Site icon Vistara News

Invest Karnataka: ಸನ್ಸೇರಾ ಕಂಪನಿಯಿಂದ ರಾಜ್ಯದಲ್ಲಿ 2,100 ಕೋಟಿ ರೂ. ಹೂಡಿಕೆ; ರಾಮನಗರದಲ್ಲಿ ಘಟಕ

2100 crore rupees investment in the state by Sunsera Company; Sign the agreement

ಬೆಂಗಳೂರು: ವಾಹನಗಳ ಮತ್ತು ವೈಮಾನಿಕ‌ ಬಿಡಿಭಾಗಗಳನ್ನು ತಯಾರಿಸುವ ಸನ್ಸೇರಾ ಕಂಪನಿಯು ರಾಜ್ಯದಲ್ಲಿ ರೂ. 2,100 ಕೋಟಿ ಹೂಡಲಿದೆ (Invest Karnataka). ಈ ಸಂಬಂಧ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌.ಬಿ. ಪಾಟೀಲ ಅವರ ಸಮ್ಮುಖದಲ್ಲಿ ಬುಧವಾರ ಒಡಂಬಡಿಕೆಗೆ ಅಂಕಿತ ಹಾಕಲಾಯಿತು.

ಖನಿಜ ಭವನದಲ್ಲಿ ನಡೆದ ಸಮಾರಂಭದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಮತ್ತು ಸೆನ್ಸೇರಾ ಕಂಪನಿಯ ಸಿಇಒ ಶೇಖರ್ ವಾಸನ್ ಒಡಂಬಡಿಕೆಗೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಸನ್ಸೇರಾ ಎಂಜಿನಿಯರಿಂಗ್ ಲಿಮಿಟೆಡ್ ಸಂಸ್ಥೆಯು ಮುಂದಿನ ಐದು ವರ್ಷಗಳಲ್ಲಿ ಹಂತಹಂತವಾಗಿ ಈ ಹೂಡಿಕೆ ಮಾಡಲಿದೆ. ಇದರಿಂದ 3,500 ಉದ್ಯೋಗಗಳು ಸೃಷ್ಟಿ ಆಗಲಿವೆ ಎಂದರು.

ಕಂಪನಿಯು ರಾಮನಗರ ಜಿಲ್ಲೆಯ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 55 ಎಕರೆ ಪ್ರದೇಶದಲ್ಲಿ ತನ್ನ ಉತ್ಪಾದನಾ ಘಟಕ ಆರಂಭಿಸಲಿದೆ. ಇದರಿಂದ ರಾಜ್ಯದ ರಫ್ತು ವಹಿವಾಟಿಗೂ ಅನುಕೂಲ ಆಗಲಿದೆ ಎಂದರು.

ಇದನ್ನೂ ಓದಿ: FASTag new rule: ಫಾಸ್ಟ್‌ಟ್ಯಾಗ್‌ ಬಳಕೆದಾರರೇ ಗಮನಿಸಿ; ನಾಳೆಯಿಂದ ಹೊಸ ನಿಯಮ ಜಾರಿ!

ಕಂಪನಿಯು ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ತರಬೇತಿ ಕೇಂದ್ರ ಆರಂಭಿಸಲಿದ್ದು, ಇದರಿಂದ ಸ್ಥಳೀಯರ ಕೌಶಲ ವೃದ್ಧಿಯಾಗಲಿದೆ. ಕಂಪನಿಯು ದೇಶದಲ್ಲಿ 16 ತಯಾರಿಕಾ ಘಟಕಗಳನ್ನು ಹೊಂದಿದ್ದು, ಅವುಗಳ ಪೈಕಿ 12 ಘಟಕಗಳು ರಾಜ್ಯದಲ್ಲೇ ಇವೆ ಎಂದು ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಎಫ್‌.ಆರ್‌. ಸಿಂಘ್ವಿ, ಕಾರ್ಯದರ್ಶಿ ರಾಜೇಶ್‌ ಮೋದಿ ಉಪಸ್ಥಿತರಿದ್ದರು.

ಓಟಿಸ್ ಕಂಪನಿಯಿಂದ ರೂ.135 ಕೋಟಿ ಹೂಡಿಕೆ

ಎಲಿವೇಟರುಗಳನ್ನು ತಯಾರಿಸುವ ಓಟಿಸ್ ಕಂಪನಿ ಕೂಡ ರಾಜ್ಯದಲ್ಲಿ 135 ಕೋಟಿ ರೂಪಾಯಿ ಹೂಡಲು ಒಲವು ವ್ಯಕ್ತಪಡಿಸಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಸಂಬಂಧವಾಗಿ ಕಂಪನಿಯ ಹಿರಿಯ ನಿರ್ದೇಶಕ ರವಿಶಂಕರ್ ನೇತೃತ್ವದ ತಂಡದೊಂದಿಗೆ ಮಾತುಕತೆ ನಡೆಸಿದರು.

ಇದನ್ನೂ ಓದಿ: Kannada New Movie: ರೆಟ್ರೋ ಸ್ಟೈಲ್‌ನಲ್ಲಿ ಮೂಡಿಬಂದ ʼಹೇಳು ಗೆಳತಿʼ; ಚರಣ್‌ರಾಜ್ ಕಂಠಸಿರಿಗೆ ಕೇಳುಗರು ಫಿದಾ

ಇದಕ್ಕಾಗಿ ಕಂಪನಿಯು ಹಾರೋಹಳ್ಳಿಯಲ್ಲಿ 12 ಎಕರೆ ಭೂಮಿಯನ್ನು ಕೇಳಿದ್ದು, ಇದನ್ನು ಒದಗಿಸಲಾಗುವುದು. ಇದರಿಂದ 200ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಆಗಲಿದೆ ಎಂದು ಅವರು ಮಾಹಿತಿ ನೀಡಿದರು.

Exit mobile version