Site icon Vistara News

ಸಾರ್ವಜನಿಕ ಸ್ಥಳದಲ್ಲಿ ಕಿರುಚಿದ ಟೆಕ್ಸಾಸ್​ ಯುವತಿ ಅರೆಸ್ಟ್​; ದುಬೈ ಕಾನೂನು ನೋಡಿ ಭಯಗೊಂಡ ಅಮ್ಮ!

Dubai Law

ದುಬೈನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಿರುಚಾಡಿದ ಮಹಿಳೆಯನ್ನು ಪೊಲೀಸರು ಬಂಧಿಸಿ (US Woman Jailed In Dubai) ಬಳಿಕ ಬಿಡುಗಡೆ ಮಾಡಿದ್ದಾರೆ. ಬಹುತೇಕ ದೇಶಗಳಲ್ಲಿ ಮಹಿಳೆಯರು/ಪುರುಷರೆಲ್ಲ ಸಾರ್ವಜನಿಕವಾಗಿ ಮನಸಿಗೆ ಬಂದಂತೆ ಕೂಗುತ್ತ, ಕಿರುಚುತ್ತ ಇದ್ದರೂ ಕೇಳುವವರೂ ಇಲ್ಲ, ಹೇಳುವವರೂ ಇಲ್ಲ. ಆದರೆ ದುಬೈ (Dubai Lwa)​ನಲ್ಲಿ ಹೇಳಿಕೇಳಿ ಕಾನೂನುಗಳೆಲ್ಲ ಕಠಿಣ. ಆ ಅನುಭವ ಟೆಕ್ಸಾಸ್​​ನ ಹೂಸ್ಟ್​​ನ್​​ ಮೂಲದ ಮಹಿಳೆಯೊಬ್ಬರಿಗೆ ಆಗಿದೆ. ಆಕೆ ಸೋಷಿಯಲ್ ಮೀಡಿಯಾ ಇನ್​ಫ್ಲ್ಯೂಯೆನ್ಸರ್​ ಆಗಿದ್ದು, ಮೇ ತಿಂಗಳಲ್ಲಿ ಯುಎಇ ಪ್ರವಾಸಕ್ಕೆಂದು ಸ್ನೇಹಿತೆಯೊಟ್ಟಿಗೆ ತೆರಳಿದ್ದರು. ಆದರೆ ಅಲ್ಲೇ ಅರೆಸ್ಟ್​ ಆಗಿದ್ದರು. ಇನ್ನೂ ಅವರಿಗೆ ವಾಪಸ್ ಟೆಕ್ಸಾಸ್​ಗೆ ಬರಲು ಸಾಧ್ಯವಾಗಲಿಲ್ಲ. ದುಬೈ ಸರ್ಕಾರ ಆಕೆಯ ಪ್ರಯಾಣಕ್ಕೆ ನಿರ್ಬಂಧ ಹಾಕಿದೆ.

ಈಕೆಯ ಹೆಸರು ಟಿಯೆರಾ ಯಂಗ್ ಅಲೆನ್. ಆಕೆಯ ತಾಯಿ ಟಿನಾ ಬಾಕ್ಸ್​ಟರ್​ ಟೆಕ್ಸಾಸ್​ನಲ್ಲಿಯೇ ಇದ್ದಾರೆ. ಇದೀಗ ಮಾಧ್ಯಮವೊಂದಕ್ಕೆ ಈ ವಿಷಯ ತಿಳಿಸಿದ್ದು ‘ನನ್ನ ಮಗಳು ದುಬೈನಲ್ಲಿಯೇ ಸಿಲುಕಿಕೊಂಡಿದ್ದಾಳೆ. ಅವಳಿನ್ನೂ ವಾಪಸ್ ಬರಲು ಸಾಧ್ಯವಾಗುತ್ತಿಲ್ಲ. ನಮಗೆ ಆಕೆಯ ಭವಿಷ್ಯದ ಬಗ್ಗೆ ಭಯವಾಗುತ್ತಿದೆ’ ಎಂದು ಹೇಳಿದ್ದಾರೆ. ‘ನನ್ನ ಮಗಳು ಮತ್ತು ಆಕೆಯ ಫ್ರೆಂಡ್ ಇಬ್ಬರೂ ಮೇ ತಿಂಗಳಲ್ಲಿ ದುಬೈಗೆ ಪ್ರವಾಸಕ್ಕೆ ಹೋದರು. ಅಲ್ಲಿ ಹೋಗಿ ಒಂದು ಕಾರನ್ನು ಬಾಡಿಗೆಗೆ ಪಡೆದು ಸುತ್ತಾಡುತ್ತಿದ್ದರು. ಆದರೆ ಇವರ ಕಾರಿಗೆ ಒಂದು ಸಣ್ಣ ಅಪಘಾತವಾಯಿತು. ಹಾಗಂತ ಯಾರಿಗೂ, ಏನೂ ಆಗಲಿಲ್ಲ. ಒಂದು ಸಣ್ಣ ಅಪಘಾತವಷ್ಟೇ. ಆದರೆ ಕಾರು ಆ್ಯಕ್ಸಿಡೆಂಟ್ ಆಗಿದ್ದರಿಂದ, ಅದನ್ನು ಡ್ರೈವ್​ ಮಾಡುತ್ತಿದ್ದ, ಮಗಳ ಸ್ನೇಹಿತೆಯನ್ನು ಪೊಲೀಸರು ವಶಕ್ಕೆ ಪಡೆದರು. ಕಾರನ್ನು ಕೂಡ ಜಪ್ತಿ ಮಾಡಿದರು’.

