Site icon Vistara News

ತೈವಾನ್ ಅಧ್ಯಕ್ಷೆ ಪಕ್ಕ ನಿಂತು ಚೀನಾಕ್ಕೊಂದು ಖಡಕ್​ ಸಂದೇಶ ಕೊಟ್ಟ ನ್ಯಾನ್ಸಿ; ಎಚ್ಚರಿಕೆಗೆ ಡೋಂಟ್​​ ಕೇರ್​ !

Nancy Pelosi

ತೈಪೆ: ಚೀನಾದ ಎಚ್ಚರಿಕೆಯ ನಡುವೆಯೂ ಅಮೆರಿಕದ ಜನಪ್ರತಿನಿಧಿ ಸಭೆಯ ಸ್ಪೀಕರ್​ ನ್ಯಾನ್ಸಿ ಪೆಲೋಸಿ (Nancy Pelosi) ತೈವಾನ್​ ನೆಲಕ್ಕೆ ಕಾಲಿಟ್ಟಿದ್ದಲ್ಲದೆ, ಅಲ್ಲಿನ ಅಧ್ಯಕ್ಷೆ ತ್ಸೈ ಇಂಗ್-ವೆನ್​​ರನ್ನು ಭೇಟಿಯಾದರು. ಇದೇ ವೇಳೆ ಮಾತನಾಡಿದ ನ್ಯಾನ್ಸಿ, ‘ತೈವಾನ್​ ವಿಚಾರದಲ್ಲಿ ನಮಗೆ (ಯುಎಸ್​​) ಇರುವ ಬದ್ಧತೆಯನ್ನು ನಾವೆಂದಿಗೂ ತೊರೆಯುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸುವ ಸಲುವಾಗಿಯೇ ನಮ್ಮ ನಿಯೋಗ ಇಲ್ಲಿಗೆ ಬಂದಿದೆ. ತೈವಾನ್​ ಜತೆಗಿನ ನಮ್ಮ ಸ್ನೇಹಕ್ಕೆ ಯಾವುದೇ ಚ್ಯುತಿ ಬರಲೂ ಬಿಡುವುದಿಲ್ಲ ಎಂದು ಇದೇ ವೇಳೆ ಹೆಮ್ಮೆಯಿಂದ ಹೇಳುತ್ತಿದ್ದೇನೆ’ ಎಂದು ತಿಳಿಸಿದ್ದಾರೆ. ಈ ಮೂಲಕ ಚೀನಾಕ್ಕೊಂದು ಖಡಕ್​ ಸಂದೇಶ ಕೊಟ್ಟಿದ್ದಾರೆ.

ಅಮೆರಿಕ-ಚೀನಾ ಮಧ್ಯೆ ವೈರತ್ವ ಇದ್ದರೂ ಅದು ದೊಡ್ಡಮಟ್ಟದ ಬಹಿರಂಗಿತ ಶತ್ರುತ್ವ ಅಲ್ಲ. ದೊಡ್ಡಣ್ಣನೆಂಬ ಸ್ಥಾನವನ್ನು ಅಮೆರಿಕದ ಕೈಯಿಂದ ಕಿತ್ತುಕೊಳ್ಳಲು ಚೀನಾ ಸದಾ ಪ್ರಯತ್ನವನ್ನು ಜಾರಿಯಲ್ಲಿಟ್ಟಿದೆ. ಹಾಗೇ, ಚೀನಾದ ರಾಜತಾಂತ್ರಿಕ ಸಿದ್ಧಾಂತಗಳನ್ನು ಅಮೆರಿಕವೂ ವಿರೋಧಿಸುತ್ತಲೇ ಬಂದಿದೆ ಮತ್ತು ಅದು ಕುತಂತ್ರಿ ದೇಶ ಎಂದೇ ಹೇಳಿಕೊಂಡು ಬರುತ್ತಿದೆ. ಅದರಲ್ಲೂ ನ್ಯಾನ್ಸಿ ಪೊಲೋಸಿ ಚೀನಾದ ಕಟು ಟೀಕಾಕಾರರು. ಏಷ್ಯಾ ಪ್ರವಾಸದಲ್ಲಿರುವ ಅವರು ತೈವಾನ್​ಗೆ ಭೇಟಿ ನೀಡುತ್ತಾರೆ ಎಂದು ವರದಿಯಾದಾಗಿನಿಂದಲೂ ಚೀನಾ ವಿರೋಧಿಸುತ್ತಲೇ ಇತ್ತು. ‘ನ್ಯಾನ್ಸಿ ತೈವಾನ್​ ಭೇಟಿಯನ್ನು ತಡೆಯದೆ ಇದ್ದರೆ, ನೀವು ಖಂಡಿತ ಅಪಾಯ ಮೈಮೇಲೆ ಎಳೆದುಕೊಳ್ಳುತ್ತೀರಿ’ ಎಂದು ಬೀಜಿಂಗ್​ ಸರ್ಕಾರ ಅಮೆರಿಕಕ್ಕೆ ಎಚ್ಚರಿಕೆಯನ್ನೂ ಕೊಟ್ಟಿತ್ತು. ಅದ್ಯಾವುದಕ್ಕೂ ಸ್ವಲ್ಪವೂ ಬಗ್ಗದ ನ್ಯಾನ್ಸಿ ತೈವಾನ್​ಗೆ ಬಂದಿಳಿದಿದ್ದಾರೆ. ಕಳೆದ 25ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ಈ ದೇಶಕ್ಕೆ ಭೇಟಿ ಕೊಟ್ಟಂತಾಗಿದೆ.

