ಫ್ರಾನ್ಸ್‌ನ ವಿಶ್ವಪ್ರಸಿದ್ಧ ಐಫೆಲ್ ಟವರ್ ಗೊತ್ತಿಲ್ಲದವರಿಲ್ಲ. ಇಂಥ ಐಫೆಲ್ ಟವರ್‌ನ ಹಲವಾರು ಪ್ರತಿಕೃತಿಗಳು ಹಲವೆಡೆ ಮಾಡಿರಬಹುದು. ಆದರೆ, ಇಲ್ಲೊಬ್ಬ ಕಲಾವಿದ ಗಿನ್ನಿಸ್ ದಾಖಲೆಗಾಗಿ ಐಫೆಲ್ ಟವರ್‌ನ ಪ್ರತಿಕೃತಿಯನ್ನು ಸತತ ಎಂಟು ವರ್ಷಗಳ ಶ್ರಮದಿಂದ ಕೊನೆಗೂ ಪೂರ್ಣಗೊಳಿಸಿದ್ದಾರೆ. ಆದರೆ, ಗಿನ್ನಿಸ್ ದಾಖಲೆ (Guinness Records) ಬರೆದೇ ಬರೆಯುತ್ತೇನೆ ಎಂದು ಹಗಲಿರುಳು ಹೂಡಿದ ಆತನ ಶ್ರಮ ನೀರು ಪಾಲಾಗಿದೆ. ಗಿನ್ನಿಸ್ ಅಧಿಕಾರಿಗಳು ಆತನ ಹೆಸರನ್ನು ದಾಖಲೆಗೆ ಸೇರಿಸುವುದಕ್ಕೆ ನಿರಾಕರಿಸಿದ್ದಾರೆ! ಫ್ರಾನ್ಸ್‌ನ ಕಲಾವಿದ ರಿಚರ್ಡ್ ಪ್ಲಾಡ್ ಎಂಬಾತ ಕಳೆದ ಎಂಟು ವರ್ಷಗಳಿಂದ ಸತತ ಪರಿಶ್ರಮದಿಂದ ತನ್ನ ಐಫೆಲ್ ಟವರ್ ಮಾಡುವ ಕನಸನ್ನು ನನಸಾಗಿಸಿದ್ದಾರೆ. ಬೆಂಕಿಕಡ್ಡಿಯಿಂದಲೇ ಐಫೆಲ್ ಟವರ್ ಮಾಡಿ ಗಿನ್ನಿಸ್ ದಾಖಲೆ ಬರೆಯಬೇಕು ಎಂಬುದು ಅವರ ಕನಸಾಗಿತ್ತು. ಸುಮಾರು ಏಳು ಲಕ್ಷ ಬೆಂಕಿಕಡ್ಡಿಗಳನ್ನು ಬಳಸಿ ಇವರು ಟವರ್ ಅನ್ನು ಅದ್ಭುತವಾಗಿ ಮಾಡಿದ್ದರೂ, ಗಿನ್ನಿಸ್ ದಾಖಲೆ ಪಡೆಯುವಲ್ಲಿ ಮಾತ್ರ ಸೋತು ಬಹಳ ನಿರಾಸೆ ಹೊಂದಿದ್ದಾರೆ. ಅದೂ ಕ್ಷುಲ್ಲಕ ಕಾರಣದಿಂದ ದಾಖಲೆಗೆ ಇದು ಸೇರ್ಪಡೆಯಾಗದೆ ಇದ್ದುದಕ್ಕೆ ಇವರಿಗೆ ಅತೀವ ಬೇಸರ ತಂದಿದೆಯಂತೆ.
ಆಕ್ಷೇಪ ಏಕೆ?
