ಟೊರಂಟೊ: ಕೆನಡಾದ ಟೊರಂಟೋದಲ್ಲಿರುವ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ದೇವಸ್ಥಾನದ ಗೋಡೆಗಳ ಮೇಲೆಲ್ಲ ಹಿಂದು ವಿರೋಧಿ ಘೋಷಣೆಗಳನ್ನು ಬರೆಯಲಾಗಿದೆ. ಈ ಮೂಲಕ ದೇವಸ್ಥಾನವನ್ನು ವಿರೂಪಗೊಳಿಸಲಾಗಿದೆ. ‘ದೇಗುಲದ ಎದುರಿನ ಗೇಟ್ನ ಎರಡೂ ಕಡೆ ಹಿಂದೂಸ್ಥಾನ್ ಮುರ್ದಾಬಾದ್ ಎಂದು ಬರೆದಿದ್ದು, ಒಳಗಿನ ಒಂದು ಚಿಕ್ಕ ಗೋಪುರದ ಮೇಲೆ ಖಲಿಸ್ತಾನ್ ಜಿಂದಾಬಾದ್ ಎಂದು ಬರೆಯಲಾಗಿದೆ’. ಕೆನಡಾದಲ್ಲಿರುವ ಖಲಿಸ್ತಾನಿ ಉಗ್ರರು ಎಸಗಿರುವ ಈ ಕೃತ್ಯವನ್ನು ಅಲ್ಲಿನ ಭಾರತೀಯ ಹೈಕಮಿಷನ್ ತೀವ್ರವಾಗಿ ಖಂಡಿಸಿದೆ. ಕೂಡಲೇ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಕೆನಡಾ ಸರ್ಕಾರವನ್ನು ಆಗ್ರಹಿಸಿದೆ.
ಖಲಿಸ್ತಾನಿಗಳ ಈ ದುಷ್ಕೃತ್ಯವನ್ನು ಕೆನಡಾದ ಭಾರತೀಯ ಮೂಲದ ಸಂಸದ ಚಂದ್ರ ಆರ್ಯ ಖಂಡಿಸಿ ಟ್ವೀಟ್ ಮಾಡಿದ್ದಾರೆ. ‘ಹಿಂದು ದೇವಸ್ಥಾನವನ್ನು ಕೆನಡಾದ ಖಲಿಸ್ತಾನಿಗಳು ವಿರೂಪಗೊಳಿಸುತ್ತಿರುವುದು, ಹಿಂದು ದೇವರಿಗೆ ಅವಮಾನ ಮಾಡುತ್ತಿರುವುದು ಇದೇ ಮೊದಲೇನೂ ಅಲ್ಲ. ಈಗ ಶ್ರೀ ಸ್ವಾಮಿನಾರಾಯಣ ಮಂದಿರವನ್ನು ವಿರೂಪ ಮಾಡಿದ್ದಾರೆ. ನಾವೆಲ್ಲರೂ ಇದನ್ನು ಖಂಡಿಸಬೇಕು, ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದ್ದಾರೆ.
ಕೆನಡಾದ ಬ್ರಾಂಪ್ಟನ್ ಸಂಸದೆ ಸೋನಿಯಾ ಸಿಧು ಕೂಡ ಟ್ವೀಟ್ ಮಾಡಿ ಕಳವಳ ವ್ಯಕ್ತಪಡಿಸಿದ್ದಾರೆ. ‘ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಮಂದಿರದಲ್ಲಿ ಖಲಿಸ್ತಾನಿಗಳು ಹಿಂದು ವಿರೋಧಿ ವಾಕ್ಯಗಳನ್ನು ಬರೆದು, ಅವಮಾನಿಸಿದ್ದಾರೆ. ಈ ಘಟನೆ ನನ್ನನ್ನೂ ವಿಚಲಿತಗೊಳಿಸಿದೆ. ಸಾಂಸ್ಕೃತಿಕ ವೈವಿಧ್ಯ ಮತ್ತು ವಿವಿಧ ನಂಬಿಕೆಗಳನ್ನು ಹೊಂದಿರುವ ಜನರ ಮಧ್ಯೆ ನಾವೆಲ್ಲ ಬದುಕುತ್ತಿದ್ದೇವೆ. ಇಲ್ಲಿ ಎಲ್ಲರ ಸಂಸ್ಕೃತಿ, ಸಂಪ್ರದಾಯ, ನಂಬಿಕೆಗಳೂ ರಕ್ಷಣೆಯಾಗಬೇಕು. ಇದೀಗ ಮಂದಿರ ವಿರೂಪಗೊಳಿಸಿದವರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಹೇಳಿದ್ದಾರೆ.
ದೇಗುಲ ವಿರೂಪಗೊಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅದನ್ನು ಕೆನಡಾದಲ್ಲಿರುವ ಭಾರತೀಯ ಮೂಲದವರು, ಭಾರತೀಯರು ವಿರೋಧಿಸಿದ್ದಾರೆ. ಕೆನಡಾದಲ್ಲಿ ಖಲಿಸ್ತಾನಿಗಳ ಹಾವಳಿ ಹೊಸದಲ್ಲ. ಹಿಂದು ದೇಗುಲಗಳನ್ನು, ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಮೆರವಣಿಗೆಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡುತ್ತಲೇ ಇರುತ್ತಾರೆ.
ಇದನ್ನೂ ಓದಿ: Independence Day | ಭಾರತೀಯರ ಭದ್ರತೆ ಆದ್ಯತೆಯಾಗಲಿ; ಕೆನಡಾಕ್ಕೆ ಕರೆ ಮಾಡಿದ ಭಾರತ ಸರ್ಕಾರ