Site icon Vistara News

Death row: 20 ವರ್ಷಗಳಲ್ಲಿ ಮೊದಲ ಬಾರಿಗೆ ಮಹಿಳೆಯನ್ನು ಗಲ್ಲಿಗೇರಿಸಿದ ಸಿಂಗಾಪುರ

singapr death punishment

ಸಿಂಗಾಪುರ: 20 ವರ್ಷಗಳಲ್ಲೇ ಮೊದಲ ಬಾರಿಗೆ, ಸಿಂಗಾಪುರದಲ್ಲಿ ಮಾದಕವಸ್ತು ಮಾರಾಟ ಮಾಡಿದ ಅಪರಾಧಿ ಮಹಿಳೆಯೊಬ್ಬಳಿಗೆ ಮರಣದಂಡನೆ (capital punishment) ವಿಧಿಸಲಾಗಿದೆ.

30 ಗ್ರಾಂ ಮಾದಕವಸ್ತು ಕಳ್ಳಸಾಗಣೆ (drugs case) ಮಾಡಿದ 45 ವರ್ಷದ ಸಿಂಗಾಪುರದ ಪ್ರಜೆ, ಮಹಿಳೆಯಯನ್ನು ಸಿಂಗಾಪುರದಲ್ಲಿ ಶುಕ್ರವಾರ ಗಲ್ಲಿಗೇರಿಸಲಾಯಿತು. ಇದು ಕಳೆದ 20 ವರ್ಷಗಳಲ್ಲಿ ಮಹಿಳೆಯೊಬ್ಬಳಿಗೆ ನೀಡಲಾದ ಮೊದಲ ಮರಣದಂಡನೆ ಶಿಕ್ಷೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರಿದೇವಿ ಬಿಂಟೆ ಜಮಾನಿ ಎಂಬಾಕೆಯೇ ಹೀಗೆ ಮರಣದಂಡನೆಗೆ ಒಳಗಾದವಳು. 30.72 ಗ್ರಾಂ ಹೆರಾಯಿನ್ ಕಳ್ಳಸಾಗಣೆ ಮಾಡುತ್ತಿರುವಾಗ ಈಕೆ ಸಿಕ್ಕಿಬಿದ್ದಿದ್ದಳು. ಸಿಂಗಾಪುರದಲ್ಲಿ 15 ಗ್ರಾಂನಷ್ಟು ಹೆರಾಯಿನ್‌ ಕೊಂಡೊಯ್ದರೂ ಸೀದಾ ಗಲ್ಲಿಗೇ ಹಾಕಲಾಗುತ್ತದೆ. ಈಕೆ ಕೊಂಡೊಯ್ದದ್ದು ಮರಣದಂಡನೆಗೆ ಅರ್ಹವಾದ ಪರಿಮಾಣಕ್ಕಿಂತ ಎರಡು ಪಟ್ಟು ಹೆಚ್ಚಿತ್ತು.

2018ರಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಜಮಾನಿ ಪರ ಸಾಕಷ್ಟು ಕಾನೂನು ಹೋರಾಟದ ಪ್ರಕ್ರಿಯೆ ನಡೆದಿತ್ತು. ಶಿಕ್ಷೆಯ ವಿರುದ್ಧ ಈಕೆ ಮೇಲ್ಮನವಿ ಸಲ್ಲಿಸಿದ್ದಳು. ಮೇಲ್ಮನವಿ ನ್ಯಾಯಾಲಯ 6 ಅಕ್ಟೋಬರ್ 2022ರಂದು ಅವಳ ಮನವಿಯನ್ನು ವಜಾಗೊಳಿಸಿತ್ತು. ಅಧ್ಯಕ್ಷೀಯ ಕ್ಷಮಾದಾನವೂ ಸಿಕ್ಕಿರಲಿಲ್ಲ. ಮರಣದಂಡನೆಯು ಅಪರಾಧದ ಪ್ರಮಾಣ ಇಳಿಕೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಆದ್ದರಿಂದ ಅದನ್ನು ಕೈಬಿಡಬೇಕು ಎಂದು ಮಾನವ ಹಕ್ಕುಗಳ ಗುಂಪುಗಳು ಆಗ್ರಹಿಸುತ್ತಿದ್ದರೂ ಮರಣದಂಡನೆ ಜಾರಿ ಮಾಡಲಾಗಿದೆ.

