ನರಕ ಎಂದರೆ ಎಲ್ಲಿದೆ ಎಂದು ತೋರಿಸಲು ಏನೇನೋ ಊಹನೆ ಮಾಡಬೇಕಿಲ್ಲ. ಭೂಮಿಯ ಮೇಲೆ ತಪ್ಪು ಮಾಡಿ ಸಿಕ್ಕಿ ಬಿದ್ದು ಜೈಲಿಗೆ ಹೋದರೆ ಮಾಡಿದ ತಪ್ಪಿಗೆ ಪ್ರಾಯಶ್ವಿತ್ತ ಎಂಬಂತೆ ನರಕ ಪ್ರಾಪ್ತಿ ಎಂದು ನಾವೂ ವಿವರಣೆ ಕೊಡಬಹುದು. ಆದರೆ ಇಲ್ಲೊಂದು ಜೈಲಿದೆ. ಅಲ್ಲಿರುವುದು ನಮ್ಮ ಊಹನೆಗೂ ಮೀರಿದ ನರಕವೇ. ಇಲ್ಲಿನ ಜೈಲುವಾಸಿಗಳು ಹಸಿವಾದರೆ ತಮ್ಮ ಸಹವರ್ತಿಯ ಜೊತೆಗೇ ಬಡಿದಾಡಿ ಅವರ ಮಾಂಸವನ್ನು ತಿಂದಂಥ ಘಟನೆಗಳೂ ನಡೆದಿವೆಯಂತೆ!
ಹೌದು ಇಂತಹ ಕುಖ್ಯಾತಿ ಪಡೆದಿರುವ ಜೈಲು ರುವಾಂಡಾದ ಗಿಟಾರಾಮ ಜೈಲು. ರುವಾಂಡಾ ಪೂರ್ವ ಆಫ್ರಿಕಾದ ದೇಶ. ಇಲ್ಲಿನ ಗಿಟಾರಾಮ ಎಂಬ ಜೈಲು ವಿಶ್ವದ ಅತಿ ಖತರ್ನಾಕ್ ಜೈಲುವಾಸಗಳಲ್ಲಿ ಒಂದು. ಈ ಜೈಲು ಅಪರಾಧಿಗಳಿಂದ ತುಂಬಿ ತುಳುಕುತ್ತಿದ್ದು, ಜೈಲುವಾಸಿಗಳಿಗೆ ಮಲಗುವುದು ಬಿಡಿ, ಕೂರಲೂ ಜಾಗವಿರುವುದಿಲ್ಲವಂತೆ. ಹಾಗಾಗಿಯೇ ಈ ಜೈಲು ವಿಶ್ವದ ಅತ್ಯಂತ ಕೆಟ್ಟ ಜೈಲುಗಳಲ್ಲಿ ಒಂದಾಗಿದೆ.
ಈ ಜೈಲೊಂದರಲ್ಲೇ ಐದು ಸಾವಿರದಿಂದ ಏಳು ಸಾವಿರವರೆಗೂ ಜೈಲುವಾಸಿಗಳಿದ್ದು, ಜೈಲೊಂದು ಗರಿಷ್ಠ ಎಷ್ಟು ಮಂದಿಯನ್ನು ತನ್ನಲ್ಲಿ ಇರಿಸಿಕೊಳ್ಳಬಹುದು ಎಂಬುದಕ್ಕೆ ವಿರುದ್ಧವಾಗಿ ವರ್ತಿಸುತ್ತಿದೆ ಎಂಬ ದೂರುಗಳೂ ಇವೆ.
ಆಮ್ನೇಸ್ಟಿ ಇಂಟರ್‌ನ್ಯಾಷನಲ್ ಪ್ರಕಾರ, ೩೦೦೦ ಮಂದಿ ಇರಬಹುದಾದ ಜಾಗವಿರುವ ಈ ಜೈಲಿನಲ್ಲಿ ೨೦೦೭ರಲ್ಲಿ ೭,೪೭೭ ಮಂದಿಯಿದ್ದರು ಎನ್ನಲಾಗಿದೆ. ಹಾಗಾಗಿ ಇಲ್ಲಿನ ಜೈಲುವಾಸಿಗಳು ಕೆಲವೊಮ್ಮೆ ತಮ್ಮೊಳಗೇ ಬಡಿದಾಡಿ, ಕೊಂದು ಕೊನೆಗೆ ಅವರ ಮಾಂಸವನ್ನೇ ತಿಂದಂಥ ಘಟನೆಗಳ ಉದಾಹರಣೆಗಳಿವೆ ಎನ್ನಲಾಗಿದೆ.
