ಅಕ್ರಮವಾಗಿ ಸಾಗಿಸುತ್ತಿದ್ದ ಗಾಂಜಾ ವಶ, ಆರೋಪಿಗಳ ಬಂಧನ ಎಂಬ ವರದಿಗಳನ್ನು ಪ್ರತಿನಿತ್ಯ ಓದುತ್ತಿರುತ್ತೇವೆ. ಭಾರತದಲ್ಲಿ ಗಾಂಜಾ ಬೆಳೆಯುವುದು, ಸೇವನೆ ಮಾಡುವುದು ಕಾನೂನು ಬಾಹಿರ. ಇದು 1985ರಲ್ಲಿ ಬಂದ ಕಾನೂನಾಗಿದ್ದು, ಆಗಿನಿಂದಲೂ ಗಾಂಜಾ ಮತ್ತು ಇತರ ಮಾದಕ ವಸ್ತುಗಳ ಸೇವನೆ, ಸಾಗಣೆಗಳೆಲ್ಲ ಶಿಕ್ಷಾರ್ಹ ಅಪರಾಧವಾಗಿದೆ. ಯಾರದ್ದಾದರೂ ಮನೆಯ ಬಳಿ, ತೋಟ-ಹೊಲಗಳಲ್ಲಿ ಗಾಂಜಾ ಬೆಳೆದಿದ್ದು ಕಂಡುಬಂದರೆ ಸಾಕು, ಪೊಲೀಸರು ಮನೆಗೇ ಬಂದು ಬಂಧಿಸಿ ಕರೆದುಕೊಂಡು ಹೋಗುತ್ತಾರೆ. ಆದರೆ ಥೈಲ್ಯಾಂಡ್‌ನಲ್ಲಿ ಹೀಗಿಲ್ಲ. ಅಲ್ಲಿನ ಜನರಿಗೆ ಮನೆಯಲ್ಲೇ ಗಾಂಜಾವನ್ನು ಬೆಳೆಯಲು ಸರ್ಕಾರವೇ ಅನುಮತಿ ಕೊಟ್ಟಿದೆ. ಅಷ್ಟೇ ಅಲ್ಲ, ಜೂನ್ ತಿಂಗಳಲ್ಲಿ ಸುಮಾರು ಒಂದು ಮಿಲಿಯನ್ ಅಂದರೆ, 10 ಲಕ್ಷಗಳಷ್ಟು ಗಾಂಜಾ ಸಸಿಗಳನ್ನು ಉಚಿತವಾಗಿ ವಿತರಿಸಲು ಮುಂದಾಗಿದೆ. ಈ ಬಗ್ಗೆ ಥೈಲ್ಯಾಂಡ್‌ನ ಆರೋಗ್ಯ ಸಚಿವ ಅನುಟಿನ್ ಚರ್ನವೀರಕುಲ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಘೋಷಿಸಿದ್ದಾರೆ. ಗಾಂಜಾವನ್ನು ಪ್ರತಿ ಮನೆಯ ಬೆಳೆಯನ್ನಾಗಿಸುವ ಆಶಯವನ್ನೂ ವ್ಯಕ್ತಪಡಿಸಿದ್ದಾರೆ.
ಥೈಲ್ಯಾಂಡ್‌ನಲ್ಲಿ ಗಾಂಜಾವನ್ನು ಮನೆಯಲ್ಲಿ ಬೆಳೆಯಬಹುದು ಎಂದು ಸರ್ಕಾರ ಹೇಳಿದ್ದರೂ ಕೂಡ ಅದು ಜೂನ್ 9ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಆದರೆ ಒಂದು ಷರತ್ತೂ ಕೂಡ ಇದೆ. ಯಾರು ಮನೆಯಲ್ಲೇ ಗಾಂಜಾ ಬೆಳೆಯಲು ಇಚ್ಛಿಸುತ್ತಾರೋ, ಅವರು ಸ್ಥಳೀಯ ಸರ್ಕಾರಗಳಿಂದ ಅನುಮತಿ ಪಡೆಯಬೇಕು. ಅದಕ್ಕಿಂತ ಹೆಚ್ಚಾಗಿ ಔಷಧೀಯ ಉಪಯೋಗಕ್ಕಾಗಿಯೇ ಬೆಳೆದು, ಅದೇ ಉದ್ದೇಶಕ್ಕಾಗಿಯೇ ಬಳಸಬೇಕಾಗುತ್ತದೆ. ಹಾಗೊಮ್ಮೆ ಯಾರಾದರೂ ಪರವಾನಗಿ ಪಡೆಯದೆ, ವಾಣಿಜ್ಯಾತ್ಮಕ ಬಳಕೆಗಾಗಿ ಗಾಂಜಾ ಬೆಳೆದಿದ್ದು ಕಂಡುಬಂದರೆ, ಅಂಥವರಿಗೆ 20,000- 300,000 ಥಾಯ್ ಬಹ್ತ್ (ಅಲ್ಲಿನ ಕರೆನ್ಸಿ) ಗಳಷ್ಟು ದಂಡ ವಿಧಿಸಲಾಗುವುದು. ಲೈಸೆನ್ಸ್ ಇಲ್ಲದೆ ಬೆಳೆಯುವುದು, ಮಾರಾಟ ಮಾಡುವುದು ಕಂಡುಬಂದರೆ ದಂಡದೊಟ್ಟಿಗೆ ಮೂರುವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸುವುದಾಗಿ ಥೈಲ್ಯಾಂಡ್ ಸರ್ಕಾರ ತಿಳಿಸಿದೆ.
