ಟೊರಂಟೋ: ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಪ್ರಮುಖ ಹಿಂದೂ ದೇವಾಲಯವನ್ನು ಖಲಿಸ್ತಾನಿ ಪ್ರತ್ಯೇಕತಾವಾದಿಗಳು (Temple Defaced) ವಿರೂಪಗೊಳಿಸಿದ್ದಾರೆ. ದೇಗುಲದ ಗೋಡೆಗಳ ಮೇಲೆ ಭಾರತ ವಿರೋಧಿ ಬರಹಗಳನ್ನು ಬರೆಯಲಾಗಿದೆ. ಇದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕೆನಡಾ, ಆಸ್ಟ್ರೇಲಿಯಾಗಳಲ್ಲಿ ಹಿಂದೂ ದೇಗುಲಗಳ ಮೇಲೆ ಖಲಿಸ್ತಾನಿಗಳ ದಾಳಿ ಖಂಡನೀಯ
ಗೌರಿ ಶಂಕರ ಮಂದಿರದಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಖಂಡನೆ ವ್ಯಕ್ತಪಡಿಸಿರುವ ಭಾರತೀಯ ಕಾನ್ಸುಲೇಟ್ ಜನರಲ್ ಕಚೇರಿಯು, “ದೇವಾಲಯವನ್ನು ವಿರೂಪಗೊಳಿಸಿರುವ ದ್ವೇಷದ ವಿಧ್ವಂಸಕ ಕೃತ್ಯವು ಕೆನಡಾದಲ್ಲಿರುವ ಭಾರತೀಯ ಸಮುದಾಯದ ಭಾವನೆಗಳನ್ನು ಆಳವಾಗಿ ಘಾಸಿಗೊಳಿಸಿದೆ. ಕೆನಡಾದ ಅಧಿಕಾರಿಗಳೊಂದಿಗೆ ನಾವು ಈ ವಿಷಯದ ಬಗ್ಗೆ ನಮ್ಮ ಕಳವಳವನ್ನು ವ್ಯಕ್ತಪಡಿಸಿದ್ದೇವೆ” ಎಂದು ಹೇಳಿದೆ. ಈ ಘಟನೆಯ ಕುರಿತಾಗಿ ಕೆನಡಾದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಈ ಕೃತ್ಯದ ಹಿಂದೆ ನಿಷೇಧಿತ ಭಯೋತ್ಪಾದಕ ಸಂಘಟನೆಯಾಗಿರುವ ಸಿಖ್ಸ್ ಫಾರ್ ಜಸ್ಟಿಸ್ (SFJ) ಮತ್ತು ಇತರ ಖಲಿಸ್ತಾನಿ ಗುಂಪುಗಳ ಕೈವಾಡವಿರಬಹುದು ಎಂದು ಶಂಕಿಸಲಾಗಿದೆ. ಎಸ್‌ಎಫ್‌ಜೆ ಸಂಘಟನೆಯು ಮಂದಿರವನ್ನು ವಿರೂಪಗೊಳಿಸಿದ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದೆ ಎಂದೂ ವರದಿಯಾಗಿದೆ.
ಸಂಸದರ ಖಂಡನೆ
ಈ ಘಟನೆಯ ಬಗ್ಗೆ ಕೆನಡಾದ ಭಾರತೀಯ ಮೂಲದ ಸಂಸದ ಚಂದನ್ ಆಚಾರ್ಯ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ವಿಷಯದಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. “ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷದಿಂದ ಹಿಡಿದು ಈಗ ಹಿಂದೂ ದೇವಾಲಯಗಳ ಮೇಲೆ ದೈಹಿಕ ದಾಳಿ ನಡೆಸಲಾಗಿದೆ. ಮುಂದೇನು? ಇದನ್ನು ಗಂಭೀರವಾಗಿ ಪರಿಗಣಿಸಲು ಕೆನಡಾದ ಸರ್ಕಾರಕ್ಕೆ ನಾನು ಕರೆ ನೀಡುತ್ತೇನೆ” ಎಂದು ಆಚಾರ್ಯ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.