿತನಾಗಿರುವ ಶಂಕಿತ ಶೂಟರ್ ಮತ್ತು ಆತ ಫೈರಿಂಗ್ ನಡೆಸಿದ ಸ್ವರೂಪದ ಬಗ್ಗೆ ಇಲ್ಲೊಂದಿಷ್ಟು ಆಸಕ್ತಿದಾಯಕ ವಿವರ ಸಿಕ್ಕಿದೆ.
೧. ಶಂಕಿತ ಶೂಟರ್ ತೆಟ್ಸಾಯ ಯಾಮಗಾಮಿ ಮಾಜಿ ಯೋಧ ಎಂದು ಹೇಳಲಾಗಿದೆ. ಈತ ಜಪಾನ್ ಕಡಲ ಸ್ವಯಂ ರಕ್ಷಣಾ ಪಡೆಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು 2005ರಲ್ಲಿ ಈ ಸ್ವಯಂ ರಕ್ಷಣಾ ಪಡೆಯನ್ನು ತೊರೆದಿದ್ದಾನೆ.
೨. ಶೂಟರ್ ಶಿಂಜೊ ಅಬೆಯವರಿಗೆ ಹಿಂದಿನಿಂದ ಗುಂಡು ಹೊಡೆದಿದ್ದಾನೆ. ಅದರಲ್ಲಿ ಒಂದು ಗುಂಡು ಅಬೆಯವರ ಎಡ ಎದೆಯಲ್ಲಿ ಸಿಲುಕಿದ್ದರೆ, ಇನ್ನೊಂದು ಗುಂಡು ಕುತ್ತಿಗೆಗೆ ಬಿದ್ದಿದೆ.
೩. ಮಾಜಿ ಪ್ರಧಾನಿಗೆ ಗುಂಡು ಹಾರಿಸಲು ತೆಟ್ಸಾಯ್ ಯಾಮಗಾಮಿ ಬಳಸಿದ್ದು ಒಂದು ಹೋಮ್ ಮೇಡ್ ಗನ್. ಅದನ್ನೂ ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.
೪. ದೇಹಕ್ಕೆ ಗುಂಡು ತಗುಲುತ್ತಿದ್ದಂತೆ ಶಿಂಜೊ ಅಬೆಗೆ ರಕ್ತಸ್ರಾವ ಆಗಿ, ಅವರು ಕೆಳಕ್ಕೆ ಬಿದ್ದಿದ್ದಾರೆ. ಪ್ರಾಥಮಿಕವಾಗಿ ಅವರಿಗೆ ಸಿಪಿಆರ್ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶಿಂಜೊ ಅಬೆಗೆ ೬೭ವರ್ಷ. ಇವರು ಜಪಾನ್ ಲಿಬರಲ್ ಡೆಮಾಕ್ರಟಿಕ್ ಪಾರ್ಟಿಯ ರಾಜಕಾರಣಿ. ಜಪಾನ್ ಪ್ರಧಾನಮಂತ್ರಿ ಹುದ್ದೆಯಲ್ಲಿ ಅತಿ ಹೆಚ್ಚು ಅವಧಿಯವರೆಗೆ ಆಡಳಿತ ನಡೆಸಿದವರು. 2006ರಲ್ಲಿ ಒಂದು ಬಾರಿ ಪ್ರಧಾನಿಯಾಗಿದ್ದರು. ಅದಾದ ಮೇಲೆ 2012ರಿಂದ 2020ರವರೆಗೆ ಪ್ರಧಾನಿಯಾಗಿದ್ದರು. 2020ರಲ್ಲಿ ಅಬೆ ಕರುಳು ಸಂಬಂಧಿ ಕಾಯಿಲೆಯಿಂದ ತೀವ್ರ ಸಮಸ್ಯೆ ಎದುರಿಸಿ, ಅಧಿಕಾರ ಬಿಟ್ಟಿದ್ದರು.
ಇದನ್ನೂ ಓದಿ: ಶಿಂಜೊ ಅಬೆ ಭಾಷಣ ಮಾಡುತ್ತಿದ್ದಾಗಲೇ ಬಿತ್ತು ಗುಂಡೇಟು; ಘಟನಾ ಸ್ಥಳದ ವಿಡಿಯೋ ವೈರಲ್