ಔಗಡೌಗೌ: ಬುರ್ಕಿನಾ ಫಾಸೊ (Burkina Faso) ದೇಶದ ಈಶಾನ್ಯ ಭಾಗದಲ್ಲಿನ ಕ್ಯಾಥೋಲಿಕ್ ಚರ್ಚ್ (Catholic Church) ಒಂದರ ಮೇಲೆ ಭಾನುವಾರ ಉಗ್ರಗಾಮಿಗಳು ಗುಂಡಿನ ದಾಳಿ (Terrorist Attack) ನಡೆಸಿದರು. ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.
ಮಾಲಿಯ ಗಡಿಗೆ ಹತ್ತಿರದಲ್ಲಿರುವ ಔಡಾಲನ್ ಪ್ರಾಂತ್ಯದ ಎಸ್ಸಾಕಾನೆ ಗ್ರಾಮದಲ್ಲಿ ಭಾನುವಾರದ ಪೂಜೆಯ ಸಮಯದಲ್ಲಿ ಈ ದಾಳಿ ನಡೆದಿದೆ. ಬಂದೂಕುಧಾರಿಗಳು ಶಂಕಿತ ಇಸ್ಲಾಮಿ ಉಗ್ರಗಾಮಿಗಳು ಎಂದು ಚರ್ಚ್ ಅಧಿಕಾರಿಯೊಬ್ಬರು ಸೂಚಿಸಿದ್ದಾರೆ. ಪಶ್ಚಿಮ ಆಫ್ರಿಕಾ ದೇಶವಾದ ಬುರ್ಕಿನಾ ಫಾಸೊದ ರಾಜಧಾನಿ ಔಗಡೌಗೌ ಅಧಿಕಾರಿಗಳಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
ಸ್ಥಳೀಯ ಆಡಳಿತ ಮುಖ್ಯಸ್ಥ ಅಬಾಟ್ ಜೀನ್-ಪಿಯರ್ ಸಾವಡೋಗೊ ಅವರ ಹೇಳಿಕೆ ಪ್ರಕಾರ ಸ್ಥಳದಲ್ಲಿ 12 ಜನರು ಮತ್ತು ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಬುರ್ಕಿನಾ ಫಾಸೊದ ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚು ಭಾಗ ಪ್ರಸ್ತುತ ಬಂಡುಕೋರರ ನಿಯಂತ್ರಣದಲ್ಲಿದೆ. ದೇಶದ ಸೈನ್ಯವು ಅಲ್-ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್‌ಗೆ ಸಂಬಂಧಿಸಿದ ಇಸ್ಲಾಮಿಸ್ಟ್ ಗುಂಪುಗಳೊಂದಿಗೆ ಹೋರಾಡುತ್ತಿದೆ. ಉಗ್ರರು ದೊಡ್ಡ ಪ್ರಮಾಣದ ಭೂಮಿಯನ್ನು ವಶಪಡಿಸಿಕೊಂಡಿದ್ದು, ಸಹೇಲ್ ಪ್ರದೇಶದಲ್ಲಿ ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಚರ್ಚ್‌ಗಳನ್ನು ಗುರಿಯಾಗಿಟ್ಟುಕೊಂಡು ಹಲವಾರು ದಾಳಿಗಳು ನಡೆದಿದ್ದು, ನೂರಾರು ಮಂದಿ ಸತ್ತಿದ್ದಾರೆ. ಮಿಲಿಟರಿ ಸರ್ವಾಧಿಕಾರ ಹೊಂದಿರುವ ಬುರ್ಕಿನಾ ಫಾಸೊ ಇತ್ತೀಚೆಗೆ ಪ್ರಾದೇಶಿಕ ರಾಜಕೀಯ ಮತ್ತು ಆರ್ಥಿಕ ಬಣವಾದ ಎಕೋವಾಸ್‌ನಿಂದ ಹೊರಬಂದಿದೆ. ಇದರ ನೆರೆಹೊರೆಯ ದೇಶಗಳಾದ ಮಾಲಿ ಮತ್ತು ನೈಜರ್ ಕೂಡ ಹೊರಬಂದಿವೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಇಕೋವಾಸ್ ಬೆಂಬಲ ನೀಡುತ್ತಿಲ್ಲ ಎಂಬುದು ಇವುಗಳ ಆರೋಪ.
ಜುಂಟಾ ನೇತೃತ್ವದ ಮೂರೂ ದೇಶಗಳಲ್ಲೂ ಪ್ರಜಾಪ್ರಭುತ್ವ (democracy) ಆಡಳಿತಕ್ಕೆ ಮರಳುವಂತೆ ಜನತೆಯ ಒತ್ತಾಯ ಜೋರಾಗಿದೆ. ಈ ತಿಂಗಳ ಆರಂಭದಲ್ಲಿ, ಬುರ್ಕಿನಾ ಫಾಸೊದ ಮಿಲಿಟರಿ ಬೆಂಬಲಿತ ಅಧ್ಯಕ್ಷ ಇಬ್ರಾಹಿಂ ಟ್ರೊರೆ, ಅಗತ್ಯವಿದ್ದರೆ ದೇಶದಲ್ಲಿ ಜಿಹಾದಿಗಳ ವಿರುದ್ಧ ಹೋರಾಡಲು ರಷ್ಯಾದ ಪಡೆಗಳನ್ನು ನಿಯೋಜಿಸಬಹುದು ಎಂದು ಹೇಳಿದರು.
ಇದನ್ನೂ ಓದಿ: Mass Shooting: ಗುಂಡಿನ ದಾಳಿ ನಡೆಸಿದ ಬಂಧೂಕುದಾರಿಯನ್ನೇ ನೆಲಕ್ಕೆ ಕೆಡವಿದರು; ವಿಡಿಯೊ ಇಲ್ಲಿದೆ