ವಾಷಿಂಗ್ಟನ್: ಸ್ಕಾಟ್ಲೆಂಡ್‌ನ ಬಾಲ್ಮೋರ್ ಹೈಲ್ಯಾಂಡ್ಸ್ ರೆಸಿಡೆನ್ಸಿಯಲ್ಲಿ ಮೃತಪಟ್ಟ ಬ್ರಿಟನ್ ರಾಣಿ ‘ಕ್ವೀನ್ ಎಲಿಜಬೆತ್’ (Queen Elizabeth) ಅಂತ್ಯಕ್ರಿಯೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಅವರ ಅಂತಿಮ ಸಂಸ್ಕಾರದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಯುಎಸ್ ಅಧ್ಯಕ್ಷ ಜೋ ಬೈಡೆನ್ ಕೂಡ ಪಾಲ್ಗೊಳ್ಳಲಿದ್ದಾರೆ. ಈ ಬಗ್ಗೆ ಯುಎಸ್ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ‘ಕ್ವೀನ್ ಎಲಿಜಬೆತ್ ಅಂತ್ಯಕ್ರಿಯೆ ಬಗ್ಗೆ ಜಾಸ್ತಿ ಮಾಹಿತಿ ಇನ್ನೂ ಗೊತ್ತಿಲ್ಲ. ಆದರೆ ನಾನು ಅದರಲ್ಲಿ ಪಾಲ್ಗೊಳ್ಳುತ್ತೇನೆ’ ಎಂದಿದ್ದಾರೆ.
ಕ್ವೀನ್ ಎಲಿಜಬೆತ್ ಅವರು ಸೆಪ್ಟೆಂಬರ್ 8ರಂದು ಮೃತಪಟ್ಟಿದ್ದಾರೆ. 96 ವರ್ಷದ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಕಳೆದ ಅಕ್ಟೋಬರ್ನಿಂದಲೂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇತ್ತು. ಅವರ ಅಂತ್ಯಕ್ರಿಯೆ ಯಾವಾಗ ಎಂಬ ಬಗ್ಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಅಷ್ಟೇ ಅಲ್ಲ, ಅಂತ್ಯಕ್ರಿಯೆ ವಿಚಾರದಲ್ಲಿ ಸಣ್ಣ ಗೊಂದಲವೂ ಏರ್ಪಟ್ಟಿದೆ. ರಾಣಿ ಲಂಡನ್ನಲ್ಲಿ ಮೃತಪಡದೆ, ಸ್ಕಾಟ್ಲೆಂಡ್ನಲ್ಲಿ ಕೊನೆಯುಸಿರೆಳಿದಿದ್ದರಿಂದ, ಬ್ರಿಟಷ್ ಆಡಳಿತವು ಸ್ಕಾಟ್ಲೆಂಡ್‌ನಿಂದ ರಾಣಿಯ ಪಾರ್ಥಿವ್ ಶರೀರವನ್ನು ಲಂಡನ್‌ಗೆ ತಂದು, ಅಂತಿಮ ಸಂಸ್ಕಾರ ಪೂರೈಸುವ ಕಾರ್ಯಕ್ಕೆ ಆಪರೇಷನ್ ಯೂನಿಕಾರ್ನ್ (Operation Unicorn) ಎಂದು ಹೆಸರಿಟ್ಟಿದೆ.
ಆಪರೇಷನ್ ಯೂನಿಕಾರ್ನ್ ಪ್ರಕಾರ, ರಾಣಿ ಮೃತಪಟ್ಟ ಮೊದಲ ವಾರದಲ್ಲಿ ಅವರ ಪಾರ್ಥಿವ ಶರೀರವನ್ನು ಸ್ಕಾಟ್ಲೆಂಡ್‌ನಿಂದ ಬಕಿಂಗ್‌ಹ್ಯಾಮ್ ಪ್ಯಾಲೇಸ್‌ಗೆ ತರಲಾಗುತ್ತದೆ. ಇದಕ್ಕೂ ಮೊದಲು ಅವರ ಪಾರ್ಥಿವ ಶರೀರವನ್ನು ಬಾಲ್ಮೋರ್‌ದಿಂದ ಹೋಲಿರೂಡ್‌ಹೌಸ್‌ಗೆ ಶಿಫ್ಟ್ ಮಾಡಲಾಗುತ್ತದೆ. ಈ ಹೌಸ್, ಸ್ಕಾಟ್ಲೆಂಡ್‌ನ ರಾಜಧಾನಿ ಎಡಿನ್‌ಬರ್ಗ್‌ನಲ್ಲಿದೆ. ಇಲ್ಲಿ ಕೆಲ ಕಾಲದವರೆಗೆ ಪಾರ್ಥಿವ ಶರೀರವನ್ನು ಇಡಲಾಗುತ್ತದೆ. ಆ ಬಳಿಕ, ರಿಸಪ್ಷನ್ ಸರ್ವೀಸ್‌ಗಾಗಿ ಪಾರ್ಥಿವ ಶರೀರವನ್ನು ಮೆರವಣಿಗೆಯ ಮೂಲಕ ರಾಯಲ್ ಮೈಲ್‌ಗೆ ತರಲಾಗುತ್ತದೆ.
ಇದನ್ನೂ ಓದಿ: Queens Royal Fashion | ಹೀಗಿತ್ತು ಕ್ವೀನ್ ಎಲಿಜಬೆತ್ ಯೂನಿಕ್ ಸಿಗ್ನೇಚರ್ ಸ್ಟೈಲ್