Site icon Vistara News

WeWork bankrupt: ವರ್ಕ್‌ ಫ್ರಂ ಹೋಂ ಎಫೆಕ್ಟ್;‌ ವಿವರ್ಕ್‌ ಕಂಪನಿ ದಿವಾಳಿ

wework

ನ್ಯೂಯಾರ್ಕ್‌: ಪ್ರತಿಷ್ಠಿತ ಸಾಫ್ಟ್‌ಬ್ಯಾಂಕ್ (softbank) ಗ್ರೂಪ್ ಬೆಂಬಲಿತ ಸ್ಟಾರ್ಟ್‌ಅಪ್ (startup) ʼವಿವರ್ಕ್‌ʼ (WeWork), ತಾನು ದಿವಾಳಿಯಾಗಿದ್ದೇನೆ (WeWork bankrupt) ಎಂದು ಘೋಷಿಸಿಕೊಂಡಿದೆ. ಇದಕ್ಕಾಗಿ ಕಾನೂನಾತ್ಮಕ ರಕ್ಷಣೆಯನ್ನು ಕೋರಿದೆ.

ಜಾಗತಿಕವಾಗಿ ಕಚೇರಿ ಜಾಗದ ಬಳಕೆಯನ್ನೇ ಮರುವ್ಯಾಖ್ಯಾನಿಸಿದ ಈ ಕಂಪನಿಯ ಷೇರು ಬೆಲೆಗಳು ಕೊರೊನಾ ಪೂರ್ವ ಕಾಲದಲ್ಲಿ ಉಲ್ಕೆಯಂತೆ ಮೇಲೇರಿದ್ದವು. ಇದೀಗ ದಿವಾಳಿ ಸ್ಥಿತಿಯನ್ನು ಅದು ತಲುಪಿದೆ. ಸೋಮವಾರ ಅದು ಅಮೆರಿಕದ ʼದಿವಾಳಿತನದ ರಕ್ಷಣೆʼಯನ್ನು (bankruptcy protection) ಕೋರಿದೆ. ಅದರ ಹೆಚ್ಚಿನ ಕಚೇರಿ-ಹಂಚಿಕೆಯ ಸ್ಥಳಗಳನ್ನು ಬಳಸುವ ಕಂಪನಿಗಳು ತಮ್ಮ ಗುತ್ತಿಗೆಗಳನ್ನು ಈ ಮೊದಲೇ ಹಿಂತೆಗೆದುಕೊಂಡಿವೆ.

WeWork Inc. (WE) ಇದು ವಿಶ್ವಾದ್ಯಂತ ಕಚೇರಿ ಸ್ಥಳಗಳನ್ನು ಒದಗಿಸುವ ಗುತ್ತಿಗೆ ಕಂಪನಿಯಾಗಿ ಕಾರ್ಯನಿರ್ವಹಿಸುತ್ತದೆ. 2010ರಲ್ಲಿ ಸ್ಥಾಪನೆಯಾದ ಕಂಪನಿಯು ರಿಯಲ್‌ ಎಸ್ಟೇಟ್‌ ಮಾಲಿಕರಿಂದ ಕಟ್ಟಡ ಜಾಗಗಳನ್ನು ದೀರ್ಘಾವಧಿಯ ಗುತ್ತಿಗೆ ಒಪ್ಪಂದಗಳ ಮೂಲಕ ಕೊಂಡುಕೊಂಡು, ಅವುಗಳನ್ನು ನವೀಕರಿಸಿ ಅಲ್ಪಾವಧಿಯ ಗುತ್ತಿಗೆ ಅಥವಾ ಬಾಡಿಗೆ ಒಪ್ಪಂದಗಳ ಮೂಲಕ ಇತರ ಕಂಪನಿಗಳಿಗೆ ಒದಗಿಸುತ್ತದೆ.

WeWork ದಿವಾಳಿಯಾದದ್ದೇಕೆ?

WeWorkನ ಸುಮಾರು 60% ಷೇರುಗಳನ್ನು ಜಪಾನಿನ ತಂತ್ರಜ್ಞಾನ ಸಮೂಹವಾದ SoftBank ಹೊಂದಿದೆ. ಮತ್ತು ಅದರ ವಹಿವಾಟಿನಲ್ಲಿ ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಿದೆ. ದಿವಾಳಿಯಾಗಿರುವ ಹಿನ್ನೆಲೆಯಲ್ಲಿ ಬಹು ಬೆಲೆಬಾಳುವ ಗುತ್ತಿಗೆಗಳನ್ನು ಮರುಸಂಧಾನ ಮಾಡದ ಹೊರತು ಕಂಪನಿಯು ಬದುಕಲು ಸಾಧ್ಯವಿಲ್ಲದಾಗಿದೆ.