ಇದನ್ನೂ ಓದಿ | Video | ಆಂಧ್ರಪ್ರದೇಶ ಸಾಗರ ತೀರದಲ್ಲಿ ಅಬ್ಬರದ ಅಲೆಗಳೊಂದಿಗೆ ತೇಲುತ್ತ ಬಂತೊಂದು ಚಿನ್ನದ ಬಣ್ಣದ ರಥ !
ಥೈಲ್ಯಾಂಡ್‌ನ ಒಟ್ಟಾರೆ ಕಾರ್ಮಿಕರಲ್ಲಿ ಮೂರರಷ್ಟು ಜನರು ಕೃಷಿಯನ್ನು ಮಾಡುವವರು. ಈ ಗಾಂಜಾವನ್ನೂ ಆದಾಯ ತಂದುಕೊಡುವ ಬೆಳೆ ಎಂದು ಪರಿಗಣಿಸಿ, ಕೃಷಿಕರು ಅದನ್ನು ಬೆಳೆಯುವುದನ್ನು ಉತ್ತೇಜಿಸಲು ಥೈಲ್ಯಾಂಡ್ ಯೋಜನೆ ರೂಪಿಸುತ್ತಿದೆ. ಅಂದಹಾಗೇ, ಆಗ್ನೇಯ ಏಷ್ಯಾದಲ್ಲೇ ಗಾಂಜಾವನ್ನು ಕಾನೂನಾತ್ಮಕ ಗೊಳಿಸಿದ ಮೊದಲ ದೇಶ ಥೈಲ್ಯಾಂಡ್. ವೈದ್ಯಕೀಯ ಬಳಕೆ ಮತ್ತು ಸಂಶೋಧನೆಗಳಿಗಾಗಿ 2018ರಲ್ಲಿ ಮೊಟ್ಟಮೊದಲಿಗೆ ಗಾಂಜಾ ಬೆಳೆಯನ್ನು ಥೈಲ್ಯಾಂಡ್ ಸರ್ಕಾರ ಅನುಮೋದಿಸಿತು. ಒಂದಷ್ಟು ಕಾಸ್ಮೆಟಿಕ್ಸ್ ಮತ್ತು ಪಾನೀಯಗಳ ತಯಾರಿಕಾ ಕಂಪನಿಗಳೆಲ್ಲ ಕಳೆದ ವರ್ಷ ಹೆಂಪ್ ಮತ್ತು ಸಿಬಿಡಿ (ಸಂಯೋಜಿತ) ಎಣ್ಣೆಗಳ ಉತ್ಪನ್ನಗಳನ್ನು ತಯಾರಿಸಲು ಶುರುಮಾಡಿದವು. ಇವೆರಡರ ಮೂಲವೂ ಗಾಂಜಾ ಸಸಿಗಳೇ ಆಗಿವೆ. ಇದನ್ನು ನೋಡಿದ ಸರ್ಕಾರ, ದೇಶದಲ್ಲಿ ಆರ್ಥಿಕ ಅಭಿವೃದ್ಧಿಗಾಗಿ ಮತ್ತು ಉದ್ಯೋಗ ಸೃಷ್ಟಿಯಾಗಿ ಗಾಂಜಾವನ್ನು ಕಾನೂನಾತ್ಮಕಗೊಳಿಸುವತ್ತ ಹೆಚ್ಚಿನ ಒಲವು ತೋರಿತು.
ಇದನ್ನೂ ಓದಿ | ಬರ್ತ್‌ಡೇ ಸೆಲಬ್ರೇಷನ್ ವೇಳೆ ಆಕ್ಸಿಡೆಂಟ್: ಗಾಂಜಾ ಮತ್ತಿನಲ್ಲಿ ಯುವಕನ ಬರ್ಬರ ಹತ್ಯೆ