Site icon Vistara News

ತಾಲಿಬಾನ್ ತರಲೆ; ಅಫ್ಘಾನ್​ ಮಹಿಳೆಯರು ಇನ್ನು ತಮ್ಮ ಅಂದ-ಚೆಂದ ಹೆಚ್ಚಿಸಿಕೊಳ್ಳುವ ಜಾಗಕ್ಕೆ ಹೋಗುವಂತಿಲ್ಲ!

Taliban Women

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ (Taliban rule) ಬಂದಾಗಿನಿಂದ ಅಲ್ಲಿನ ಜನರು ಪರದಾಡುತ್ತಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳ (Afghanistan Woman) ಬಾಳು ಅಕ್ಷರಶಃ ನರಕವಾಗುತ್ತಿದೆ. ತಾಲಿಬಾನ್ ಆಡಳಿತಗಾರರು ಮಹಿಳೆಯರ ಹಕ್ಕನ್ನು ಕಸಿಯುತ್ತಿದ್ದಾರೆ. 1-6ನೇ ತರಗತಿವರೆಗೆ ಮಾತ್ರ ಕಲಿಕೆಗೆ ಅವಕಾಶ, ಹೊರಗಡೆ ಕೆಲಸಕ್ಕೆ ಹೋಗಬಾರದು ಎಂಬಿತ್ಯಾದಿ ನಿಯಮಗಳನ್ನು ಈಗಾಗಲೇ ವಿಧಿಸಿ ಆಗಿದೆ. ಅಷ್ಟಲ್ಲದೆ, ಹೆಣ್ಣುಮಕ್ಕಳು, ಮಹಿಳಾ ವೈದ್ಯರ ಬಳಿ ಮಾತ್ರ ಚಿಕಿತ್ಸೆ ಪಡೆಯಬೇಕು ಎಂಬ ನಿಯಮವನ್ನೂ ಜಾರಿಗೊಳಿಸಿದೆ. ಆದರೆ ಮತ್ತೊಂದೆಡೆ ವೈದ್ಯಕೀಯ ವೃತ್ತಿಯಲ್ಲಿರುವ ಹೆಣ್ಣುಮಕ್ಕಳಿಗೆ ವೃತ್ತಿಯಲ್ಲಿ ಮುಂದುವರಿಯಲು ಬಿಡುತ್ತಿಲ್ಲ. ಹೀಗಾಗಿ ಅಫ್ಘಾನಿಸ್ತಾನವೆಂಬುದು ಮಹಿಳೆಯರ ಪಾಲಿಗೆ ಸೆರೆವಾಸವಾಗಿ ಬದಲಾಗುತ್ತಿದೆ.

ಈ ಮಧ್ಯೆ ತಾಲಿಬಾನ್ ಹೊಸದೊಂದು ನಿಯಮ ಜಾರಿ ಮಾಡಿದೆ. ದೇಶಾದ್ಯಂತ ಎಲ್ಲ ಕಡೆಗಳಲ್ಲಿ ಇರುವ ಮಹಿಳೆಯರ ಬ್ಯೂಟಿಪಾರ್ಲರ್​ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಅಂದಹಾಗೇ, ಸದ್ಯ ಮೌಖಿಕವಾಗಿ ಆದೇಶಿಸಿದ್ದು ಸದ್ಯದಲ್ಲೇ ಈ ಬಗ್ಗೆ ಲಿಖಿತವಾಗಿ, ಅಧಿಕೃತವಾಗಿ ಆರ್ಡರ್​ ಹೊರಬೀಳಲಿದೆ ಎಂದು ಅಲ್ಲಿನ ಟೋಲೋ ನ್ಯೂಸ್​ ವರದಿ ಮಾಡಿದೆ. ಕಾಬೂಲ್​ನಿಂದ ಪ್ರಸಾರಗೊಳ್ಳುವ ಟೋಲೋ ನ್ಯೂಸ್​ ಚಾನೆಲ್​ಗೆ ಮಾಹಿತಿ ನೀಡಿರುವ ತಾಲಿಬಾನ್​ ಸದ್ಗುಣ ಪ್ರಚಾರ ಇಲಾಖೆ ವಕ್ತಾರ ಮೊಹಮ್ಮದ್ ಅಕಿಫ್​ ಮಹಾಜರ್​ ‘ಆಯಾ ನಗರಗಳ ಆಡಳಿತಗಳು ಅಲ್ಲಿನ ಮಹಿಳೆಯರ ಬ್ಯೂಟಿಪಾರ್ಲರ್​​ನ ಲೈಸೆನ್ಸ್​ ರದ್ದು ಮಾಡಬೇಕು ಎಂದು ಸೂಚಿಸಿದ್ದಾಗಿ’ ತಿಳಿಸಿದ್ದಾರೆ.

