Site icon Vistara News

ಗುರುದ್ವಾರಗಳಲ್ಲಿ ಗುಂಡಿನ ದಾಳಿ; 17 ಸಿಖ್ಖರನ್ನು ಬಂಧಿಸಿದ ಅಮೆರಿಕ ಪೊಲೀಸ್

Shooting at Gurudwaras; 17 sikhs arrested by US agencies

ವಾಷಿಂಗ್ಟನ್, ಅಮೆರಿಕ: ಎರಡು ಗುರುದ್ವಾರಗಳಲ್ಲಿ ಗುಂಡಿನ ದಾಳಿಗಳು ಸೇರಿದಂತೆ ಕ್ಯಾಲಿಫೋರ್ನಿಯಾದಲ್ಲಿ ತಿಂಗಳ ಹಿಂದೆ ನಡೆದಿದ್ದ ಸಿಖ್ ಗುಂಪುಗಳ ನಡುವಿನ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 17 ಜನರನ್ನು ಬಂಧಿಸಲಾಗಿದೆ. ಈ ಪೈಕಿ ಬಹುತೇಕರು ಸಿಖ್ಖರಾಗಿದ್ದಾರೆ. ಬಂಧಿತರಿಂದ ಅತ್ಯಾಧುನಿಕ ಆಯುಧಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಮೆರಿಕದ ಕಾನೂನು ಜಾರಿ ಅಧಿಕಾರಿಗಳು ತಿಳಿಸಿದ್ದಾರೆ(Shooting at Gurdwara).

ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಸಕ್ರಿಯವಾಗಿರುವ ಈ ಅಪರಾಧಿಗಳ ಸಿಂಡಿಕೇಟ್ ಕುರಿತು ಬಹು ಭದ್ರತಾ ಸಂಸ್ಥೆಗಳು ತನಿಖೆಯನ್ನು ಕೈಗೊಂಡಿದ್ದವು. ಅನೇಕ ಹಿಂಸಾಚಾರ ಅಪರಾಧಗಳು ಮತ್ತು ಶೂಟಿಂಗ್ಸ್, ಐದು ಕೊಲೆ ಯತ್ನ ಪ್ರಕರಣಗಳಲ್ಲಿ ಈ ಗುಂಪುಗಳು ಭಾಗಿಯಾಗಿದ್ದವು ಎಂದು ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ರಾಬ್ ಬೋಂತಾ ಮತ್ತು ಯುಬಾ ಸಿಟಿ ಪೊಲೀಸ್ ಮುಖ್ಯಸ್ಥ ಬ್ರೈನ್ ಬೇಕರ್ ಅವರು ತಿಳಿಸಿದ್ದಾರೆ.

ಬಂಧಿತರು, 2022ರ ಆಗಸ್ಟ್ 27ರಂದು ಸ್ಟಾಕ್ಟಾನ್ ಗುರುದ್ವಾರದಲ್ಲಿ ನಡೆದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಅಲ್ಲದೇ, 2023ರ ಮಾರ್ಚ್ 23ರಂದು ಸಂಕ್ರಾಮೆಂಟೊ ಗುರುದ್ವಾರದಲ್ಲಿ ಸಂಭವಿಸಿದ ಗುಂಡಿನ ದಾಳಿಯಲ್ಲೂ ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತನಿಖೆ ವೇಳೆ, ಸಂಭಾವ್ಯ ಎರಡು ಗುಂಡಿನ ದಾಳಿಗಳನ್ನು ತಪ್ಪಿಸಿರುವುದಾಗಿ ಕಾನೂನು ಜಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಯುಬಾ ಸಿಟಿಯಲ್ಲಿ 2018ರಲ್ಲಿ ನಡೆದ ವಾರ್ಷಿಕ ಸಿಖ್ ಮೆರವಣಿಗೆ ವೇಳೆ ಹಿಂಸಾಚಾರ ಸಂಭವಿಸಿತ್ತು. ಈ ಮೆರವಣಿಗೆಯಲ್ಲಿ ಅಮೆರಿಕದಲ್ಲೇ ಅತಿ ಹೆಚ್ಚು ಸಿಖ್ಖರು ಪಾಲ್ಗೊಳ್ಳುತ್ತಾರೆ. ಅಲ್ಲದೇ, ಯುಬಾ ಸಿಟಿ ಮೇಯರ್ ಸೇರಿದಂತೆ ಹಲವು ಸ್ಥಳೀಯ ಆಡಳಿತದಲ್ಲಿ ಸಿಖ್ಖರಿದ್ದಾರೆ. ಈ ಹಿಂಸಾಚಾರಗಳು ಮೇಲಿಂದ ಮೇಲೆ ನಡೆಯ ತೊಡಗಿದವು. ಇದು 2021ರ ಮದುವೆ ಪಾರ್ಟಿಯ ಮೂಲಕ ಆರಂಭವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Amritpal Singh: ಅಮೃತ್ ಪಾಲ್ ಸಿಂಗ್ ಪೊಲೀಸರಿಗೆ ಶರಣಾಗುವ ಸಾಧ್ಯತೆ! ಗುರುದ್ವಾರಗಳಲ್ಲಿ ಅಡಗಿರುವ ಶಂಕೆ

ಎರಡು ಸಿಖ್ ಗುಂಪುಗಳು ನಡುವಿನ ಈ ಹಿಂಸಾಚಾರ ಮತ್ತು ಗುಂಡಿನ ದಾಳಿಗೆ ಸಂಬಂಧಿಸಿದಂತೆ ಸ್ಥಳೀಯ ನಾರ್ಕೋಟಿಕ್ ಆ್ಯಂಡ್ ಗ್ಯಾಂಗ್ ಎನ್‌ಫೋರ್ಸ್ಮೆಂಟ್ ಟಾಸ್ಕ್ ಫೋರ್ಸ್ ಎಫ್‌ಬಿಐ ನೆರವಿನೊಂದಿಗೆ ತನಿಖೆಯನ್ನು ಆರಂಭಿಸಿತ್ತು. ಡ್ರಗ್ ಎನ್‌ಫೋರ್ಸ್ಮೆಂಟ್ ಅಡ್ಮಿನಿಸ್ಟ್ರೇಷನ್ ಸೇರಿದಂತೆ ಇತರ ಸ್ಥಳೀಯ ಹಾಗೂ ರಾಜ್ಯ ಮಟ್ಟದ ತನಿಖಾ ಸಂಸ್ಥೆಗಳು ಈ ಪ್ರಕರಣದ ತನಿಖೆಗೆ ನೆರವು ಒದಗಿಸಿವೆ.

Exit mobile version