ಕೊಲಂಬೊ: ಶ್ರೀಲಂಕಾದಲ್ಲಿ ಇಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಆರ್ಥಿಕವಾಗಿ ಕುಸಿದ ಶ್ರೀಲಂಕಾದಲ್ಲಿ ಈ ಹಿಂದಿನ ಅಧ್ಯಕ್ಷ ಗೊಟಬಯ ರಾಜಪಕ್ಸ ಅದೆಷ್ಟು ಕೆಟ್ಟದಾಗಿ ಅಧಿಕಾರ ಕಳೆದುಕೊಂಡರು ಎಂಬುದನ್ನು ಇಡೀ ಜಗತ್ತು ನೋಡಿದೆ. ರಾಜಪಕ್ಸ ಈಗ ಸಿಂಗಾಪುರದಲ್ಲಿದ್ದಾರೆ. ಶ್ರೀಲಂಕಾದಿಂದ ಸಿಂಗಾಪುರಕ್ಕೆ ಹಾರುತ್ತಿದ್ದಂತೆ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು, ಸದ್ಯ ಶ್ರೀಲಂಕಾದ ಪ್ರಧಾನಮಂತ್ರಿಯಾಗಿರುವ, ಯುನೈಟೆಡ್ ನೇಶನ್ ಪಾರ್ಟಿ ನಾಯಕ ರನಿಲ್ ವಿಕ್ರಮ ಸಿಂಘೆ ಅವರೇ ಹಂಗಾಮಿ ಅಧ್ಯಕ್ಷರಾಗಿದ್ದಾರೆ. ಇಂದು ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಈ ರನಿಲ್ ವಿಕ್ರಮಸಿಂಘೆ, ಶ್ರೀಲಂಕಾ ಪೊದುಜನ ಪೆರಾಮುನಾ ಪಕ್ಷದ ಬಂಡಾಯ ನಾಯಕ ಡಲ್ಲಾಸ್ ಅಲಹಪ್ಪೆರುಮಾ ಮತ್ತು ಜನತಾ ವಿಮುಕ್ತಿ ಪೆರಮುನೆ ನಾಯಕ ಅನುರ ಡಿಸಾನಾಯಾಕೆ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಈ ಮೂವರಲ್ಲಿ ಮುಂದಿನ ಅಧ್ಯಕ್ಷರಾಗುವವರು ರನಿಲ್ ವಿಕ್ರಮಸಿಂಘೆ ಎಂದೇ ಹೇಳಲಾಗುತ್ತಿದೆ. ಇವರು ಆರು ಬಾರಿ ಶ್ರೀಲಂಕಾ ಪ್ರಧಾನಿಯಾದವರು. ಇನ್ನೊಂದು ವಿಶೇಷವೆಂದರೆ ಎಸ್‌ಎಲ್‌ಪಿಪಿ (ಶ್ರೀಲಂಕಾ ಪೊದುಜನ ಪೆರಾಮುನಾ) ಪಕ್ಷವೂ ಕೂಡ ರನಿಲ್ ಅವರಿಗೇ ಬೆಂಬಲ ಸೂಚಿಸಿದೆ. ಸಮಗಿ ಜನ ಬಲವೇಗಾಯ (Samagi Jana Balawegaya) ಪಕ್ಷದ ನಾಯಕ ಸಜಿತ್ ಪ್ರೇಮದಾಸಾ ಕೂಡ ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ರೇಸ್‌ನಲ್ಲಿದ್ದರು. ಆದರೆ ಮಂಗಳವಾರ ಹಿಂದೆ ಸರಿದಿದ್ದಾರೆ. ತಾವು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೇಗೆ ನಡೆಯುತ್ತದೆ ಚುನಾವಣೆ?
ಶ್ರೀಲಂಕಾದಲ್ಲೂ ಕೂಡ ಅಧ್ಯಕ್ಷೀಯ ಚುನಾವಣೆಯಲ್ಲಿ ಜನಸಾಮಾನ್ಯರು ಮತದಾನ ಮಾಡುವುದಿಲ್ಲ. ಸಂಸತ್ತಿನ ಎಲ್ಲ ಸದಸ್ಯರು ರಹಸ್ಯ ಮತದಾನ ಮಾಡುತ್ತಾರೆ. ತಮ್ಮ ಆದ್ಯತೆ ಯಾರೆಂದು ಬರೆದು ಬ್ಯಾಲೆಟ್ ಬಾಕ್ಸ್‌ನಲ್ಲಿ ಹಾಕುತ್ತಾರೆ. ಒಟ್ಟಾರೆ ಸಂಸದರ ಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಮತ ಪಡೆದವರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಹಾಗೊಮ್ಮೆ ಯಾರೊಬ್ಬರೂ ಬಹುಮತ ಪಡೆಯದೆ ಇದ್ದರೆ, ಮೊದಲ ಹಂತದಲ್ಲಿ ಅತ್ಯಂತ ಕಡಿಮೆ ಮತ ಪಡೆದವರನ್ನು ಸ್ಪರ್ಧೆಯಿಂದ ಹೊರಗಿಡಲಾಗುತ್ತದೆ ಮತ್ತು ಮತದಾರರ ಎರಡನೇ ಆದ್ಯತೆ ಯಾರೆಂದು ಪರಿಗಣಿಸಿ ಅವರಿಗೆ ಬಿದ್ದ ಮತವನ್ನು ಉಳಿದಿಬ್ಬರಿಗೆ ಹಂಚಿಕೆ ಮಾಡಲಾಗುತ್ತದೆ. ಅಧ್ಯಕ್ಷ ಸ್ಥಾನಕ್ಕೆ ಇಬ್ಬರೇ ಸ್ಪರ್ಧಿಸಿದರೆ ಈ ಗೊಂದಲಕ್ಕೆ ಆಸ್ಪದ ಇರುವುದಿಲ್ಲ.
ಇದನ್ನೂ ಓದಿ: Asia cup T20 | ಶ್ರೀಲಂಕಾದಲ್ಲಿ ನಡೆಯುವುದು ಕಷ್ಟ, ಹಾಗಾದರೆ ಮತ್ತೆಲ್ಲಿ?