ಪ್ರಪಂಚದ ಅತೀ ದೊಡ್ಡ ಬುಡಕಟ್ಟು ಸಮುದಾಯವೊಂದು (World’s Largest Tribe) ಪೆರುವಿಯನ್ ಅಮೆಜಾನ್ ನಲ್ಲಿ (Peruvian Amazon) ಇದೆ. ಆದರೆ ಇವರದು ಹೊರ ಜಗತ್ತಿನ ಸಂಪರ್ಕವಿಲ್ಲದ ಬುಡಕಟ್ಟು ಸಮುದಾಯ. ಇದೇ ಮೊದಲ ಬಾರಿಗೆ ಮಾಶ್ಕೊ ಪಿರೋ (Mashco Piro) ಸಮುದಾಯದ ಜನರ ಚಲನವಲನದ ಅಪರೂಪದ ದೃಶ್ಯಗಳನ್ನು ʼಸರ್ವೈವಲ್ ಇಂಟರ್ನ್ಯಾಷನಲ್ʼ ಬಿಡುಗಡೆ ಮಾಡಿದೆ.
ಮಾಶ್ಕೊ ಪಿರೋ ಬುಡಕಟ್ಟು ಸಮುದಾಯದ ಯೋಗಕ್ಷೇಮದ ಕಾಳಜಿ ಹೆಚ್ಚಾಗುತ್ತಿರುವ ಮಧ್ಯೆಯೇ ಈ ವಿಡಿಯೋ ತುಣುಕು ಬಿಡುಗಡೆಯಾಗಿದೆ. ಇದರಲ್ಲಿ ಮಾಶ್ಕೊ ಪಿರೋ ಬುಡಕಟ್ಟು ಸಮುದಾಯದ ಹಲವಾರು ಸದಸ್ಯರು ನದಿಯ ದಡದಲ್ಲಿ ವಿಶ್ರಾಂತಿ ಪಡೆಯುತ್ತಿರುವುದನ್ನು ಈ ದೃಶ್ಯದಲ್ಲಿ ತೋರಿಸಲಾಗಿದೆ.
ಈ ಪ್ರದೇಶದಲ್ಲಿ ಮರಗಳನ್ನು ಕಡಿಯುವುದು ಹೆಚ್ಚಾಗಿರುವುದರಿಂದ ಇಲ್ಲಿರುವ ಮಾಶ್ಕೊ ಪಿರೋ ಬುಡಕಟ್ಟು ಜನಾಂಗಕ್ಕೆ ಅಪಾಯ ಎದುರಾಗಿದೆ. ಅವರ ಸಾಂಪ್ರದಾಯಿಕ ಭೂಮಿಯಿಂದ ಅವರು ಹೊರಗೆ ತಳ್ಳಲ್ಪಡುತ್ತಿದ್ದಾರೆ. ಮಾಶ್ಕೊ ಪಿರೋ ಜನಾಂಗದವರು ಆಹಾರ ಮತ್ತು ಸುರಕ್ಷಿತ ಆಶ್ರಯಕ್ಕಾಗಿ ಹುಡುಕಾಡುತ್ತ ವಲಸೆ ಹೋಗುತ್ತಿರಬಹುದು ಎನ್ನಲಾಗಿದೆ.
ಬ್ರೆಜಿಲ್‌ನ ಗಡಿಯಲ್ಲಿರುವ ಆಗ್ನೇಯ ಪೆರುವಿಯನ್ ಪ್ರಾಂತ್ಯದ ಮ್ಯಾಡ್ರೆ ಡಿ ಡಿಯೋಸ್‌ನ ನದಿಯ ದಡದ ಬಳಿ ಜೂನ್ ಅಂತ್ಯದಲ್ಲಿ ಈ ವಿಡಿಯೋಗಳನ್ನು ತಗೆದಿರುವುದಾಗಿ ʼಸರ್ವೈವಲ್ ಇಂಟರ್‌ನ್ಯಾಷನಲ್ʼ ವರದಿ ಮಾಡಿದೆ.
