ಪಶ್ಚಿಮ ಏಷ್ಯಾದ ದೇಶವಾದ ಯೆಮೆನ್ನ ರಾಜಧಾನಿ ಸನಾದ ಶಾಲೆಯೊಂದರಲ್ಲಿ ಕಾಲ್ತುಳಿತ (Stampede In Yemen) ಉಂಟಾಗಿ 85ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ರಂಜಾನ್ ನಿಮಿತ್ತ ಈ ಶಾಲೆಯಲ್ಲಿ ಬಡಜನರಿಗಾಗಿ ದತ್ತಿ ವಿತರಣೆ (ನೆರವು ನೀಡುವುದು) ಕಾರ್ಯಕ್ರಮ ಆಯೋಜಿಸಲಾಗಿತ್ತು. ಒಬ್ಬರಿಗೆ 5,000 ಯೆಮೆನಿ ರಿಯಾಲ್ಸ್ (ಸುಮಾರು 1600 ರೂಪಾಯಿ) ಜತೆಗೆ ಬಟ್ಟೆ, ಆಹಾರ ಸೇರಿ ಇನ್ನಿತರ ಕೆಲವು ನೆರವು ಸಿಗಲಿದ್ದ ಕಾರಣ ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಆದರೆ ಅಲ್ಲಿ ದುರಂತವೇ ಆಗಿದೆ. 85ಕ್ಕೂ ಹೆಚ್ಚು ಜನ ಸತ್ತಿದ್ದಲ್ಲದೆ, ಇನ್ನೂ ಅನೇಕರು ಗಾಯಗೊಂಡಿದ್ದಾರೆ. ಅವರನ್ನೆಲ್ಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರಲ್ಲೂ 13 ಜನರ ಪರಿಸ್ಥಿತಿ ತುಂಬ ಗಂಭೀರವಾಗಿದೆ ಎಂದು ಅಲ್ಲಿನ ಹೌತಿ ಬಂಡುಕೋರರ ಚಳವಳಿಯ ಅಧಿಕೃತ ಮಾಧ್ಯಮ ಅಲ್ ಮಸಿರಾ ಟಿವಿ ವರದಿ ಮಾಡಿದೆ. ಹಾಗೇ, ಪ್ರತ್ಯಕ್ಷದರ್ಶಿಗಳೂ ಕೂಡ ಕೆಲವು ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ರಂಜಾನ್ ತಿಂಗಳ ಕೊನೇ ದಿನದಂದು ಶಾಲೆಯಲ್ಲಿ ಬಡಜನರಿಗೆ ನೆರವು ನೀಡುವ ಕಾರ್ಯಕ್ರಮವನ್ನು ಇಬ್ಬರು ಮುಸ್ಲಿಂ ಶ್ರೀಮಂತ ವರ್ತಕರು ಆಯೋಜಿಸಿದ್ದರು. ಇದನ್ನು ಝಕಾತ್ ಎನ್ನುತ್ತಾರೆ. ಅಂದರೆ ಮುಸ್ಲಿಂ ಶ್ರೀಮಂತ ವರ್ಗದವರು ರಂಜಾನ್ ತಿಂಗಳಲ್ಲಿ ತಮ್ಮ ಆಸ್ತಿಯ ಒಂದಷ್ಟು ಪಾಲನ್ನು ಬಡವರ್ಗದವರಿಗೆ ಹಣದ ರೂಪದಲ್ಲಿ ಅಥವಾ ಇನ್ಯಾವುದೇ ಅಗತ್ಯ ವಸ್ತುಗಳ ರೂಪದಲ್ಲಿ ಹಂಚುತ್ತಾರೆ. ಅದನ್ನೇ ಸನಾದ ಈ ಶಾಲೆಯಲ್ಲೂ ಹಮ್ಮಿಕೊಳ್ಳಲಾಗಿತ್ತು. ಆದರೆ ವಿಪರೀತ ನೂಕುನುಗ್ಗಲು ಉಂಟಾಗಿ ಕಾಲ್ತುಳಿತವಾಗಿದೆ. ಈ ಕಾಲ್ತುಳಿತ ಮತ್ತು ಇಷ್ಟೊಂದು ಜನರ ಸಾವಿಗೆ ಅವರಿಬ್ಬರೇ ಹೊಣೆ ಎಂದು ಪರಿಗಣಿಸಲಾಗಿದೆ. ಸದ್ಯ ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೌತಿ ಆಂತರಿಕ ಸಚಿವಾಲಯ ತಿಳಿಸಿದೆ.
ಪ್ರತ್ಯಕ್ಷದರ್ಶಿಗಳಾದ ಅಬ್ದೆಲ್ ರೆಹಮಾನ್ ಅಹ್ಮದ್ ಮತ್ತು ಯಾಶಿಯಾ ಮೊಹ್ಸೆನ್ ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ‘ನೆರವು ಪಡೆಯುವ ವೇಳೆ ಉಂಟಾದ ನೂಕುನುಗ್ಗಲು ನಿಯಂತ್ರಿಸಲು ಹೌತಿ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದರು. ಇವರು ಹಾರಿಸಿದ ಗುಂಡು ವಿದ್ಯುತ್ ತಂತಿಗೆ ತಗುಲಿ ಸ್ಫೋಟಗೊಂಡು, ದೊಡ್ಡ ಶಬ್ದವನ್ನೂ ಮಾಡಿತು. ಇದರಿಂದ ಮತ್ತಷ್ಟು ದಿಗಿಲುಗೊಂಡ ಜನರು ಸಿಕ್ಕಸಿಕ್ಕ ಕಡೆ ಓಡಲು ಶುರು ಮಾಡಿದರು. ಅವಘಡ ಜಾಸ್ತಿಯೇ ಆಯಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ: Pakistan Stampede: ಪಾಕಿಸ್ತಾನದಲ್ಲಿ ಆಹಾರಕ್ಕೆ ಹಾಹಾಕಾರ; ರೇಷನ್ ವಿತರಣೆ ವೇಳೆ ಕಾಲ್ತುಳಿತವಾಗಿ 11 ಜನರ ಸಾವು