ನವ ದೆಹಲಿ: ಭಾರತ ಮೂಲದ ಅಮೆರಿಕನ್ ಪ್ರಜೆ, ಆರೋಗ್ಯ ಮತ್ತು ಬಯೋಟೆಕ್ ವಲಯದಲ್ಲಿ ಖ್ಯಾತ ಉದ್ಯಮಿ, ಲೇಖಕ ವಿವೇಕ್ ರಾಮಸ್ವಾಮಿ(Vivek Ramaswamy)ಯವರು ಕೊನೆಗೂ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ‘2024ನೇ ವರ್ಷದಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆ’ ಎಂದು ಘೋಷಿಸಿದ್ದಾರೆ. 37 ವರ್ಷದ ವಿವೇಕ್ ರಾಮಸ್ವಾಮಿ ಫಾಕ್ಸ್ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ತಾವೂ ಅಮೆರಿಕ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂಬುದನ್ನು ಖಚಿತಪಡಿಸಿದ್ದಾರೆ.
ಅಮೆರಿಕದ ಅತ್ಯಂತ ಹಳೇ ಪಕ್ಷ ಆಗಿರುವ ರಿಪಬ್ಲಿಕನ್ ಪಾರ್ಟಿ ಸದಸ್ಯನಾಗಿರುವ ವಿವೇಕ್ ರಾಮಸ್ವಾಮಿ ಮಾಧ್ಯಮದೊಂದಿಗೆ ಮಾತನಾಡುತ್ತ ‘ಅಮೆರಿಕದಲ್ಲಿ ಈ ದೇಶದ ಆದರ್ಶಗಳನ್ನು ಪುನರುಜ್ಜೀವನಗೊಳಿಸುವ ಸಲುವಾಗಿ, ನಾನು ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲ್ಲಲು ಬಯಸುತ್ತೇನೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದಾರೆ. ಹಾಗೇ ಬಳಿಕ ಟ್ವೀಟ್ ಮಾಡಿರುವ ಅವರು ‘ನಾವು ವೈವಿದ್ಯತೆಯನ್ನು ಪ್ರೀತಿಸಿ, ಒಪ್ಪಿಕೊಳ್ಳುವ ಭರದಲ್ಲಿ, 250ವರ್ಷಗಳ ಹಿಂದಿನ, ಒಗ್ಗಟ್ಟಿನ ಸಿದ್ಧಾಂತಗಳನ್ನೇ ಮರೆತಿದ್ದೇವೆ. ಅದನ್ನು ಮತ್ತೆ ಪುನರುಜ್ಜೀವನ ಗೊಳಿಸಲು ನಾನು ಅಧ್ಯಕ್ಷನಾಗಲು ಬಯಸುತ್ತೇನೆ’ ಎಂದಿದ್ದಾರೆ.
ವಿವೇಕ್ ರಾಮಸ್ವಾಮಿಯವರು ಚಿಕ್ಕವಯಸ್ಸಿನಲ್ಲಿಯೇ ಪ್ರಭಾವಿ ಎನ್ನಿಸಿಕೊಂಡವರು. ಅವರ ತಂದೆ-ತಾಯಿ ಮೂಲತಃ ಕೇರಳದವರಾಗಿದ್ದು, ಇಲ್ಲಿಂದ ಯುಎಸ್ಗೆ ವಲಸೆ ಹೋಗಿದ್ದರು. ವಿವೇಕ್ ರಾಮಸ್ವಾಮಿ ಹುಟ್ಟಿದ್ದು-ಬೆಳೆದಿದ್ದೆಲ್ಲ ಇದೇ ದೇಶದಲ್ಲಿ. ಅವರಿಗೆ ಮದುವೆಯಾಗಿ, ಇಬ್ಬರು ಮಕ್ಕಳಿದ್ದಾರೆ. ಇನ್ನು ರಿಪಬ್ಲಿಕನ್ ಪಕ್ಷದಿಂದ ಡೊನಾಲ್ಡ್ ಟ್ರಂಪ್ ತಾವಂತೂ 2024ರಲ್ಲಿ ಮತ್ತೆ ಅಭ್ಯರ್ಥಿ ಎಂದು ಹೇಳಿದ್ದಾರೆ. ಅದರೊಂದಿಗೆ, ಆ ಪಕ್ಷದ ನಿಕ್ಕಿ ಹ್ಯಾಲೆ ಕೂಡ ತಾವೂ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಇವರೂ ಕೂಡ ಭಾರತ ಮೂಲದವರೇ ಆಗಿದ್ದಾರೆ. ಒಟ್ಟಿನಲ್ಲಿ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಸ್ಪರ್ಧೆಯೇ ಏರ್ಪಡುವಂತೆ ಕಾಣುತ್ತಿದೆ.