ಮರಗಳನ್ನು ಕಡಿಯುವ ಕಾರ್ಯಾಚರಣೆ ಪ್ರಾರಂಭಿಸಿರುವ ಸ್ಥಳದಿಂದ ಕೆಲವು ಕಿಲೋಮೀಟರ್ ದೂರದಲ್ಲಿ ಹೆಚ್ಚಿನ ಸಂಖ್ಯೆಯ ಮ್ಯಾಶ್ಕೊ ಪಿರೋಗಳು ವಾಸಿಸುತ್ತಿದ್ದಾರೆ ಎಂದು ಸರ್ವೈವಲ್ ಇಂಟರ್ನ್ಯಾಷನಲ್ ನಿರ್ದೇಶಕಿ ಕ್ಯಾರೋಲಿನ್ ಪಿಯರ್ಸ್ ಹೇಳಿದ್ದಾರೆ.
ಮಾಂಟೆ ಸಾಲ್ವಾಡೊ ಎಂಬ ಯಿನ್ ಜನರ ಹಳ್ಳಿಯ ಬಳಿ ಇತ್ತೀಚಿಗೆ 50ಕ್ಕೂ ಹೆಚ್ಚು ಮ್ಯಾಶ್ಕೊ ಪಿರೋ ಜನರು ಕಾಣಿಸಿಕೊಂಡರು. 17 ಜನರ ಮತ್ತೊಂದು ಗುಂಪು ಪೋರ್ಟೊ ನ್ಯೂವೊ ಎಂಬ ಹಳ್ಳಿಯಲ್ಲಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಹಕ್ಕುಗಳನ್ನು ರಕ್ಷಿಸುವ ಎನ್‌ಜಿಒ ಒಂದು ಹೇಳಿದೆ.
ಮಡ್ರೆ ಡಿ ಡಿಯೋಸ್‌ನ ಕಾಡಿನಲ್ಲಿ ಎರಡು ಪ್ರದೇಶದಲ್ಲಿ ವಾಸಿಸುವ ಮಾಶ್ಕೊ ಪಿರೋ ನಿಯಮದಂತೆ ವಿರಳವಾಗಿ ಕಾಣಿಸಿಕೊಂಡಿದ್ದಾರೆ. ಅವರು ಯಾರೊಂದಿಗೂ ಹೆಚ್ಚು ಸಂವಹನ ನಡೆಸುವುದಿಲ್ಲ. ಹಲವಾರು ಕಂಪೆನಿಗಳು ಮ್ಯಾಶ್ಕೊ ಪಿರೋ ವಾಸಿಸುವ ಪ್ರದೇಶದೊಳಗೆ ಮರವನ್ನು ಕಡಿಯಲು ಅನುಮತಿ ಹೊಂದಿವೆ. ಒಂದು ಕಂಪನಿ ಮರಗಳನ್ನು ಸಾಗಿಸಲು ಟ್ರಕ್‌ಗಳಿಗಾಗಿ 200 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರ ರಸ್ತೆಗಳನ್ನು ನಿರ್ಮಿಸಿದೆ ಎಂದು ಸರ್ವೈವಲ್ ಇಂಟರ್ನ್ಯಾಷನಲ್ ತಿಳಿಸಿದೆ.
ಈ ಬಗ್ಗೆ ಲಿಮಾದಲ್ಲಿನ ಕ್ಯಾನಲ್ಸ್ ತಹುಮಾನು ಪ್ರತಿನಿಧಿಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಂಪೆನಿಯು ಫಾರೆಸ್ಟ್ ಸ್ಟೀವರ್ಡ್‌ಶಿಪ್ ಕೌನ್ಸಿಲ್‌ನಿಂದ ಪ್ರಮಾಣೀಕರಿಸಲ್ಪಟ್ಟಿದೆ. ಅದರ ಪ್ರಕಾರ ಇದು ಕಾಡಿನ ನಿರ್ದಿಷ್ಟ ಸಂಪನ್ಮೂಲಗಳನ್ನು ಹೊರತೆಗೆಯಲು ಮ್ಯಾಡ್ರೆ ಡಿ ಡಿಯೋಸ್‌ನಲ್ಲಿ 53,000 ಹೆಕ್ಟೇರ್ ಕಾಡುಗಳನ್ನು ಹೊಂದಿದೆ ಎನ್ನಲಾಗಿದೆ.
