ಪೂರ್ವ ಆಫ್ರಿಕಾದ ಸೊಮಾಲಿಯಾದಲ್ಲಿ ಐಸಿಸ್ ಭಯೋತ್ಪಾದಕರ ವಿರುದ್ಧ ಅಮೆರಿಕ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಐಸಿಸ್ (ಇಸ್ಲಾಮಿಕ್ ಸ್ಟೇಟ್-ISIS) ಉಗ್ರ ಸಂಘಟನೆ ಮುಖ್ಯಸ್ಥ ಬಿಲಾಲ್ ಅಲ್-ಸುಡಾನಿ ಮತ್ತು ಆತನ 10 ಮಂದಿ ಸಹಚರರನ್ನು ಯುಎಸ್ ಸೇನೆ ಹತ್ಯೆಗೈದಿದೆ. ಸೇನಾ ಕಾರ್ಯಾಚರಣೆ ವೇಳೆ ಬಿಲಾಲ್ ಮತ್ತು 10 ಮಂದಿ ಮೃತಪಟ್ಟಿದ್ದನ್ನು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ದೃಢಪಡಿಸಿದ್ದಾರೆ.
‘ಐಸಿಸ್ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜನವರಿ 25ರಂದು ಆದೇಶ ನೀಡಿದ್ದರು. ಆ ಆದೇಶದ ಅನ್ವಯ ಉತ್ತರ ಸೊಮಾಲಿಯಾದಲ್ಲಿ ಐಸಿಸ್ ನೆಲೆ ಮೇಲೆ ದಾಳಿ ನಡೆಸಲಾಗಿತ್ತು. ಇದರಲ್ಲಿ ಪ್ರಮುಖ ನಾಯಕ ಬಿಲಾಲ್ ಮೃತಪಟ್ಟಿದ್ದಾನೆ. ಈತ ಜಾಗತಿಕವಾಗಿ ಐಸಿಸ್ ಜಾಲ ಹೆಚ್ಚಲು ಪ್ರಮುಖ ಪಾತ್ರ ವಹಿಸಿದ್ದ. ಅಷ್ಟೇ ಅಲ್ಲ, ಇತ್ತೀಚಿನ ದಿನಗಳಲ್ಲಿ ಆಫ್ರಿಕಾದಲ್ಲಿ ಐಸಿಸ್ ಭಯೋತ್ಪಾದನಾ ಚಟುವಟಿಕೆಗಳನ್ನು ಹೆಚ್ಚೆಚ್ಚು ನಡೆಸುತ್ತಿದ್ದ. ಅಫ್ಘಾನಿಸ್ತಾನ ಸೇರಿ ಇನ್ನೂ ಹಲವು ದೇಶಗಳಲ್ಲಿ ಉಗ್ರ ಚಟುವಟಿಕೆಗಳಿಗೆ ಹಣಕಾಸಿನ ನೆರವು ಒದಗಿಸುತ್ತಿದ್ದ’ ಎಂದು ಲಾಯ್ಡ್ ಆಸ್ಟಿನ್ ತಿಳಿಸಿದ್ದಾರೆ.
ಯುಎಸ್ ಸೇನಾ ಕಾರ್ಯಾಚರಣೆಯಲ್ಲಿ ನಾಗರಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಯುಎಸ್ ಸೇನೆಯ ಈ ಕಾರ್ಯಾಚರಣೆಯಿಂದ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಲ್ಲಿ ಕೂಡ ಸುರಕ್ಷಿತ ಭಾವ ಮೂಡಿದೆ. ಭಯೋತ್ಪಾದನೆ ಎಂಬುದು ಜಗತ್ತಿನ ಪಾಲಿಗೆ ರಾಕ್ಷಸ. ಅದರ ವಿರುದ್ಧ ಹೋರಾಟದಲ್ಲಿ ಅಮೆರಿಕ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ. ಈಗ ಐಸಿಸ್ ನಾಯಕನ ಹತ್ಯೆ ಗೈದ ನಮ್ಮ ಸೇನೆ, ಆತನ ಬಗ್ಗೆ ಮಾಹಿತಿ ನೀಡಿದ ಗುಪ್ತಚರ ಇಲಾಖೆ ಹಾಗೂ ಈ ಕಾರ್ಯಾಚರಣೆಯಲ್ಲಿ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇವೆ’ ಎಂದು ಆಸ್ಟಿನ್ ತಿಳಿಸಿದ್ದಾರೆ.