ಕೊರೊನಾ ಕಾಲದಲ್ಲಿ ದೊಡ್ಡ ಕಂಪನಿಗಳು ಸಾವಿರಾರು ಉದ್ಯೋಗಗಳನ್ನು ಕೈಬಿಟ್ಟವು ಹಾಗೂ ಇನ್ನಷ್ಟು ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡಲು (work from home) ಕಳಿಸಿದವು. ಹೀಗಾಗಿ ದೊಡ್ಡ ಕಚೇರಿ ಸ್ಥಳಗಳ ಅಗತ್ಯ ಬೀಳಲಿಲ್ಲ. WeWork ನಡೆಸುತ್ತಿದ್ದ ದುಬಾರಿ ಗುತ್ತಿಗೆಗಳನ್ನು ಕಾರ್ಪೊರೇಟ್ ಗ್ರಾಹಕರು ರದ್ದುಗೊಳಿಸಿದರು. ಇದರಿಂದ ಲಾಭದಾಯಕತೆ ಕುಸಿಯಿತು. 2023ರ ಎರಡನೇ ತ್ರೈಮಾಸಿಕದಲ್ಲಿ WeWorkನ ಆದಾಯದ 74%ರಷ್ಟು ಗುತ್ತಿಗೆ ಸ್ಥಳಗಳ ಬಾಡಿಗೆಗೆ ಹೋಗಿದ್ದು, ಸಿಬ್ಬಂದಿಗೆ ಸಂಬಳ ಒದಗಿಸಲು ಆಗಿಲ್ಲ. ಅಂದಾಜಿನ ಪ್ರಕಾರ WeWorkನ ಸಾಲಗಳು $10 ಶತಕೋಟಿಯಿಂದ $50 ಶತಕೋಟಿವರೆಗೆ (ರೂ. 83,000 ಕೋಟಿ- 4.17 ಲಕ್ಷ ಕೋಟಿ) ಇವೆ.

ವಿವರ್ಕ್‌ ಸಂಸ್ಥಾಪಕ ಆಡಮ್ ನ್ಯೂಮನ್ ನೇತೃತ್ವದಲ್ಲಿ ಸಂಸ್ಥೆ $47 ಶತಕೋಟಿ (4 ಲಕ್ಷ ಕೋಟಿ ರೂ.) ಮೌಲ್ಯದ ಅತ್ಯಂತ ಮೌಲ್ಯಯುತ US ಸ್ಟಾರ್ಟ್ಅಪ್ ಆಗಿ ಬೆಳೆದಿತ್ತು. ಇದು ಸಾಫ್ಟ್‌ಬ್ಯಾಂಕ್ ಮತ್ತು ವೆಂಚರ್ ಕ್ಯಾಪಿಟಲ್ ಫರ್ಮ್ ಬೆಂಚ್‌ಮಾರ್ಕ್ ಸೇರಿದಂತೆ ಬ್ಲೂಚಿಪ್ ಹೂಡಿಕೆದಾರರಿಂದ ಹೂಡಿಕೆಗಳನ್ನು ಆಕರ್ಷಿಸಿತು. ಜೊತೆಗೆ ಜೆಪಿ ಮೋರ್ಗಾನ್ ಚೇಸ್ ಸೇರಿದಂತೆ ಪ್ರಮುಖ ವಾಲ್ ಸ್ಟ್ರೀಟ್ ಬ್ಯಾಂಕ್‌ಗಳ ಬೆಂಬಲವನ್ನು ಪಡೆದುಕೊಂಡಿತು.

ನ್ಯೂಮನ್‌ನ ದುಂದುವೆಚ್ಚ ಹಾಗೂ ವಿಲಕ್ಷಣ ನಡವಳಿಕೆಗಳು ಸಂಸ್ಥೆಯಿಂದ 2019ರಲ್ಲಿ ಆತನ ಪದಚ್ಯುತಿಗೆ ಕಾರಣವಾದವು. ನಂತರ ಸಂಸ್ಥೆ ಹಳಿತಪ್ಪತೊಡಗಿತು. WeWorkನಲ್ಲಿನ ಹೂಡಿಕೆಯನ್ನು ಸಾಫ್ಟ್‌ಬ್ಯಾಂಕ್ ದ್ವಿಗುಣಗೊಳಿಸಿತು. ರಿಯಲ್ ಎಸ್ಟೇಟ್ ಅನುಭವಿ ಸಂದೀಪ್ ಮಾತ್ರಾನಿ ಸ್ಟಾರ್ಟ್‌ಅಪ್‌ CEO ಆದರು. ಆದರೆ ಕಂಪನಿಯ ಕುಸಿತವನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: CM Siddaramaiah : ಪ್ರಧಾನಿ ರಾಜಕೀಯ ಭಾಷಣ ಸುಳ್ಳಿನ ಕಂತೆ; ಇಂದು ದೇಶವೇ ದಿವಾಳಿಯಾಗಿದೆ ಎಂದ ಸಿದ್ದರಾಮಯ್ಯ

Exit mobile version