ಲಂಡನ್ನ ಹೀಥ್ರೋ ವಿಮಾನ ನಿಲ್ದಾಣದಲ್ಲಿ ಡಿ.29ರಂದು ಸ್ವಲ್ಪ ಪ್ರಮಾಣದ ವಿಕಿರಣಶೀಲ ಯುರೇನಿಯಂ ಸಿಕ್ಕಿತ್ತು. ಸರಕು ವಿಮಾನವೊಂದರಲ್ಲಿ ತಲುಪಿದ್ದ ಈ ಯುರೇನಿಯಂನ ಜಾಡು ಹಿಡಿದ ಲಂಡನ್ ಪೊಲೀಸ್ ಭಯೋತ್ಪಾದನಾ ನಿಗ್ರಹ ದಳ ಕೇಸ್ಗೆ ಸಂಬಂಧಪಟ್ಟಂತೆ 60 ವರ್ಷದ ಉದ್ಯಮಿಯೊಬ್ಬನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದೆ. ಬಳಿಕ ಈ ಕೇಸ್ನಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಿದ್ದಂತೆ ಕಾಣುತ್ತಿಲ್ಲ. ಜನರಿಗೆ ಹಾನಿಯಾಗುವ ಅಂಶಗಳು ಇದರಲ್ಲಿ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಯುರೇನಿಯಂನ ಉಪಯೋಗಗಳು ಹಲವು. ಇದನ್ನು ಅಣುಸ್ಥಾವರಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅಣುಬಾಂಬ್ಗಳ ತಯಾರಿಕೆಯಲ್ಲಿ ಪ್ರಮುಖ ಕಚ್ಚಾವಸ್ತು. ಹಾಗಾಗಿ ಈಗ ಲಂಡನ್ನಲ್ಲಿ ಯುರೇನಿಯಂ ಸಿಕ್ಕ ಕೂಡಲೇ ಆತಂಕ ಸೃಷ್ಟಿಯಾಗಿತ್ತು. ಅದಕ್ಕೆ ಉಗ್ರಲಿಂಕ್ ಇರಬಹುದಾ ಎಂಬ ಆಯಾಮದಲ್ಲೇ ತನಿಖೆ ಪ್ರಾರಂಭವಾಗಿತ್ತು. ಹೀಗೆ ತನಿಖೆ ಪ್ರಾರಂಭಿಸಿದ ಪೊಲೀಸರು ಉದ್ಯಮಿಯೊಬ್ಬರನ್ನು ಬಂಧಿಸಿ, ಉಗ್ರ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಅಂತಿಮವಾಗಿ ಇದು ಅಂಥ ಕೃತ್ಯಕ್ಕಾಗಿ ಆಮದು ಮಾಡಿಕೊಂಡಿದ್ದಲ್ಲ ಎಂಬುದು ಸ್ಪಷ್ಟವಾಗಿದೆ. ಉದ್ಯಮಿಯನ್ನು ಸದ್ಯ ಜಾಮೀನು ಆಧಾರದಲ್ಲಿ ಬಿಡುಗಡೆ ಮಾಡಿ ಕಳಿಸಲಾಗಿದೆ.
ಇತ್ತೀಚೆಗೆ ಇರಾನ್ -ಬ್ರಿಟನ್ ನಡುವಿನ ಉದ್ವಿಗ್ನತೆ ತುಸು ಹೆಚ್ಚಾಗಿದೆ. ಅದರ ಬೆನ್ನಲ್ಲೇ ಹೀಗೆ ಯುರೇನಿಯಂ ಸಿಕ್ಕಿದ್ದು ಹತ್ತುಹಲವು ಪ್ರಶ್ನೆ ಹುಟ್ಟುಹಾಕಿತ್ತು. ಹೀಗಾಗಿಯೇ ತನಿಖೆಯನ್ನೂ ಗಂಭೀರವಾಗಿ ಪರಿಗಣಿಸಲಾಗಿತ್ತು. ಅಂದಹಾಗೇ, ಇಂಗ್ಲೆಂಡ್ ಪರವಾಗಿ ಇರಾನ್ನಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಬ್ರಿಟಿಷ್-ಇರಾನಿಯನ್ ಪ್ರಜೆ ಅಲಿರೇಜಾ ಅಕ್ಬರಿ (61) ಎಂಬಾತನನ್ನು ಇರಾನ್ ಸರ್ಕಾರ ಶನಿವಾರ ಗಲ್ಲಿಗೇರಿಸಿದೆ.
ಇದನ್ನೂ ಓದಿ: ಸಮರಾಂಕಣ | ಏನನ್ನೂ ಧ್ವಂಸಗೊಳಿಸದೆ ಶತ್ರುವಿಗೆ ಸಾವು ತಂದೊಡ್ಡುವ ಅಸ್ತ್ರ Hellfire R9X