ಮಾದಕವಸ್ತು ಕಳ್ಳಸಾಗಣೆಗಾಗಿ 2004ರಲ್ಲಿ ಯೆನ್ ಮೇ ವೋನ್ ಎಂಬಾಕೆಯನ್ನು ಗಲ್ಲಿಗೇರಿಸಿದ ನಂತರ, ಈಕೆಯೇ ಇಲ್ಲಿ ಗಲ್ಲಿಗೇರಿಸಲ್ಪಟ್ಟ ಮೊದಲ ಮಹಿಳೆ. ಮಾಧ್ಯಮ ವರದಿಗಳ ಪ್ರಕಾರ ಯೆನ್ 36 ವರ್ಷದ ಕೇಶ ವಿನ್ಯಾಸಕಿ. ಕೋವಿಡ್ ಸಾಂಕ್ರಾಮಿಕದ ವೇಳೆ ಗಲ್ಲು ಶಿಕ್ಷೆಗೆ ಎರಡು ವರ್ಷಗಳ ವಿರಾಮ ನೀಡಲಾಗಿತ್ತು. 2022ರಲ್ಲಿ ಸರ್ಕಾರ ಮರಣದಂಡನೆ ಪುನರಾರಂಭಿಸಿದ್ದು, ಜಮಾನಿ ಗಲ್ಲು ಶಿಕ್ಷೆಗೆ ಒಳಗಾದ 15ನೇ ಕೈದಿ. ಬುಧವಾರ, ಸುಮಾರು 50 ಗ್ರಾಂ ಹೆರಾಯಿನ್ ಸಾಗಿಸಿ ಸಿಕ್ಕಿಬಿದ್ದ ಮೊಹಮ್ಮದ್ ಅಜೀಜ್ ಬಿನ್ ಹುಸೇನ್ (57) ಎಂಬಾತನನ್ನು ಗಲ್ಲಿಗೇರಿಸಲಾಗಿತ್ತು. ಇನ್ನೊಬ್ಬನ ಮರಣದಂಡನೆ ಆಗಸ್ಟ್ 3ರಂದು ನಿಗದಿಯಾಗಿದೆ.

ಸಿಂಗಾಪುರ ಜಗತ್ತಿನ ಅತ್ಯಂತ ಕಠಿಣ ಮಾದಕ ದ್ರವ್ಯ ಕಳ್ಳಸಾಗಣೆ ತಡೆ ಕಾನೂನುಗಳನ್ನು ಹೊಂದಿದೆ. ಇಲ್ಲಿ 500 ಗ್ರಾಂಗಿಂತ ಹೆಚ್ಚು ಗಾಂಜಾ ಅಥವಾ 15 ಗ್ರಾಂಗಿಂತ ಹೆಚ್ಚಿನ ಹೆರಾಯಿನ್ ಸಾಗಾಣಿಕೆ ಮಾಡುವವರಿಗೆ ಮರಣದಂಡನೆ ಶಿಕ್ಷೆ ಖಚಿತ.

ಇದನ್ನೂ ಓದಿ: ಉತ್ತರ ಕೊರಿಯಾದ ಇಬ್ಬರು ಹೈಸ್ಕೂಲ್​ ಹುಡುಗರು ನೇಣಿಗೆ; ನೆರೆರಾಷ್ಟ್ರದ ನಾಟಕ ವೀಕ್ಷಿಸಿದ್ದಕ್ಕೆ ಮರಣದಂಡನೆ

Exit mobile version