ಮಾಸ್ಕೋ: ಕಳೆದ ಒಂದೂವರೆ ವರ್ಷಗಳಿಂದ ಉಕ್ರೇನ್ ದೇಶದ ಮೇಲೆ ಯುದ್ಧ (Ukraine War) ನಡೆಸುತ್ತಿರುವ ರಷ್ಯಾ ಈಗ ಹೊಸ ಆರೋಪವೊಂದನ್ನು ಮಾಡಿದೆ. ನಮ್ಮ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russia President Vladimir Putin)ರನ್ನು ಹತ್ಯೆ ಮಾಡಲು ಉಕ್ರೇನ್ ಪ್ರಯತ್ನ ಮಾಡುತ್ತಿದೆ. ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸ ಕ್ರೆಮ್ಲಿನ್ ಮೇಲೆ ಡ್ರೋನ್ ದಾಳಿ ನಡೆಸಿದೆ. ರಷ್ಯಾದ ಮಿಲಿಟರಿ ಮತ್ತು ಭದ್ರತಾ ಪಡೆಗಳು ಈ ಡ್ರೋನ್ನ್ನು ನಿಷ್ಕ್ರಿಯಗೊಳಿಸಿವೆ ಎಂದು ಕ್ರೆಮ್ಲಿನ್ ಪ್ರಕಟಣೆ ಹೊರಡಿಸಿದೆ.
‘ರಷ್ಯಾದ ಮೇಲೆ ಉಕ್ರೇನ್ 2 ಡ್ರೋನ್ಗಳ ಮೂಲಕ ದಾಳಿಯನ್ನು ನಡೆಸಿದೆ. ಈ ಅಟ್ಯಾಕ್ನ್ನು ನಾವು ಯೋಜಿತ ಉಗ್ರ ದಾಳಿ ಎಂದು ಪರಿಗಣಿಸುತ್ತೇವೆ’ ಎಂದೂ ರಷ್ಯಾ ಸರ್ಕಾರ ಹೇಳಿಕೆ ನೀಡಿದೆ. ‘ಅಧ್ಯಕ್ಷ ವ್ಲಾಡಿಮಿರ್ ಪುಟಿನ್ಗೆ ಯಾವುದೇ ಅಪಾಯವಾಗಿಲ್ಲ. ಕಾರಣ ಅವರು ದಾಳಿ ನಡೆದ ಸಂದರ್ಭದಲ್ಲಿ ಮಾಸ್ಕೋದ ಹೊರಭಾಗದಲ್ಲಿರುವ ಅವರ ನೋವೋ ಒಗರಿಯೋವೊ ನಿವಾಸದಲ್ಲಿ ಇದ್ದರು. ಕ್ರೆಮ್ಲಿನ್ ಕಟ್ಟಡಕ್ಕೂ ಹಾನಿಯಾಗಿಲ್ಲ’ ಎಂದು ಮಾಹಿತಿ ನೀಡಿದೆ. ಇನ್ನು ಉಕ್ರೇನ್ ಹಾರಿಸಿದ ಡ್ರೋನ್ನ್ನು ರಷ್ಯಾ ಮಿಲಿಟರಿ ಪಡೆಗಳು ನಿಷ್ಕ್ರಿಯಗೊಳಿಸಿದಾಗ ಭುಗಿಲೆದ್ದ ಹೊಗೆಯನ್ನು ತೋರಿಸುವ ವಿಡಿಯೊಗಳು ರಷ್ಯನ್ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕೂಡ ವೈರಲ್ ಆಗುತ್ತಿವೆ.
ಯುದ್ಧ ಸನ್ನಿವೇಶ, ಸಂಘರ್ಷದ ನಡುವೆ ಇಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಫಿನ್ಲ್ಯಾಂಡ್ಗೆ ಭೇಟಿ ಕೊಟ್ಟಿದ್ದಾರೆ. ಡ್ರೋನ್ ದಾಳಿಯ ಬಗ್ಗೆ ಉಕ್ರೇನ್ ಇದುವರೆಗೂ ಯಾವುದೇ ಹೇಳಿಕೆಯನ್ನೂ ಬಿಡುಗಡೆ ಮಾಡಿಲ್ಲ. ರಷ್ಯಾ ಮಾಡುತ್ತಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಉಕ್ರೇನ್ ಸರ್ಕಾರವನ್ನು ಕೆಲವು ಮಾಧ್ಯಮಗಳು ಪ್ರಶ್ನಿಸಿವೆ. ಆದರೆ ಸರ್ಕಾರ ಮೌನ ವಹಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Russian oil : ಮಾರ್ಚ್‌ನಲ್ಲಿ ವಾಡಿಕೆಯ ಇರಾಕಿಗಿಂತ ರಷ್ಯಾದಿಂದಲೇ ಎರಡು ಪಟ್ಟು ಹೆಚ್ಚು ತೈಲ ಖರೀದಿಸಿದ ಭಾರತ