ಬ್ರಿಟನ್ನಲ್ಲಿ ಬೋರಿಸ್ ಜಾನ್ಸನ್ ಪ್ರಧಾನಿ ಸ್ಥಾನ ಕಳೆದುಕೊಂಡು, ಮತ್ತೆ ಚುನಾವಣೆ ನಡೆದು, ಅದರಲ್ಲಿ ಲಿಜ್ ಟ್ರಸ್ ಅವರು ಗೆದ್ದು ಪ್ರಧಾನಿಯಾಗಿದ್ದರು. ಹೀಗೆ ಲಿಜ್ ಟ್ರಸ್ ಪ್ರಧಾನಮಂತ್ರಿಯಾದ ಬಳಿಕ ಅವರು, ಭಾರತ ಮೂಲದ ಬ್ಯಾರಿಸ್ಟರ್ ಸುಯೆಲ್ಲಾ ಬ್ರಾವರ್ಮನ್ರನ್ನು ಗೃಹ ಇಲಾಖೆ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದರು. ಆದರೆ ಸುಯೆಲ್ಲಾ ಬ್ರಾವರ್ಮನ್ ಈಗ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಲಿಜ್ ಟ್ರಸ್ ತಮ್ಮ ಚುನಾವಣಾ ಪ್ರಣಾಳಿಕೆ ಭರವಸೆಗಳ ತದ್ವಿರುದ್ಧ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಪಕ್ಷದಲ್ಲೇ ಅವರ ಹಲವರು ಬಂಡಾಯ ಪ್ರದರ್ಶನ ಮಾಡುತ್ತಿದ್ದಾರೆ. ಲಿಜ್ ಟ್ರಸ್ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುವುದು ಅನುಮಾನ ಎಂಬ ಮಾತೂ ಕೇಳಿಬರುತ್ತಿದೆ. ಅದರ ಬೆನ್ನಲ್ಲೇ ಒಬ್ಬೊಬ್ಬರೇ ಸರ್ಕಾರದ ಸಂಪುಟ ಬಿಟ್ಟು ಹೊರನಡೆಯುತ್ತಿದ್ದಾರೆ. ಇದೀಗ ಸುಯೆಲ್ಲಾ ತಮ್ಮ ಖಾಸಗಿ ಇಮೇಲ್ನಿಂದ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು, ‘ಗೃಹ ಇಲಾಖೆ ಕಾರ್ಯದರ್ಶಿ ಹುದ್ದೆ ಒಪ್ಪಿಕೊಂಡು ತಪ್ಪು ಮಾಡಿದೆ, ಈಗ ರಾಜೀನಾಮೆ ಕೊಡುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಚುನಾವಣೆಗೂ ಪೂರ್ವ ತೆರಿಗೆ ಕಡಿತ ಮಾಡುವುದಾಗಿ ಹೇಳಿದ್ದ ಲಿಜ್ ಟ್ರಸ್, ಕಳೆದ ತಿಂಗಳು ಆ ನಿರ್ಧಾರವನ್ನು ಹಿಂಪಡೆದಿದ್ದರು. ಆರ್ಥಿಕತೆಗೆ ಸಂಬಂಧಪಟ್ಟ ಹಲವು ವಿಷಯಗಳಲ್ಲಿ ತಮ್ಮ ಭರವಸೆಗಳನ್ನು ಮುರಿದಿದ್ದರು. ಬಜೆಟ್ ವಿಚಾರದಲ್ಲಿ ಅಸಮಾಧಾನ ಮಾಡಿಕೊಂಡು ಹಣಕಾಸು ಸಚಿವ ಕ್ವಾಸಿ ಕ್ವಾರ್ಟೆಂಗ್ ರಾಜೀನಾಮೆ ಕೊಟ್ಟಿದ್ದರು. ಅವರ ಸ್ಥಾನಕ್ಕೆ ಜೆರಿಮಿ ಹಂಟ್ ಅವರನ್ನು ನೇಮಕ ಮಾಡಿದ್ದರು. ಇದೀಗ ಬ್ರಾವರ್ಮನ್ರಿಂದ ತೆರವಾದ ಸ್ಥಾನಕ್ಕೆ ಗ್ರಾಂಟ್ಸ್ ಶಾಪ್ಸ್ರನ್ನು ಟ್ರಸ್ ನೇಮಕ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಬ್ರಿಟನ್ನಲ್ಲಿ ಲಿಜ್ ಟ್ರಸ್ ಸಂಪುಟ ಸೇರಿದ ಭಾರತ ಮೂಲದ ಸುಯೆಲ್ಲಾ ಬ್ರಾವರ್ಮನ್; ಗೃಹ ಕಾರ್ಯದರ್ಶಿಯಾಗಿ ನೇಮಕ