Site icon Vistara News

ದಕ್ಷಿಣ ಆಫ್ರಿಕಾದ ಪ್ರಭಾವಿ ಉದ್ಯಮಿಗಳಾದ ಭಾರತ ಮೂಲದ ಗುಪ್ತಾ ಸೋದರರು ಯುಎಇಯಲ್ಲಿ ಅರೆಸ್ಟ್‌ !

Gupta Brothers Arrested

ನವದೆಹಲಿ: ಮೂಲತಃ ಭಾರತದವರಾಗಿ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದ ಉದ್ಯಮಿಗಳಾದ ಗುಪ್ತಾ ಸಹೋದರರನ್ನು ಯುಎಇಯಲ್ಲಿ ಬಂಧಿಸಲಾಗಿದೆ (Gupta Brothers Arrested). ರಾಜೇಶ್‌ ಗುಪ್ತಾ ಮತ್ತು ಅತುಲ್‌ ಗುಪ್ತಾ ಬಂಧಿತರಾಗಿದ್ದು, ಇವರಿಬ್ಬರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ಇವರಿಬ್ಬರನ್ನೂ ಯುಎಇಯಿಂದ ದಕ್ಷಿಣ ಆಫ್ರಿಕಾಕ್ಕೆ ಕಳಿಸುವ ಸಂಬಂಧ ಮಾತುಕತೆ ನಡೆಯುತ್ತಿದೆ ಎಂದು ದಕ್ಷಿಣ ಆಫ್ರಿಕಾ ಸರ್ಕಾರದ ಮೂಲಗಳು ತಿಳಿಸಿವೆ. ಇವರಿಬ್ಬರೂ ಉತ್ತರ ಪ್ರದೇಶದ ಸಹರಾನ್‌ಪುರದವರು. ಇವರಲ್ಲಿ ಅತುಲ್‌ ಗುಪ್ತಾ ದಕ್ಷಿಣ ಆಫ್ರಿಕಾದ ಏಳನೇ ಶ್ರೀಮಂತ ಎಂದೂ ಹೇಳಲಾಗಿತ್ತು. ಸಹೋದರರು ಇಬ್ಬರೂ ಸೌತ್‌ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾರಿಗೆ ಆಪ್ತರಾಗಿದ್ದರು. ಇದೇ ಆತ್ಮೀಯತೆಯನ್ನು ದುರುಪಯೋಗ ಪಡಿಸಿಕೊಂಡು ಅನ್ಯಾಯ ಮಾರ್ಗದಲ್ಲಿ ಆರ್ಥಿಕ ಲಾಭ ಮಾಡಿಕೊಂಡಿದ್ದಾರೆ. ಸರ್ಕಾರಿ ಅಧಿಕಾರಿಗಳ ನೇಮಕಾತಿ ವಿಷಯದಲ್ಲೂ ಪ್ರಭಾವ ಬೀರಿದ್ದಾರೆ ಎಂಬ ಆರೋಪ ಇತ್ತು.