ಚೀನಾಕ್ಕೆ ಉರಿ !
ತೈವಾನ್​ ತನ್ನದೇ ಭೂಭಾಗ ಎಂದೇ ವಾದಿಸುತ್ತ ಬಂದಿರುವ ಚೀನಾಕ್ಕೆ ನ್ಯಾನ್ಸಿ ಪೆಲೋಸಿ ಅಲ್ಲಿಗೆ ಭೇಟಿ ಕೊಟ್ಟಿದ್ದು ಭಯಂಕರ ಸಿಟ್ಟು ತರಿಸಿದೆ. ತನಗೆ ಸ್ವಾತಂತ್ರ್ಯ ಸಿಕ್ಕಿದೆ, ನಮ್ಮದು ಪ್ರತ್ಯೇಕ ರಾಷ್ಟ್ರ ಎಂದು ತೈವಾನ್​ ವಾದಿಸುತ್ತಿದ್ದರೂ, ಚೀನಾ ಅದನ್ನು ಸುತಾರಾಂ ಒಪ್ಪುತ್ತಿಲ್ಲ. ತೈವಾನ್​ನ್ನು ಹೆದರಿಸಲು ನಿರಂತರವಾಗಿ ಆ ದೇಶದ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಲೇ ಇದೆ. ತೈವಾನ್​ ತಮ್ಮದೇ ಭೂಭಾಗ. ನಾವದನ್ನು ಯಾವಾಗ ಬೇಕಾದರೂ ವಶಪಡಿಸಿಕೊಳ್ಳುತ್ತೇವೆ ಎಂದು ಆಗಾಗ ಎಚ್ಚರಿಕೆಯನ್ನು ನೀಡುತ್ತಲೇ ಇದೆ. ತೈವಾನ್​​ನ್ನು ತನ್ನ ಕೈವಶ ಮಾಡಿಕೊಳ್ಳಬೇಕೆಂಬ ಹೋರಾಟದಲ್ಲಿರುವ ಚೀನಾಕ್ಕೆ ಈಗ, ಅಮೆರಿಕ ತನಗೆ ಅಡ್ಡಗಾಲು ಹಾಕುತ್ತಿರುವಂತೆ ಭಾಸವಾಗುತ್ತಿದೆ.

