ಲಂಡನ್: ಬ್ರಿಟನ್‌ನ ಸಂಸತ್ ಭವನ ಕಟ್ಟಡ (Westminster Palace) ಕುಸಿಯುತ್ತಿದೆಯಂತೆ. ಬ್ರಿಟನ್‌ನ ಸಂಸದರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
147 ವರ್ಷಗಳಷ್ಟು ಹಳೆಯದಾದ ವೆಸ್ಟ್‌ಮಿನ್‌ಸ್ಟರ್ ಅರಮನೆ (Westminster Palace) ಹೀಗೇ ಬಿಟ್ಟರೆ ದೊಡ್ಡದೊಂದು ಅನಾಹುತಕ್ಕೆ ಬಲಿಯಾಗಬಹುದಾದ ನೈಜ, ಹೆಚ್ಚುತ್ತಿರುವ ಅಪಾಯದ ರಿಸ್ಕ್ ಹೊಂದಿದೆ ಎಂದು ಸಂಸತ್ತಿನ ಪಬ್ಲಿಕ್ ಅಕೌಂಟ್ಸ್ ಸಮಿತಿ ಹೇಳಿದೆ. ಈ ವೆಸ್ಟ್‌ಮಿನ್‌ಸ್ಟರ್ ಅರಮನೆಯಲ್ಲೇ ಇಲ್ಲಿನ ಸಂಸತ್ತು (House of commons) ಕಾರ್ಯಾಚರಿಸುತ್ತದೆ.
ಈ ಕಟ್ಟಡ ಸೋರುತ್ತಿದೆ; ಅಲ್ಲಲ್ಲಿ ಗಾರೆ ಉದುರುತ್ತಿದೆ. ಅಗ್ನಿ ಅಕಸ್ಮಿಕದ ಅಪಾಯವನ್ನು ಹೊಂದಿದೆ. ಸುಮಾರು 2500 ಕಡೆಗಳಲ್ಲಿ ಇದಕ್ಕೆ ಆಸ್‌ಬೆಸ್ಟೋಸ್ ತೇಪೆ ಹಾಕಲಾಗಿದೆ ಎಂದು ಸಮಿತಿ ತಿಳಿಸಿದೆ. ಇದರ ಪುನರ್ನವೀಕರಣ ಕೆಲಸ ಅತ್ಯಂತ ಮಂದಗತಿಯಲ್ಲಿದೆ. ಪ್ರತಿವಾರಕ್ಕೆ 25 ಡಾಲರ್‌ನಷ್ಟು ಹಣ ದುರಸ್ತಿಗೆ ಖರ್ಚಾಗುತ್ತಿದೆ ಎಂದು ಸಮಿತಿ ಹೇಳಿದೆ.
2018ರಲ್ಲಿ ಸಂಸದರು ಮತ ಹಾಕಿ, 2020ರಲ್ಲಿ ಈ ಕಟ್ಟಡದಿಂದ ಆಚೆಗೆ ಬರುವುದೆಂದು ನಿರ್ಣಯಿಸಿದ್ದರು. ಕಟ್ಟಡ ಪೂರ್ತಿ ಖಾಲಿ ಮಾಡದಿರುವುದರಿಂದ ಭಾರಿ ದುರಸ್ತಿಗಳು ಸಾಧ್ಯವಾಗುತ್ತಿಲ್ಲ. ಇದರ ಮಾಡು ಸೋರುತ್ತಿದೆ; ಶತಮಾನದಷ್ಟು ಹಳೆಯದಾದ ಸ್ಟೀಮ್ ಪೈಪ್‌ಗಳು ಒಡೆದಿವೆ. ಗಾರೆ ಉದುರುತ್ತಿದೆ. ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಕೆಲಸಗಳು 1940ರ ಬಳಿಕ ನವೀಕರಣಗೊಂಡಿಲ್ಲ. ಈ ಕಟ್ಟಡವನ್ನು ಮುಂದಿನ ತಲೆಮಾರಿಗೆ ಸಂರಕ್ಷಿಸಲು ಸಾಕಷ್ಟು ಕೆಲಸ ಮಾಡಬೇಕಿದೆ.
ವೆಸ್ಟ್‌ಮಿನ್‌ಸ್ಟರ್ ಅರಮನೆಯನ್ನು ವಾಸ್ತುಶಿಲ್ಪದ ಮಾಸ್ಟರ್‌ಪೀಸ್‌ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಯುನೆಸ್ಕೋ ಹೆರಿಟೇಜ್ ತಾಣಗಳಲ್ಲಿ ಇದೂ ಒಂದು. ಪ್ರತಿವರ್ಷ 10 ಲಕ್ಷ ಮಂದಿ ಇಲ್ಲಿಗೆ ಭೇಟಿ ಕೊಡುತ್ತಾರೆ.
ಇದನ್ನೂ ಓದಿ: ಕೊಹಿನೂರು ವಜ್ರವಿರುವ ಕಿರೀಟ ಧರಿಸಲೊಪ್ಪದ ಬ್ರಿಟನ್ ರಾಣಿ ಕ್ಯಾಮಿಲ್ಲಾ; ವಾಪಸ್ ಕೊಡುವಂತೆ ಭಾರತೀಯರ ಒತ್ತಾಯ