ಲಂಡನ್: ಯುಕೆ ಪ್ರಧಾನಮಂತ್ರಿಯಾಗಿ ನೇಮಕಗೊಂಡಿರುವ ರಿಷಿ ಸುನಕ್ ಅವರು ಮೊದಲನೇಯದಾಗಿ ತಮ್ಮ ಪಕ್ಷದೊಳಗೆ ಒಗ್ಗಟ್ಟು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಅದರೊಂದಿಗೆ ವಿವಾದವನ್ನೂ ಹುಟ್ಟುಹಾಕಿದ್ದಾರೆ. ಇತ್ತೀಚೆಗಷ್ಟೇ ಗೃಹ ಇಲಾಖೆ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ಸುಯೆಲ್ಲಾ ಬ್ರಾವರ್ಮನ್ ಅವರನ್ನು ಮತ್ತೆ ಅದೇ ಹುದ್ದೆಗೆ ನೇಮಕ ಮಾಡುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬೋರಿಸ್ ಜಾನ್ಸನ್ ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿದು ಲಿಜ್ ಟ್ರಸ್ ಯುಕೆ ಪ್ರಧಾನಿಯಾದ ಬಳಿಕ ಭಾರತೀಯ ಮೂಲದ ಸುಯೆಲ್ಲಾ ಬ್ರಾವರ್ಮನ್ ಅವರನ್ನು ಗೃಹ ಇಲಾಖೆ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದರು. ಆದರೆ ಇ-ಮೇಲ್ ಕಳಿಸುವ ವಿಚಾರದಲ್ಲಿ ಸರ್ಕಾರದ ತಾಂತ್ರಿಕ ನಿಯಮಗಳನ್ನು ಉಲ್ಲಂಘನೆಯಾಗಿದೆ. ಈ ಜವಾಬ್ದಾರಿಯನ್ನು ನಾನು ಹೊರುತ್ತೇನೆ ಎಂದು ಹೇಳಿ ಅವರು ರಾಜೀನಾಮೆ ಕೊಟ್ಟಿದ್ದರು. ಹಾಗೇ, ಲಿಜ್ ಟ್ರಸ್ ಅವರ ಆರ್ಥಿಕ ನೀತಿಯನ್ನು ಟೀಕಿಸಿದ್ದರು. ಬೋರಿಸ್ ಜಾನ್ಸನ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಾಗ, ಆ ಹುದ್ದೆಗೆ ನಡೆದ ಚುನಾವಣೆಯಲ್ಲಿ ಲಿಜ್ ಟ್ರಸ್ ಮತ್ತು ರಿಷಿ ಸುನಕ್ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಆಗ ಸುಯೆಲ್ಲಾ ಅವರು ರಿಷಿ ಸುನಕ್ರನ್ನು ಬೆಂಬಲಿಸಿದ್ದರು. ‘ನಮಗೆ ಬೇಕಾಗಿರುವುದು ಒಗ್ಗಟ್ಟು, ಸ್ಥಿರತೆ ಮತ್ತು ದಕ್ಷತೆ. ಇದೆಲ್ಲ ಸಾಧ್ಯವಾಗುವುದು ಅದು ರಿಷಿ ಸುನಕ್ ಒಬ್ಬರಿಂದ ಮಾತ್ರ. ಹಾಗಾಗಿ ಅವರನ್ನು ಬೆಂಬಲಿಸಲು ನನಗೆ ಹೆಮ್ಮೆಯಾಗುತ್ತದೆ’ ಎಂದೂ ಹೇಳಿದ್ದರು.
ಲಿಜ್ ಟ್ರಸ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹುದ್ದೆಯಿಂದ ಹೊರನಡೆದಿದ್ದ ಸುಯೆಲ್ಲಾರನ್ನು ರಿಷಿ ಸುನಕ್ ಮತ್ತೆ ವಾಪಸ್ ಸಂಪುಟಕ್ಕೆ ಸೇರಿಸಿಕೊಂಡಿದ್ದು ಕನ್ಸರ್ವೇಟಿವ್ ಪಕ್ಷ ಸೇರಿ ಇಡೀ ರಾಜಕೀಯ ವಲಯದಲ್ಲಿ ಪ್ರಶ್ನೆ ಮೂಡಿಸಿದೆ. ಗೃಹ ಇಲಾಖೆ ಕಾರ್ಯದಲ್ಲಿ ಭದ್ರತೆ ಉಲ್ಲಂಘನೆ ಆಗಿದೆ ಎಂದು ಸುಯೆಲ್ಲಾರೇ ಒಪ್ಪಿಕೊಂಡಿರುವಾಗ, ಅದು ಹೇಗೆ ಮತ್ತೆ ಅವರನ್ನು ಮರುನೇಮಕ ಮಾಡಿಕೊಳ್ಳಲು ಸಾಧ್ಯ? ಎಂದು ಯುಕೆಯ ಹಲವು ರಾಜಕಾರಣಿಗಳು ಪ್ರಶ್ನಿಸಿದ್ದಾರೆ. ‘ಭದ್ರತೆ ಉಲ್ಲಂಘನೆ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದ ಸುಯೆಲ್ಲಾರನ್ನು ಮತ್ತೊಮ್ಮೆ ಗೃಹ ಇಲಾಖೆ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡುವುದು ಸಿನಿಕತನ. ಈ ಪ್ರಧಾನಿ ರಿಷಿ ಸುನಕ್ ಅವರು ಕಳೆದ ಎರಡು ಪ್ರಧಾನಿಗಳಿಗಳಷ್ಟೂ ಉತ್ತಮವಾಗಿಲ್ಲ’ ಎಂದು ಲೇಬರರ್ ಪಕ್ಷದ ಸಂಸದ ಕ್ರಿಸ್ ಬ್ರ್ಯಾಂಟ್ ತಿಳಿಸಿದ್ದಾರೆ.
ಇದನ್ನೂ ಓದಿ: Rishi Sunak | ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿಗೆ ಇನ್ಫೋಸಿಸ್‌ನಿಂದ 126.6 ಕೋಟಿ ರೂ. ಡಿವಿಡೆಂಡ್