❗️ New & extraordinary footage released today show dozens of uncontacted Mashco Piro Indigenous people in the Peruvian Amazon, just a few miles from several logging companies.
— Survival International (@Survival) July 16, 2024
Read the news: https://t.co/g9GrZlf3XB pic.twitter.com/fZv5rryzVp
ಈ ಕುರಿತು ಪ್ರತಿಕ್ರಿಯಿಸಿರುವ ಪೆರುವಿಯನ್ ಸರ್ಕಾರವು ಜೂನ್ 28ರಂದು ಮಡ್ರೆ ಡಿ ಡಿಯೋಸ್‌ನ ರಾಜಧಾನಿ ಪೋರ್ಟೊ ಮಾಲ್ಡೊನಾಡೊ ನಗರದಿಂದ 150 ಕಿಲೋಮೀಟರ್ ದೂರದಲ್ಲಿರುವ ಲಾಸ್ ಪೀಡ್ರಾಸ್ ನದಿಯ ದಡದಲ್ಲಿ ಮಾಶ್ಕೊ ಪಿರೊವನ್ನು ನೋಡಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ವರದಿ ಮಾಡಿದ್ದಾರೆ ಎಂದು ತಿಳಿಸಿದೆ. ಬ್ರೆಜಿಲ್‌ನ ಗಡಿಯುದ್ದಕ್ಕೂ ಮ್ಯಾಶ್ಕೊ ಪಿರೋ ಕಾಣಿಸಿಕೊಂಡಿದೆ ಎಂದು ಬ್ರೆಜಿಲಿಯನ್ ಕ್ಯಾಥೊಲಿಕ್ ಬಿಷಪ್‌ಗಳ ಸ್ಥಳೀಯ ಮಿಷನರಿ ಕೌನ್ಸಿಲ್‌ನಲ್ಲಿ ರೋಸಾ ಪಡಿಲ್ಹಾ ಹೇಳಿದ್ದಾರೆ.
ಇದನ್ನೂ ಓದಿ: United Nations: ಗಾಜಾದಲ್ಲಿ ಸಂಪೂರ್ಣ ಕದನ ವಿರಾಮ ಘೋಷಿಸಿ; ವಿಶ್ವಸಂಸ್ಥೆಯಲ್ಲಿ ಪುನರುಚ್ಚರಿಸಿದ ಭಾರತ
ಅವರು ಪೆರುವಿಯನ್ ಭಾಗದಲ್ಲಿ ಲಾಗರ್ಸ್‌ನಿಂದ ವಲಸೆ ಹೋಗುತ್ತಿದ್ದಾರೆ. ಈ ಸಮಯದಲ್ಲಿ ಅವರು ಟ್ರಾಕಾಜಾ ಅಂದರೆ ಅಮೆಜಾನ್ ಆಮೆಗಳ ಮೊಟ್ಟೆಗಳನ್ನು ತೆಗೆದುಕೊಳ್ಳಲು ಕಡಲತೀರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ಯಾವ ಕ್ಷಣ ಏನು ಮಾಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಶಾಂತಿಯ ವರ್ತನೆ ತೋರುವುದಿಲ್ಲ. ದಾಳಿಗೆ ಮುಂದಾಗುತ್ತಾರೆ. ಜನರನ್ನು ಕಂಡಾಕ್ಷಣ ಓಡಿ ಹೋಗುತ್ತಾರೆ ಎಂದು ಪಡಿಲ್ಹಾ ತಿಳಿಸಿದ್ದಾರೆ.