ಇದನ್ನೂ ಓದಿ: Karnataka BJP: ಹೊಸಕೋಟೆಯಲ್ಲಿ ತಾಲಿಬಾನ್‌ ಪಡೆ ಎದ್ದುನಿಂತಿದೆ: ನಳಿನ್‌ ಕುಮಾರ್‌ ಕಟೀಲ್‌ ಆಕ್ರೋಶ

ತಾಲಿಬಾನ್​ನ ಈ ಆದೇಶ ಅಲ್ಲಿನ ಮಹಿಳೆಯರನ್ನು ನೋಯಿಸಿದೆ. ಬುರ್ಕಾ ಹಾಕುವ ಮುಖಕ್ಕೆ ಅಂದವೇಕೆ?ಚೆಂದವೇಕೆ? ಎಂದು ಒಂದಷ್ಟು ಮಂದಿಗೆ ಅನ್ನಿಸಬಹುದು. ಆದರೂ ಪ್ರತಿ ಮಹಿಳೆಗೂ ತಾವು ಚೆಂದವಾಗಿ ಕಾಣಿಸಬೇಕೆಂಬ ಆಸೆ ಇದ್ದೇ ಇರುತ್ತದೆ. ಮದುವೆ ಮತ್ತಿತರ ಸಮಾರಂಭಗಳು ಹತ್ತಿರ ಬಂದಾಗ ಮಹಿಳೆಯರು ಬ್ಯೂಟಿಪಾರ್ಲರ್​ಗಳಿಗೆ ಹೋಗುವುದು ಕೂಡ ಸಹಜ. ಆದರೆ ಅವರ ಈ ಹಕ್ಕನ್ನು ತಾಲಿಬಾನ್ ಕಸಿದೆ. ಅಷ್ಟೇ ಅಲ್ಲ, ಹೀಗೆ ಬ್ಯೂಟಿಪಾರ್ಲರ್​ಗಳನ್ನು ನಿಷೇಧ ಮಾಡುವುದರಿಂದ ಅದೆಷ್ಟೋ ಮಹಿಳೆಯರು ನಿರುದ್ಯೋಗಿಗಳಾಗಿದ್ದಾರೆ. ಈ ಬಗ್ಗೆ ಟೋಲೋ ನ್ಯೂಸ್​ಗೆ ಪ್ರತಿಕ್ರಿಯೆ ನೀಡಿದ ಮೇಕಪ್​ ಆರ್ಟಿಸ್ಟ್​ ರೈಹಾನ್ ಮುಬಾರಿಜ್ ‘ಅಫ್ಘಾನಿಸ್ತಾನದಲ್ಲಿ ಪುರುಷರು ನಿರುದ್ಯೋಗಿಗಳಾಗಿದ್ದಾರೆ. ಅವರು ಮಾಡುವ ಕೆಲಸದಿಂದ ಆದಾಯ ಹುಟ್ಟುತ್ತಿಲ್ಲ. ಹೀಗಿರುವಾಗ ಮಹಿಳೆಯರು ಅಲ್ಲೇ ಮನೆ ಬಳಿಯೇ ಬ್ಯೂಟಿಪಾರ್ಲರ್​ಗಳನ್ನು ನಡೆಸಿ, ಅಷ್ಟೋ ಇಷ್ಟೋ ದುಡಿಯುತ್ತಿದ್ದರು. ಆದರೆ ಅದಕ್ಕೂ ಈಗ ಕಲ್ಲುಬಿತ್ತು’ ಎಂದು ಹೇಳಿದ್ದಾರೆ. ಈ ಸಲ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯ-ಹಕ್ಕು ಕೊಡುವುದಾಗಿ ಹೇಳಿದ್ದ ತಾಲಿಬಾನ್ ತನ್ನ ಮಾತನ್ನೇ ಮರೆಯುತ್ತಿದೆ.

Exit mobile version