ಯುಎಸ್​ನ ಅತ್ಯುನ್ನತ ಸ್ಥಾನದಲ್ಲಿರುವ ಅಧಿಕಾರಿಯೊಬ್ಬರು ಹೀಗೆ ತೈವಾನ್​ಗೆ ಭೇಟಿಕೊಟ್ಟು, ಸ್ನೇಹದ ಭರವಸೆ ಕೊಟ್ಟರೆ, ಇಡೀ ಜಗತ್ತಿಗೆ ವ್ಯತಿರಿಕ್ತ ಸಂದೇಶ ಹೋಗುತ್ತದೆ. ತೈವಾನ್​ ಸ್ವಾತಂತ್ರ್ಯಕ್ಕೆ ಅಮೆರಿಕ ಬೆಂಬಲ ಕೊಡುತ್ತಿದೆ ಎಂಬ ಭಾವನೆ ಉಳಿದ ರಾಷ್ಟ್ರಗಳಲ್ಲೂ ಮೂಡುತ್ತದೆ. ಅಮೆರಿಕದ ಮಿತ್ರರಾಷ್ಟ್ರಗಳು ತೈವಾನ್​ ಪ್ರತ್ಯೇಕ ರಾಷ್ಟ್ರವೆಂದೇ ಪರಿಗಣಿಸುತ್ತವೆ. ಇದು ನಮಗೆ ಅವಮಾನ ಎಂಬುದು ಚೀನಾದ ವಾದ. ‘ಚೀನಾ-ತೈವಾನ್​ ನಡುವಿನ ಉದ್ವಿಗ್ನತೆಗೆ ಆಳವಾದ ಇತಿಹಾಸವಿದೆ. ತೈವಾನ್​ ಪ್ರತ್ಯೇಕವಾದ ದೇಶವಲ್ಲ. ಆದರೆ ಅಮೆರಿಕ ತೈವಾನ್​ಗೆ ಭೇಟಿ ಕೊಟ್ಟು ಪ್ರತ್ಯೇಕತೆ ಸೃಷ್ಟಿಸುವ ಅಗತ್ಯವಿಲ್ಲ. ತೈವಾನ್​ಗೆ ಅಮೆರಿಕ ಅಧಿಕಾರಿ ಭೇಟಿ ಕೊಡುವ ಮೂಲಕ ಚೀನಾದ ಸಮಗ್ರತೆ ಮತ್ತು ಪ್ರಾದೇಶಿಕ ಒಗ್ಗಟ್ಟನ್ನು ದುರ್ಬಲಗೊಳಿಸುತ್ತಿದ್ದಾರೆ. ಯುಎಸ್​-ಚೀನಾ ಸಂಬಂಧದ ಮೇಲೆ ಕೂಡ ಇದು ಗಂಭೀರ ಪರಿಣಾಮ ಬೀರಲಿದೆ. ಅದೆಲ್ಲಕ್ಕಿಂತ ಮುಖ್ಯವಾಗಿ, ಈಗಾಗಲೇ ತನಗೆ ಸ್ವಾತಂತ್ರ್ಯ ಬಂದಿದೆ ಎಂದು ಹೇಳುತ್ತಿರುವ ತೈವಾನ್​ಗೆ ಇನ್ನಷ್ಟು ಬಲ ಬರುತ್ತದೆ’ ಎಂದೂ ಚೀನಾ ಹೇಳಿದೆ. ಈ ಬಗ್ಗೆ ಚೀನಾ ಅಧ್ಯಕ್ಷ ಷಿ ಜಿನ್​​ ಪಿಂಗ್​ ಕೂಡ ಪ್ರತಿಕ್ರಿಯೆ ನೀಡಿ ‘ನಾವು ಜಗತ್ತಿನ ಎಲ್ಲ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿದ್ದೇವೆ. ಯುಎಸ್​ನ ಪ್ರಚೋದನೆಗಳನ್ನೂ ಗಮನಿಸುತ್ತಿದ್ದೇವೆ’ ಎಂದಷ್ಟೇ ಹೇಳಿದ್ದಾರೆ.

ಆರ್ಥಿಕ ನಿರ್ಬಂಧಕ್ಕೆ ಮುಂದಾದ ಚೀನಾ
ಎಷ್ಟೆಲ್ಲ ವಿರೋಧಿಸಿ, ಯುದ್ಧ ವಿಮಾನಗಳ ಮೂಲಕ ಹೆದರಿಸಿದರೂ ಅಮೆರಿಕ ಜನಪ್ರತಿನಿಧಿ ಸಭೆಯ ಸ್ಪೀಕರ್​ ನ್ಯಾನ್ಸಿ ತೈವಾನ್​ಗೆ ಭೇಟಿ ಕೊಟ್ಟಿದ್ದರಿಂದ ಚೀನಾ ತನ್ನ ಕೈಯಲ್ಲಾದ ಹುಳುಕನ್ನೆಲ್ಲ ಪ್ರದರ್ಶಿಸುತ್ತಿದೆ. ಈಗ ತೈವಾನ್​​ಗೆ ಆರ್ಥಿಕ ಹೊಡೆತ ಕೊಡಲು ಮುಂದಾಗಿರುವ ಡ್ರ್ಯಾಗನ್, ತೈವಾನ್​​ನಿಂದ ಹಣ್ಣು ಮತ್ತು ಮೀನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದೆ. ಹಾಗೇ, ದ್ವೀಪರಾಷ್ಟ್ರಕ್ಕೆ ಮರಳು ಸಾಗಣೆ ಮಾಡುವುದಕ್ಕೂ ನಿರ್ಬಂಧ ವಿಧಿಸಿದೆ.

ಇದನ್ನೂ ಓದಿ: ತೈವಾನ್‌ ವಾಯು ವಲಯಕ್ಕೆ ಚೀನಾದ 21 ಯುದ್ಧ ವಿಮಾನಗಳ ಅತಿಕ್ರಮಣ

Exit mobile version