ರಿಚರ್ಡ್ ಅವರ ಈ ಕಲೆಯನ್ನು ಸ್ಥಳಕ್ಕೆ ಆಗಮಿಸದೆ, ಪರಿಶೀಲಿಸಿರುವ ಗಿನ್ನಿಸ್ ಅಧಿಕಾರಿಗಳು, ಇದರಲ್ಲಿ ಬಳಸಿರುವ ಬೆಂಕಿಕಡ್ಡಿಗಳು ಸರಿಯಾದ ಮಾದರಿಯಲ್ಲಿಲ್ಲ ಎಂಬ ಕಾರಣ ನೀಡಿ ತಿರಸ್ಕರಿಸಿದ್ದಾರೆ. ಗಿನ್ನಿಸ್ ಅಧಿಕಾರಿಗಳ ಪ್ರಕಾರ, ಈ ಬೆಂಕಿಕಡ್ಡಿಗಳನ್ನು ಈ ಪ್ರತಿಕೃತಿಯಲ್ಲಿ ಕತ್ತರಿಸಬಾರದು, ಬಾಗಿಸಿರಬಾರದು ಹಾಗೂ ಬೇಕಾದ ಆಕಾರಕ್ಕೆ ಪರಿವರ್ತಿಸಿರಬಾರದು. ಹಾಗಾಗಿ ಇದು ತಿರಸ್ಕೃತಗೊಂಡಿದೆ ಎಂದಿದ್ದಾರೆ. ಜೊತೆಗೆ ಈ ಬೆಂಕಿಕಡ್ಡಿಗಳು ಮಾರುಕಟ್ಟೆಯಲ್ಲಿ ಸದ್ಯ ಸಿಗುವಂಥದ್ದು ಅಲ್ಲದೆ ಇರುವುದರಿಂದ ಇದನ್ನು ಪರಿಗಣಿಸಲಾಗುವುದಿಲ್ಲ ಎಂದಿದೆ. ಇದರಿಂದ ರಿಚರ್ಡ್ ಅತ್ಯಂತ ನೊಂದುಕೊಂಡು, ಇದು ತನಗಾದ ಅನ್ಯಾಯ ಹಾಗೂ ಅತ್ಯಂತ ಖೇದಕರ ಅನುಭವ ಎಂದು ಜಾಲತಾಣದಲ್ಲಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
ಬೃಹತ್ ಗಾತ್ರ
ಈ ಐಫೆಲ್ ಟವರ್ ಪ್ರತಿಕೃತಿ 23.6 ಅಡಿ ಎತ್ತರದ ಅತ್ಯಂತ ಬೃಹತ್ ಗಾತ್ರವನ್ನು ಹೊಂದಿದೆ. ರಿಚರ್ಡ್ ಅವರು ಇದಕ್ಕಾಗಿ 706900 ಬೆಂಕಿಕಡ್ಡಿಗಳನ್ನು ಬಳಸಿದ್ದರು. ವಿಶ್ವದಲ್ಲಿ ಇಷ್ಟು ಎತ್ತರದ ಬೆಂಕಿಕಡ್ಡಿಯ ಐಫೆಲ್ ಟವರ್ ಪ್ರತಿಕೃತಿ ಎಲ್ಲೂ ಇಲ್ಲ ಹಾಗೂ ಇದೇ ಮೊದಲ ಬಾರಿಗೆ ನಿರ್ಮಿಸಲಾಗಿತ್ತು. ಪ್ರತಿಕೃತಿಯನ್ನು ನೋಡದೇ, ನೇರವಾಗಿ ಇದನ್ನು ತಿರಸ್ಕರಿಸಿರುವುದು ಮಾತ್ರ ಕೇವಲ ಕಲಾವಿದರಿಗಷ್ಟೇ ಅಲ್ಲ, ಇವರ ಕೃತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ ಅವರ ಅಪಾರ ಹಿಂಬಾಲಕರಿಗೂ ನೋವುಂಟು ಮಾಡಿದೆಯಂತೆ.
ಹಲವರು, ಈ ಕಲಾಕೃತಿ ಅತ್ಯುತ್ತಮವಾದ, ಅಪಾರ ಶ್ರಮವನ್ನು ಬೇಡು ಅದ್ಭುತ ಕಲಾಕೃತಿಯಾಗಿದ್ದು, ಇಂಥದ್ದಕ್ಕೆ ಹೀಗಿರು ತಿರಸ್ಕಾರ ಸಿಕ್ಕಿದ್ದು ಬೇಸರವನ್ನುಂಟು ಮಾಡಿದೆ ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು, ಇದು ತುಂಬಾ ಅನ್ಯಾಯ. ಈ ರೀತಿಯ ಮಾನದಂಡಗಳೇ ಸರಿಯಾಗಿಲ್ಲ. ಇಂತಹ ನೀತಿನಿಯಮಗಳೇನಾದರೂ ಇದ್ದರೆ, ಮೊದಲೇ ತಿಳಿಸಬೇಕು, ಕೊನೆಯಲ್ಲಿ ಹೀಗೆ ಕಲಾವಿದರಿಗೆ ಅವಮಾನ ಮಾಡಬಾರದು ಎಂದು ತಮ್ಮ ನೋವನ್ನು ಹೊರಹಾಕಿದ್ದಾರೆ.