Site icon Vistara News

ಪರಾರಿಯಾಗುವ ಎರಡನೇ ಪ್ರಯತ್ನವೂ ವ್ಯರ್ಥ; ಶ್ರೀಲಂಕಾದಲ್ಲೇ ಸಿಲುಕಿದ್ದಾರೆ ಅಧ್ಯಕ್ಷ ಗೊಟಬಯ ರಾಜಪಕ್ಸ

Rajapaksa

ಕೊಲಂಬೊ: ಶ್ರೀಲಂಕಾವನ್ನು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿಸಿ, ತಾವೇ ಸ್ವತಃ ಇಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ದೇಶವನ್ನೇ ತೊರೆದಿದ್ದಾರೆ ಎಂದು ಹೇಳಲಾಗಿತ್ತು. ಶನಿವಾರ (ಜುಲೈ 9)ದಿಂದಲೂ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಈ ಮಧ್ಯೆ ಅವರು ನೌಕಾಪಡೆಯ ಹಡಗೊಂದರ ಮೂಲಕ ಶ್ರೀಲಂಕಾದಿಂದ ಪರಾರಿಯಾಗಿದ್ದಾರೆ ಎಂಬ ವರದಿಯೂ ಹೊರಬಿದ್ದಿತ್ತು. ಆದರೆ ಅವರು ಇಂದು (ಜು.12) ಮತ್ತೆ ಸಾರ್ವಜನಿಕರ ಎದುರು ಕಾಣಿಸಿಕೊಂಡಿದ್ದಾರೆ. ಶನಿವಾರ ಪರಾರಿಯಾಗಲು ಸಾಧ್ಯವಾಗದೆ ಶ್ರೀಲಂಕಾದಲ್ಲೇ ಸಿಲುಕಿದ್ದ ಅವರು ಇಂದೂ ಕೂಡ ದೇಶ ಬಿಟ್ಟು ಹೋಗುವ ಪ್ರಯತ್ನ ಮಾಡಿದರು. ಆದರೆ ವಲಸೆ ಅಧಿಕಾರಿಗಳು ಗೊಟಬಯ ಅವರನ್ನು ಇಂದೂ ಕೂಡ ತಡೆದಿದ್ದಾರೆ.

ಶ್ರೀಲಂಕಾ ದೇಶದ ಆರ್ಥಿಕ ಸ್ಥಿತಿ ಹದಗೆಡಲು ರಾಜಪಕ್ಸ ಕುಟುಂಬವೇ ಕಾರಣ ಎಂದು ಅಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶನಿವಾರ ಸಾವಿರಾರು ಪ್ರತಿಭಟನಾಕಾರರು ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಮನೆಗೆ ದಾಂಗುಡಿ ಇಟ್ಟಿದ್ದರು. ಐಷಾರಾಮಿ ಮನೆಯಲ್ಲಿ ಮನಸಿಗೆ ಬಂದಂತೆ ವರ್ತಿಸಿದ್ದರು. ಬೆಡ್‌ಮೇಲೆ ಕುಸ್ತಿಯಾಡಿ, ಈಜುಕೊಳದಲ್ಲಿ ಈಜಿದ್ದರು. ಅಂದು ಮನೆಬಿಟ್ಟ ಅಧ್ಯಕ್ಷರು ಎಲ್ಲಿದ್ದರು ಎಂಬುದು ಇನ್ನೂ ಗೊತ್ತಾಗಿಲ್ಲ.

73 ವರ್ಷದ ಗೊಟಬಯ ರಾಜಪಕ್ಸ ಶ್ರೀಲಂಕಾವನ್ನು ಬಿಟ್ಟು ಭಾರತಕ್ಕೆ ಬರಬಹುದು ಅಥವಾ ಮಾಲ್ಡೀವ್ಸ್‌ಗೆ ಹೋಗಬಹುದು ಎಂದೆಲ್ಲ ವಿಶ್ಲೇಷಿಸಲಾಗಿತ್ತು. ಆದರೆ ಇಂದು ಅವರು ಏರ್‌ಪೋರ್ಟ್‌ಗೆ ಹೋಗಿ, ತಾವು ದುಬೈಗೆ ತೆರಳುವುದಾಗಿ ಹೇಳಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಜುಲೈ 13ರಂದು ರಾಜೀನಾಮೆ ನೀಡುತ್ತೇನೆ. ಶಾಂತಿ-ಸೌಹಾರ್ದಯುತವಾಗಿ ಅಧಿಕಾರ ಹಸ್ತಾಂತ ಮಾಡುತ್ತೇನೆ ಎಂದು ಹೇಳಿರುವ ರಾಜಪಕ್ಸ, ತಾವು ಅಧ್ಯಕ್ಷ ಸ್ಥಾನ ಬಿಡುವುದರೊಳಗೆ ದೇಶ ಬಿಟ್ಟು, ಬಂಧನದಿಂದ ಪಾರಾಗುವ ಯೋಚನೆ ಮಾಡಿದ್ದರು. ಅಂದರೆ ಅಧ್ಯಕ್ಷ ಹುದ್ದೆಯಲ್ಲೇ ಇದ್ದಾಗ ವಿಐಪಿ ಎನ್ನಿಸಿಕೊಳ್ಳುವುದರಿಂದ ಬಂಧನವಾಗುವುದಿಲ್ಲ. ರಾಜೀನಾಮೆ ಕೊಟ್ಟ ತಕ್ಷಣ ಸಾಮಾನ್ಯ ಪ್ರಜೆಯಾಗುವುದರಿಂದ ದೇಶ ಬಿಡದಂತೆ ಅರೆಸ್ಟ್‌ ಮಾಡುವ ಸಾಧ್ಯತೆ ಇರುತ್ತದೆ ಎಂಬುದು ಅವರ ಲೆಕ್ಕಾಚಾರವಾಗಿತ್ತು.

ರಾಜಪಕ್ಸ ಏರ್‌ಪೋರ್ಟ್‌ಗೆ ಹೋಗಿ ಇಂದು ಅವಸರದಲ್ಲಿ ಅಲ್ಲಿಂದ ಹೊರಡುವ ಪ್ರಯತ್ನ ಮಾಡಿದ್ದಾರೆ. ಅವರೇನೇ ಹೇಳಿದರೂ, ಅವರು ವಿಐಪಿಯೇ ಆಗಿದ್ದರೂ ಅಧಿಕಾರಿಗಳು ಪಾಸ್‌ಪೋರ್ಟ್‌ ಅನುಮೋದಿಸಲಿಲ್ಲ. ʼಈಗಾಗಲೇ ಗೊಟಬಯ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ. ಈಗ ನಾವು ಅವರಿಗೆ ವಿದೇಶಕ್ಕೆ ಹಾರಲು ಅವಕಾಶ ಕೊಟ್ಟರೆ ಈ ಕೋಪ ಮತ್ತಷ್ಟು ಹೆಚ್ಚಾಗಬಹುದುʼ ಎಂದು ಏರ್‌ಪೋರ್ಟ್‌ ಆಡಳಿತ ಹೇಳಿದೆ.

ಇದನ್ನೂ ಓದಿ: ಶ್ರೀಲಂಕಾದಲ್ಲಿ ಅಸ್ತಿತ್ವಕ್ಕೆ ಬರಲಿದೆ ಸರ್ವ ಪಕ್ಷಗಳ ಸರ್ಕಾರ; ಜು.20ಕ್ಕೆ ನೂತನ ಅಧ್ಯಕ್ಷರ ಆಯ್ಕೆ

Exit mobile version