ಇಲಿಗಳು, ಹೆಗ್ಗಣಗಳು ಜೈಲಿನ ತುಂಬ ಓಡಾಡಿಕೊಂಡಿದ್ದು, ಅತ್ಯಂತ ಅನಾರೋಗ್ಯಕರ ವಾತಾವರಣ ಇಲ್ಲಿದೆ. ೧೯೯೫ರಲ್ಲಿ ಈ ಜೈಲಿನ ಪರಿಸ್ಥಿತಿಯ ಬಗ್ಗೆ ಸಾಕಷ್ಟು ವಿವಾದ ಎದ್ದಿತ್ತು. ಅಪರಾಧಿಗಳು ಎಂಥ ನರಕದ ಪರಿಸ್ಥಿತಿಯಲ್ಲಿ ಇಲ್ಲಿ ಕೊಳೆಯಬೇಕಾಗಿದೆ ಎಂಬ ಬಗ್ಗೆ ಸಾಕಷ್ಟು ವರದಿಗಳು ಬಂದಿದ್ದವು. ೧೯೯೪ರ ರುವಾಂಡ ನರಮೇಧ ಘಟನೆಯ ನಂತರ ಈ ಜೈಲು ಸಾಕಷ್ಟು ಸುದ್ದಿ ಮಾಡಿತ್ತು. ರೆಡ್ ಕ್ರಾಸ್ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳು ಇದರ ವಿರುದ್ಧ ದನಿ ಎತ್ತಿದ್ದವು. ಇದೊಂದು ಅಮಾನವೀಯ ನಡೆಯಾಗಿದ್ದು ಪ್ರತಿನಿತ್ಯ ೫-೬ ಮಂದಿ ಸಾವಿಗೀಡಾಗುತ್ತಾರೆ. ಅಲ್ಲಿನ ಪರಿಸ್ಥಿತಿಯನ್ನು ಶೀಘ್ರದಲ್ಲೇ ಸರಿ ಮಾಡಬೇಕಿದೆ. ಅದಕ್ಕೆ ಹೆಚ್ಚಿನ ಅಗತ್ಯವಿದೆ ಎಂದಿದ್ದವು.
ಇದನ್ನೂ ಓದಿ: ವಿಸ್ತಾರ Info | ವಿದೇಶದಲ್ಲಿ ಪಾಸ್‌ಪೋರ್ಟ್ ಕಳೆದು ಹೋದರೆ ನೀವು ಮಾಡಬೇಕಾದ್ದೇನು?
ರುವಾಂಡಾ ಜೈಲಿನ ಇತಿಹಾಸದಲ್ಲಿ ಸಾಕಷ್ಟು ಇಂತಹ ಘಟನೆಗಳಿವೆ. ೧೯೯೫ರಲ್ಲಿ ಸುಮಾರು ಒಂದು ಸಾವಿರ ಮಂದಿ ಅಪರಾಧಿಗಳು ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಗಂಟೆಗಟ್ಟಲೆ ನಿಂತೇ ಇರಬೇಕಾದ ಪರಿಸ್ಥಿತಿ ಇಲ್ಲಿರುವುದರಿಂದ ಅಲ್ಲಿನ ಅಪರಾಧಿಗಳ ಕಾಲುಗಳು ಕೊಳೆತು ಹೋಗುವಂತ ಆರೋಗ್ಯ ಸಮಸ್ಯೆಗಳೂ ಉಲ್ಬಣಿಸಿತ್ತು. ಸರಿಯಾದ ಆಹಾರ, ಔಷಧಿ ಮತ್ತಿತರ ಯಾವುದೇ ನೆರವಿಲ್ಲದೆ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿ ಇದ್ದು, ಕಳೆದ ವರ್ಷವೊಂದರಲ್ಲೇ ರುವಾಂಡಾದ ಜೈಲುಗಳಲ್ಲಿ ಇಟ್ಟು ೨೦೦೦ ಮಂದಿ ಸತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಗಿಟರಾಮ ಜೈಲುವಾಸಿಗಳೇ ಎನ್ನಲಾಗಿದೆ.
ರುವಾಂಡಾ ನರಮೇಧ: ರುವಾಂಡಾ ದೇಶದಲ್ಲಿ ೧೯೯೪ರಲ್ಲಿ ನಡೆದ ನರಮೇಧ ಇತಿಹಾಸದಲ್ಲಿನ ಕಪ್ಪು ಚುಕ್ಕೆ. ರುವಾಂಡಾ ದೇಶದ ಬಹುಸಂಖ್ಯಾತ ಹುಟು ಜನಾಂಗಕ್ಕೂ ಅಲ್ಪಸಂಖ್ಯಾತ ಟೂಟ್ಸಿ ಜನಾಂಗಕ್ಕೂ ಎಣ್ಣೆ ಸೀಗೆ ಸಂಬಂಧ. ೧೯೯೪ರಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಲು ಬೀದಿಗಿಳಿದಿದ್ದ ಟೂಟ್ಸಿ ಜನಾಂಗದವರು ಹುಟು ಜನಾಂಗದ ರಾಷ್ಟ್ರಪತಿ ತೆರಳಿದ ವಿಮಾನ ಹೊಡೆದುರುಳಿಸಿದ್ದರು. ಈ ಘಟನೆ ನಡೆದ ಹಿನ್ನೆಲೆಯಲ್ಲಿ ಹುಟು ಜನಾಂಗದವರು ಟೂಟ್ಸಿ ಜನಾಂಗದ ಮಂದಿಯನ್ನು ಹುಡುಕಿ ಹುಡುಕಿ ಕೊಲ್ಲಲಾರಂಭಿಸಿದರು. ಕೇವಲ ೧೦೦ ದಿನಗಳಲ್ಲಿ ೧೦ ಲಕ್ಷ ಮಂದಿಯ ನರಮೇಧ ನಡೆದಿತ್ತು. ಇದು ಇತಿಹಾಸ ಕಂಡ ಅತ್ಯಂತ ಭೀಕರ ನರಮೇಧಗಳಲ್ಲಿ ಒಂದಾಗಿದೆ ಎಂಬುದನ್ನಿಲ್ಲಿ ಸ್ಮರಿಸಬಹುದು.
ಇದ್ನೂ ಓದಿ: Happiness: ಈ ಪುಟ್ಟ ದ್ವೀಪದ ಜನ ಸದಾ ಸಂತೋಷವಾಗಿರ್ತಾರೆ, ಯಾಕೆ ಗೊತ್ತೆ?