ಲಂಡನ್: ಭಾರತದ ಬಿಬಿಸಿ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಸಮೀಕ್ಷೆ ನಡೆಸುತ್ತಿರುವ ವಿಚಾರದಲ್ಲಿ ಬ್ರಿಟನ್ ಸರ್ಕಾರವು (UK Government) ಬಿಬಿಸಿಯನ್ನು ಸಮರ್ಥಿಸಿಕೊಂಡಿದೆ.
ಬ್ರಿಟನ್ ದೇಶದ ಹೌಸ್ ಆಫ್ ಕಾಮನ್ಸ್‌ನಲ್ಲಿ ಮಾತನಾಡಿರುವ ವಿದೇಶಾಂಗ, ಕಾಮನ್‌ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ (ಎಫ್‌ಸಿಡಿಒ) ಕಿರಿಯ ಸಚಿವರು ಬಿಬಿಸಿ ಪರ ನಿಲ್ಲುವುದಾಗಿ ಹೇಳಿದ್ದಾರೆ. ಸದ್ಯ ಚಾಲ್ತಿಯಲ್ಲಿರುವ ತನಿಖೆ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲವಾದರೂ ಮಾಧ್ಯಮಕ್ಕೆ ವಾಕ್ ಸ್ವಾತಂತ್ರ್ಯ ನೀಡುವುದು ಸದೃಢ ಪ್ರಜಾಪ್ರಭುತ್ವದ ರೀತಿ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Bob Blackman: ಪ್ರಧಾನಿ ಮೋದಿ ಬಗೆಗಿನ ಬಿಬಿಸಿ ಸಾಕ್ಷ್ಯಚಿತ್ರವನ್ನು ಖಂಡಿಸಿದ ಬ್ರಿಟಿಷ್ ಸಂಸದ ಬಾಬ್ ಬ್ಲ್ಯಾಕ್‌ಮನ್
ಎಫ್‌ಸಿಡಿಒ ಸಂಸದೀಯ ಅಧೀನ ಕಾರ್ಯದರ್ಶಿ ಡೇವಿಡ್ ರುಟ್ಲಿ ಅವರು ಮಾತನಾಡಿ, “”ನಾವು ಬಿಬಿಸಿಯೊಂದಿಗೆ ನಿಲ್ಲುತ್ತೇವೆ. ಅದಕ್ಕೆ ಧನಸಹಾಯ ಮಾಡುತ್ತೇವೆ. ಇದು ಅತ್ಯಂತ ಪ್ರಮುಖ ಸಂಸ್ಥೆ ಎಂದು ನಾವು ಭಾವಿಸುತ್ತೇವೆ. ಹಾಗಾಗಿ ಸಂಪಾದಕೀಯ ಸ್ವಾತಂತ್ರ್ಯವನ್ನು ಹೊಂದಬೇಕೆಂದು ನಾವು ಬಯಸುತ್ತೇವೆ. ಮಾಧ್ಯಮ ಸ್ವಾತಂತ್ರ್ಯವು ಮುಖ್ಯವಾಗಿದೆ. ಭಾರತ ಸೇರಿ ವಿಶ್ವದಲ್ಲಿರುವ ಎಲ್ಲ ಸ್ನೇಹಿತರಿಗೆ ಮಾಧ್ಯಮ ಸ್ವಾತಂತ್ರ್ಯದ ಪ್ರಾಮುಖ್ಯತೆಯನ್ನು ತಿಳಿಸಲು ಬಯಸುತ್ತೇವೆ” ಎಂದು ಹೇಳಿದ್ದಾರೆ.
“ಭಾರತದೊಂದಿಗಿನ ನಾವು ವಿಶಾಲ ಮತ್ತು ಆಳವಾದ ಸಂಬಂಧ ಹೊಂದಿದ್ದೇವೆ. ಹಾಗಾಗಿ ಭಾರತದ ಸರ್ಕಾರದೊಂದಿಗೆ ವ್ಯಾಪಕ ಶ್ರೇಣಿಯ ಸಮಸ್ಯೆಗಳನ್ನು ಚರ್ಚಿಸಲು ಸಾಧ್ಯವಾಗುತ್ತದೆ. ಅದೇ ರೀತಿಯಲ್ಲಿ ಈ ಸಮಸ್ಯೆಯನ್ನು ಎತ್ತಲಾಗಿದೆ. ಹಾಗೆಯೇ ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ.” ಎಂದೂ ಅವರು ತಿಳಿಸಿದ್ದಾರೆ.
ಬ್ರಿಟಿಷ್ ಸಂಸತ್ತಿನ ಸಿಖ್ ಸಂಸದ ತನ್ಮನ್ಜೀತ್ ಸಿಂಗ್ ಧೇಸಿ ಅವರು ಮಾತನಾಡಿ, “ಭಾರತ, ನಾವು ಪ್ರಜಾಪ್ರಭುತ್ವ ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೌಲ್ಯಗಳನ್ನು ಹಂಚಿಕೊಂಡಿರುವ ರಾಷ್ಟ್ರಗಳಾಗಿದ್ದೇವೆ. ಭಾರತದ ಪ್ರಧಾನ ಮಂತ್ರಿಯ ಕ್ರಮಗಳನ್ನು ಟೀಕಿಸುವ ಸಾಕ್ಷ್ಯಚಿತ್ರ ಪ್ರಸಾರವಾದ ನಂತರ ಬಿಬಿಸಿ ಕಚೇರಿಗಳ ಮೇಲೆ ಆದಾಯ ತೆರಿಗೆ ದಾಳಿ ನಡೆಸಲು ನಿರ್ಧರಿಸಲಾಗಿದೆ. ಭಾರತದಲ್ಲಿ ಅಧಿಕಾರಿಗಳು ಸರ್ಕಾರವನ್ನು ಟೀಕಿಸುವ ಮಾಧ್ಯಮ ಸಂಸ್ಥೆಗಳ ಮೇಲೆ ತನಿಖೆಯನ್ನು ಕೈಗೊಂಡಿರುವುದು ಇದೇ ಮೊದಲಲ್ಲ” ಎಂದು ಹೇಳಿದ್ದಾರೆ.