ಗುಪ್ತಾ ಕುಟುಂಬ 1993ರಲ್ಲಿ ಭಾರತದಿಂದ ದಕ್ಷಿಣ ಆಫ್ರಿಕಾಕಕ್ಕೆ ತೆರಳಿ ಅಲ್ಲೇ ನೆಲೆಸಿದೆ. ಈ ಸಹೋದರರ ವಿರುದ್ಧ ಭಾರತದಲ್ಲೂ ಕೂಡ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದ್ದು, 2018ರಲ್ಲಿ ಇಲ್ಲಿನ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುಪ್ತಾ ಬ್ರದರ್ಸ್‌ಗೆ ಸೇರಿದ ಹಲವು ಸ್ಥಳಗಳ ಮೇಲೆ ದಾಳಿ ಮಾಡಿದ್ದರು. ದೆಹಲಿಯಲ್ಲಿದ್ದ ಅವರ ಕಂಪನಿಯ ಮೇಲೆ ಕೂಡ ಐಟಿ ರೇಡ್‌ ಆಗಿತ್ತು. ದಕ್ಷಿಣ ಆಫ್ರಿಕಾಕ್ಕೆ ಹೋದ ಗುಪ್ತಾ ಸಹೋದರರು ಅಲ್ಲಿಯೂ ಹಣಗಳಿಕೆಗಾಗಿ ಅಕ್ರಮ ಮಾರ್ಗವನ್ನೇ ಆಯ್ದುಕೊಂಡಿದ್ದಾರೆ. ಸರ್ಕಾರಕ್ಕೆ ಸಂಬಂಧಪಟ್ಟ ಪ್ರಮುಖ ಗುತ್ತಿಗೆಗಳು ತಮ್ಮ ಕೈತಪ್ಪದಂತೆ ನೋಡಿಕೊಳ್ಳಲು ಲಂಚವನ್ನೂ ನೀಡಿದ್ದಾರೆ ಎಂಬ ಆರೋಪ ಇದೆ. ದಕ್ಷಿಣ ಆಫ್ರಿಕಾದಲ್ಲೂ ಇವರ ವಿರುದ್ಧ 2018ರಿಂದ ನ್ಯಾಯಾಂಗ ತನಿಖೆ ಪ್ರಾರಂಭವಾಗಿದ್ದು, ಅದೇ ವರ್ಷ ಗುಪ್ತಾ ಸಹೋದರರು ಅಲ್ಲಿಂದ ಯುಎಇಗೆ ಹೋಗಿ ನೆಲೆಸಿದ್ದರು.

ರಾಜೇಶ್‌ ಗುಪ್ತಾ ಮತ್ತು ಅತುಲ್‌ ಗುಪ್ತಾ ದಕ್ಷಿಣ ಆಫ್ರಿಕಾದ ಅಂದಿನ ಅಧ್ಯಕ್ಷ ಜಾಕೋಬ್‌ ಜುಮಾರೊಂದಿಗೆ ಅತ್ಯುತ್ತಮ ಸ್ನೇಹ ಹೊಂದಿದ್ದರು. ಜುಮಾ 2009 ರಿಂದ ಅಧ್ಯಕ್ಷ ಸ್ಥಾನದಲ್ಲಿ ಇದ್ದರು. ಇವರೊಂದಿಗೆ ಇದ್ದ ಸ್ನೇಹವನ್ನು ಗುಪ್ತಾ ಸಹೋದರರು ತಮಗೆ ಲಾಭವಾಗುವಂತೆ ಬಳಸಿಕೊಂಡರು. ಜಾಕೋಬ್‌ ಜುಮಾರ ಆರು ಪತ್ನಿಯರಲ್ಲಿ ಒಬ್ಬರು ಇವರ ಕಂಪನಿಯಲ್ಲಿ ದೊಡ್ಡ ಸ್ಥಾನದಲ್ಲಿದ್ದರು. ಅಷ್ಟೇ ಅಲ್ಲ, ಒಬ್ಬ ಪುತ್ರ ಮತ್ತು ಒಬ್ಬಳು ಮಗಳಿಗೂ ಗುಪ್ತಾ ಸಹೋದರರು ಕೆಲಸ ಕೊಟ್ಟಿದ್ದರು. 2018ರಲ್ಲಿ ಭ್ರಷ್ಟಾಚಾರ ಪ್ರಕರಣದ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದಾಗ ಇವರ ಅಧಿಕಾರವೂ ಹೋಗಿದೆ. ಸೋದರರಿಬ್ಬರೂ ಪಲಾಯನ ಮಾಡಿದ್ದರು.

ಇದನ್ನೂ ಓದಿ: T20 Series | ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ವಿಶ್ವ ದಾಖಲೆ ಬರೆಯುತ್ತಾ?

Exit mobile version