Site icon Vistara News

ಹಿಂದು, ಸಿಖ್ಖರು ವಾಪಸ್‌ ಅಫ್ಘಾನ್‌ಗೆ ಬನ್ನಿ; ಭದ್ರತೆಯ ಭರವಸೆ ಕೊಡುತ್ತಿರುವ ತಾಲಿಬಾನ್‌

Taliban

ಕಾಬುಲ್‌: ದೇಶ ಬಿಟ್ಟು ಹೋಗಿರುವ ಹಿಂದು-ಸಿಖ್‌ ಸಮುದಾಯದವರೆಲ್ಲ ಅಫ್ಘಾನಿಸ್ತಾನಕ್ಕೆ ವಾಪಸ್‌ ಬನ್ನಿ ಎಂದು ತಾಲಿಬಾನಿಗಳು ಕರೆಯುತ್ತಿದ್ದಾರೆ (Taliban Urge Hindus Sikhs to return). ʼಅಫ್ಘಾನಿಸ್ತಾನದಲ್ಲಿ ನಿಮ್ಮ ಭದ್ರತೆಗೆ ಏನೂ ಸಮಸ್ಯೆಯಾಗುವುದಿಲ್ಲ. ಸಮಸ್ಯೆಗಳನ್ನೆಲ್ಲ ಬಗೆಹರಿಸಿದ್ದೇವೆ. ಅಲ್ಪಸಂಖ್ಯಾತರ ರಕ್ಷಣೆ ನಮ್ಮ ಜವಾಬ್ದಾರಿ. ದೇಶಕ್ಕೆ ಹಿಂತಿರುಗಿʼ ಎಂದು ಹೇಳುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿರುವ ಹಿಂದು-ಸಿಖ್‌ ಕೌನ್ಸಿಲ್‌ ಸದಸ್ಯರ ನಿಯೋಗವೊಂದನ್ನು ಕಾಬೂಲ್‌ನಲ್ಲಿ ಜುಲೈ 24ರಂದು ತಾಲಿಬಾನ್‌ ರಾಜ್ಯ ಸಚಿವರ ಕಚೇರಿಯ ಮಹಾ ನಿರ್ದೇಶಕ ಡಾ. ಮುಲ್ಲಾ ಅಬ್ದುಲ್‌ ವಾಸಿ ಭೇಟಿ ಮಾಡಿ, ಮಾತುಕತೆ ನಡೆಸಿದ್ದರು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ದೇಶಬಿಟ್ಟು ಹೋಗಿರುವ ಹಿಂದು-ಸಿಖ್ಖರನ್ನು ವಾಪಸ್‌ ಕರೆಯಲಾಗುತ್ತಿದೆ. ಈ ಭೇಟಿ-ಮಾತುಕತೆಯ ಫೋಟೋವನ್ನು ತಾಲಿಬಾನ್‌ ರಾಜ್ಯ ಸಚಿವರ ಕಚೇರಿ ಟ್ವೀಟ್‌ ಮಾಡಿಕೊಂಡಿದೆ.

