ಟೆಕ್ಸಾಸ್: ಅಮೆರಿಕದ ಟೆಕ್ಸಾಸ್‌ನಲ್ಲಿನ ಎಲಿಮೆಂಟರಿ ಶಾಲೆಯಲ್ಲಿ ಮೇ 24ರಂದು ನಡೆದ ಶೂಟೌಟ್‌ಗೆ (Texas School Shooting) ಸಂಬಂಧಪಟ್ಟ ಒಂದೊಂದೇ ವಿಷಯಗಳು ಹೊರಬೀಳುತ್ತಿವೆ. ಅಂದಿನ ಭಯಾನಕ ಗುಂಡಿನ ದಾಳಿಯಲ್ಲಿ 19 ಮಕ್ಕಳು, ಇಬ್ಬರು ಶಿಕ್ಷಕರು ಮೃತಪಟ್ಟಿದ್ದರು. ಆ ದಿನ ಏನಾಯಿತು? ಶಾಲೆಯಲ್ಲಿ ಏನೆಲ್ಲ ನಡೆಯಿತು ಎಂಬ ಸ್ಪಷ್ಟ ಚಿತ್ರಣ ಯಾರಿಗೂ ಇಲ್ಲ. ಆದರೆ ಈಗೊಂದು ವರದಿಯ ಪ್ರಕಾರ, ಅಂದು ಪೊಲೀಸರು ಇನ್ನೂ ಸ್ವಲ್ಪ ಮುಂಚಿತವಾಗಿಯೇ ಶಾಲೆಯ ಕ್ಲಾಸ್ ರೂಂ ಒಳಹೊಕ್ಕಿದ್ದರೆ ಒಂದಷ್ಟು ಮಕ್ಕಳ ಪ್ರಾಣ ಉಳಿಯುತ್ತಿತ್ತೇನೋ..! ಯಾಕೆಂದರೆ ಮಕ್ಕಳು ಶಾಲೆ ಕೋಣೆಯೊಳಗೆ ಹಂತಕನ ಬಂದೂಕಿನ ಎದುರು ನಿಂತು ಕಂಗಾಲಾಗಿದ್ದರೆ, ಇಲ್ಲಿ ಪೊಲೀಸರು ಶಾಲೆಯ ಹಜಾರದಲ್ಲಿ ಸುಮ್ಮನೆ ನಿಂತು ಕಾಯುತ್ತಿದ್ದರು. ಬರೀ 5-10 ನಿಮಿಷಗಳಲ್ಲ, ಬರೋಬ್ಬರಿ 45 ನಿಮಿಷ ಪೊಲೀಸರು ಹಾಗೇ ಅಲ್ಲೀಯೇ ನಿಂತಿದ್ದರು ಎಂದು ಹೇಳಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ ಟೆಕ್ಸಾಸ್ ಸಾರ್ವಜನಿಕ ಸುರಕ್ಷತಾ ಇಲಾಖೆ ಮುಖ್ಯಸ್ಥ ಸ್ಟೀವನ್ ಮೆಕ್‌ಕ್ರಾ, ಅಂದು ಘಟನೆ ನಡೆದ ದಿನ ಸ್ಥಳಕ್ಕೆ ಪೊಲೀಸ್ ತಂಡ ಹೋಗಿತ್ತು. ಅಂದು ಅಲ್ಲಿದ್ದ ಉವಾಲ್ಡೆ ನಗರದ ಪೊಲೀಸ್ ಕಮಾಂಡರ್ ಮತ್ತು ಜಿಲ್ಲಾ ಪೊಲೀಸ್ ಮುಖ್ಯಸ್ಥರು, ತರಗತಿ ಕೋಣೆಯೊಳಗೆ ಆರೋಪಿ ಸಾಲ್ವಡಾರ್ ರಾಮೋಸ್‌ನನ್ನು ತಡೆ ಹಿಡಿಯಲಾಗಿದೆ ಎಂದೇ ನಂಬಿಕೊಂಡಿದ್ದರಂತೆ. ಆತ ತಪ್ಪಿಸಿಕೊಂಡು ಹೋಗದಂತೆ ನಾಜೂಕಾಗಿ ವಶಕ್ಕೆ ಪಡೆಯುವ ಇರಾದೆ ಅವರದಾಗಿತ್ತು. ಆದರೆ ಒಳಗೆ ಮಕ್ಕಳ ಪ್ರಾಣ ಗುಂಡೇಟಿಗೆ ಬಲಿಯಾಗುತ್ತಿತ್ತು. ಹೀಗಾಗಿ ಅಧಿಕಾರಿಗಳು ತಾವು ಹೊರಗೇ ನಿಲ್ಲಬೇಕು ಎಂದು ತೆಗೆದುಕೊಂಡ ನಿರ್ಧಾರ ತಪ್ಪು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಮೆರಿಕದ ಟೆಕ್ಸಾಸ್ ಶಾಲೆಯಲ್ಲಿ 19 ಮಕ್ಕಳನ್ನು ಗುಂಡಿಕ್ಕಿ ಕೊಂದ ಯುವಕ
ಮೇ 24 ರಂದು ಶಾಲೆಯಲ್ಲಿ ಏನೇನಾಯಿತು ಎಂದು ಪೊಲೀಸರು ಸಲ್ಲಿಸಿದ ವರದಿ ವಿಚಾರದಲ್ಲಿ ಹಲವು ಗೊಂದಲಗಳು ಕಂಡುಬಂದಿವೆ. ಹೀಗಾಗಿ ಸಾರ್ವಜನಿಕ ಸುರಕ್ಷತಾ ಇಲಾಖೆ ಮುಖ್ಯಸ್ಥ ಸ್ಟೀವನ್ ಮೆಕ್‌ಕ್ರಾ ಅವರೇ ಖುದ್ದಾಗಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ಕೊಟ್ಟಿದ್ದಾರೆ. ಅಂದು ಎಲಿಮೆಂಟರಿ ಶಾಲೆಯಲ್ಲಿ ಆರೋಪಿ ಸಾಲ್ವಡಾರ್ ರಾಮೋಸ್‌ನಿಂದಾಗಿ ಸುಮಾರು 3 ತಾಸು ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ನಂತರ ಆತನನ್ನೂ ಪೊಲೀಸರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಆದರೆ ಪೊಲೀಸರು 45 ನಿಮಿಷ ಹೊರಗೆ ಕಾಯುವ ಬದಲು, ಒಳಗೆ ನುಗ್ಗಿ ಆತನನ್ನು ತಡೆಯಬಹುದಿತ್ತು ಎಂಬ ಚರ್ಚೆ ಕೇಳಿಬಂದಿತ್ತು.
ಇದನ್ನೂ ಓದಿ: ʼನೀನಿಲ್ಲದೆ ನಾನಿರಲಾರೆʼ-ಟೆಕ್ಸಾಸ್ ಗುಂಡಿನ ದಾಳಿಯಲ್ಲಿ ಮೃತಪಟ್ಟ ಶಿಕ್ಷಕಿ ಪತಿಯೂ ಸಾವು