ಇದನ್ನೂ ಓದಿ: ಅಣ್ಣನ ಕೊಂದವರ ವಿರುದ್ಧ ಹೋರಾಡಲು ಕಾನೂನು ಓದಿ ವಕೀಲನಾಗಿ ಗೆದ್ದ

ಒಂದು ವಾರ ಆಕೆಯನ್ನು ಕಸ್ಟಡಿಯಲ್ಲಿ ಇಟ್ಟು ಬಿಡುಗಡೆಯನ್ನೇನೋ ಮಾಡಿದರು. ಆದರೆ ಇವರ ಬಳಿಯಿಂದ ಜಪ್ತಿ ಮಾಡಿದ್ದ ಕಾರು, ಕ್ರೆಡಿಟ್ ಕಾರ್ಡ್​ಗಳು ಮತ್ತಿತರ ವಸ್ತುಗಳನ್ನು ಪೊಲೀಸರು ಕೊಟ್ಟಿರಲಿಲ್ಲ. ನನ್ನ ಮಗಳು ಅವುಗಳನ್ನು ಬಿಡಿಸಿಕೊಳ್ಳಲೆಂದು ಹೋದಳು. ಆದರೆ ಅಲ್ಲಿದ್ದ ವ್ಯಕ್ತಿ ತುಂಬ ಕ್ರೂರವಾಗಿ ವರ್ತಿಸುತ್ತಿದ್ದ. ಹಣ ಕೊಟ್ಟರೆ ಮಾತ್ರ ವಸ್ತುಗಳನ್ನು ವಾಪಸ್ ಕೊಡುವುದಾಗಿ ಹೇಳಿದ. ಅದಕ್ಕೆ ಮಗಳು ಆಕ್ಷೇಪ ವ್ಯಕ್ತಪಡಿಸಿದಾಗ ಕಿರುಚಿದ. ಅದಕ್ಕೆ ಪ್ರತಿಯಾಗಿ ನನ್ನ ಮಗಳೂ ಕೂಡ ದೊಡ್ಡದಾಗಿ ಕಿರುಚಿ ಅವನಿಗೆ ಬೈದಳು. ಹೀಗೆ ಸಾರ್ವಜನಿಕವಾಗಿ ಆಕೆ ಕೂಗಿದಳು ಎಂಬ ಕಾರಣಕ್ಕೆ ಅಲ್ಲಿದ್ದ ಪೊಲೀಸರು ಕೂಡಲೇ ನನ್ನ ಮಗಳನ್ನು ಬಂಧಿಸಿದರು. ಆಕೆ ಕಿರುಚಿದಳು ಎಂಬ ಒಂದೇ ಕಾರಣಕ್ಕೆ ಅವಳನ್ನು ಅರೆಸ್ಟ್ ಮಾಡಲಾಯಿತು. ಆಕೆ ಜೈಲಿನಲ್ಲಿಟ್ಟು ಬಿಡುಗಡೆ ಮಾಡಿದರೂ, ವಾಪಸ್ ಬರಲು ಇನ್ನೂ ಅವಕಾಶ ಸಿಕ್ಕಿಲ್ಲ. ದುಬೈನಲ್ಲಿ ಮಹಿಳೆಗೆ ಧ್ವನಿ ಎತ್ತಲೂ ಅವಕಾಶ ಇಲ್ಲ. ಧ್ವನಿ ಎತ್ತಿದಳು ಎಂಬ ಒಂದು ಕಾರಣಕ್ಕೆ ಅವಳನ್ನು ಜೈಲಿಗೆ ಹಾಕಲಾಯಿತು’ ಎಂದು ಟಿಯೆರಾ ಯಂಗ್ ಅಲೆನ್ ಅವರ ಅಮ್ಮ ಖೇದ ವ್ಯಕ್ತಪಡಿಸಿದ್ದಾರೆ.

Exit mobile version