ಅಫ್ಘಾನಿಸ್ತಾನದಲ್ಲಿ ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್‌ ಆಡಳಿತ ಬಂದ ಬೆನ್ನಲ್ಲೇ ತಮಗೆ ರಕ್ಷಣೆ ಇಲ್ಲ ಎಂದು ಹೆದರಿ ಅನೇಕ ಅಲ್ಪಸಂಖ್ಯಾತರು ದೇಶ ಬಿಟ್ಟಿದ್ದಾರೆ. ಅದಕ್ಕೂ ಮೊದಲೇ ದೇಶ ತೊರೆದವರೂ ಇದ್ದಾರೆ. ಕಳೆದ ಜೂನ್‌ ತಿಂಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ ಸಂಘಟನೆ, ಕಾಬೂಲ್‌ನಲ್ಲಿರುವ ಕರ್ತೆ ಪರ್ವಾನ್‌ ಗುರುದ್ವಾರದ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಒಬ್ಬ ಸಿಖ್‌ ಹಾಗೂ ಗುರುದ್ವಾರದ ಸೆಕ್ಯೂರಿಟಿ ಅಹ್ಮದ್‌ ಎಂಬಾತ ಮೃತಪಟ್ಟಿದ್ದಾರೆ. ಅಂದು ಗುರುದ್ವಾರದಲ್ಲಿ ಸುಮಾರು 25-30 ಸಿಖ್ಖರು ಪ್ರಾರ್ಥನೆ ಸಲ್ಲಿಸುತ್ತಿದ್ದಾಗಲೇ ದಾಳಿ ನಡೆದಿತ್ತು. ಅದಕ್ಕೂ ಮೊದಲು 2020ರ ಮಾರ್ಚ್‌ ತಿಂಗಳಲ್ಲಿ ಕಾಬೂಲ್‌ನ ಶಾರ್ಟ್‌ ಬಜಾರ್‌ ಏರಿಯಾದಲ್ಲಿರುವ ಗುರು ಹರ ರೈ ಸಾಹೀಬ್‌ ಗುರುದ್ವಾರದ ಮೇಲೆ ಕೂಡ ದಾಳಿ ನಡೆದಿತ್ತು. ಆಗ 27 ಸಿಖ್ಖರು ಮೃತಪಟ್ಟಿದ್ದರು. ಅನೇಕರು ಗಾಯಗೊಂಡಿದ್ದರು. ಈ ದಾಳಿಯ ಹೊಣೆಯನ್ನು ಐಸಿಸ್‌ ಉಗ್ರ ಸಂಘಟನೆ ಹೊತ್ತಿತ್ತು. ಹಿಂದುಗಳ ಮೇಲೆ ನಿರಂತರವಾಗಿ ದಾಳಿಯಾಗುತ್ತಲೇ ಇದೆ.

ಇದೀಗ ಅಲ್ಪಸಂಖ್ಯಾತರನ್ನು ವಾಪಸ್‌ ಕರೆದಿದ್ದನ್ನು ಮತ್ತು ಗುರುದ್ವಾರ-ದೇಗುಲದ ಮೇಲೆ ದಾಳಿಯಾಗುವುದನ್ನು ತಡೆಯುತ್ತೇವೆ ಹಾಗೂ ಈಗಾಗಲೇ ದಾಳಿಗೆ ಒಳಗಾಗಿ ಹಾಳಾಗಿರುವ ಗುರುದ್ವಾರಗಳನ್ನು ದುರಸ್ತಿಪಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ತಾಲಿಬಾನ್‌ ನಾಯಕರು ಹೇಳಿದ್ದನ್ನು ಅಲ್ಪಸಂಖ್ಯಾತರು ಸ್ವಾಗತಿಸಿದ್ದಾರೆ ಮತ್ತು ಧನ್ಯವಾದ ಸಲ್ಲಿಸಿದ್ದಾರೆ. ಹಾಗೇ, ತಾಲಿಬಾನ್‌ ನಾಯಕರು ಈಗಾಗಲೇ ದಾಳಿಗೆ ಒಳಗಾದ ಗುರುದ್ವಾರಗಳಿಗೆ ಭೇಟಿ ಕೊಟ್ಟು ಅಲ್ಲಿನ ವಸ್ತು ಸ್ಥಿತಿ ಗಮನಿಸಿದ್ದಾರೆ. ಮೃತರ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಕಟ್ಟಡಗಳನ್ನು ನವೀಕರಿಸಲು ಹಣ ಮೀಸಲಿಟ್ಟಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ತಾಲಿಬಾನ್‌ ಸ್ಥಾಪಕ ಮುಲ್ಲಾ ಒಮರ್‌ ಪರಾರಿಯಾಗಲು ಬಳಸಿದ ವ್ಯಾನ್‌ ಪತ್ತೆ

Exit mobile version