ನವದೆಹಲಿ: ಸೇನಾ ನೇಮಕಾತಿ ಯೋಜನೆ ಅಗ್ನಿಪಥ್ ವಿರುದ್ಧ ಹಿಂಸಾಚಾರ ಹೆಚ್ಚುತ್ತಿರುವಂತೆ, ಇದಕ್ಕೆ ಸಂಬಂಧಪಟ್ಟ ಕೇಂದ್ರದ ಘೋಷಣೆಗಳೂ ಒಂದೊಂದೇ ಏರಿಕೆಯಾಗುತ್ತಿವೆ. ಉದ್ಯೋಗ ಭರವಸೆ ನೀಡುವುದಿಲ್ಲ ಎಂಬ ತಪ್ಪುಕಲ್ಪನೆಯನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಇನ್ನಷ್ಟು-ಮತ್ತಷ್ಟು ಪ್ರಯತ್ನ ಮಾಡುತ್ತಿದೆ. ಅಗ್ನಿವೀರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗುವವರಿಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ಉದ್ಯೋಗದಲ್ಲಿ ಶೇ. 10 ರಷ್ಟು ಮೀಸಲಾತಿ ನೀಡುವುದಾಗಿ ಇಂದು ಬೆಳಗ್ಗೆಯಷ್ಟೇ ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ವಿಷಯ ಪ್ರಕಟಿಸಿದೆ. ಕೇಂದ್ರ ರಕ್ಷಣಾ ಸಚಿವಾಲಯದಡಿ ಇರುವ ವಿವಿಧ ಹುದ್ದೆಗಳಲ್ಲೂ ಅಗ್ನಿವೀರರಿಗೆ ಶೇ.10 ರಷ್ಟು ಮೀಸಲಾತಿ ಕೊಡುವುದಾಗಿ ತಿಳಿಸಿದೆ.
ದೇಶದ ಸುಮಾರು 8 ರಾಜ್ಯಗಳಲ್ಲಿ ಅಗ್ನಿಪಥ್ ವಿರುದ್ಧ ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನೆಯ ಮೂರು ವಿಭಾಗಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದರು. ಈ ಸಭೆ ಬಳಿಕ ರಕ್ಷಣಾ ಸಚಿವಾಲಯದ ಟ್ವಿಟರ್ ಖಾತೆಯಲ್ಲಿ ಎರಡು ಟ್ವೀಟ್‌ಗಳನ್ನು ಮಾಡಲಾಗಿದೆ. ಅಗ್ನಿವೀರರಿಗೆ, ರಕ್ಷಣಾ ಸಚಿವಾಲಯದ ವಿವಿಧ ವಿಭಾಗಗಳಡಿ ಖಾಲಿ ಇರುವ ಹುದ್ದೆಗಳಲ್ಲಿ ಶೇ.10ರಷ್ಟು ಮೀಸಲಾತಿ ನೀಡುವ ಪ್ರಸ್ತಾಪಕ್ಕೆ ರಾಜನಾಥ್ ಸಿಂಗ್ ಅನುಮೋದನೆ ಕೊಟ್ಟಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿ: ಅಗ್ನಿವೀರರಿಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಶೇ.10 ರಷ್ಟು ಮೀಸಲಾತಿ; ಗೃಹ ಇಲಾಖೆ ಘೋಷಣೆ
ಈ ಹೊಸ ಘೋಷಣೆಯ ಅನ್ವಯ, ರಕ್ಷಣಾ ಸಚಿವಾಲಯದಡಿ ಬರುವ ಇಂಡಿಯನ್ ಕೋಸ್ಟ್ ಗಾರ್ಡ್ (ಭಾರತೀಯ ಕರಾವಳಿ ರಕ್ಷಕ ಪಡೆ, ರಕ್ಷಣಾ ನಾಗರಿಕ ಹುದ್ದೆಗಳು ಮತ್ತು ಎಲ್ಲ 16 ರಕ್ಷಣಾ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಅಗ್ನಿವೀರರಿಗೆ ಶೇ. 10ರಷ್ಟು ಮೀಸಲಾತಿ ಇರಲಿದೆ. ಈ ಕ್ಷೇತ್ರಗಳಲ್ಲಿ ಈಗಾಗಲೇ ಸೇನೆಯಿಂದ ನಿವೃತ್ತರಾದವರಿಗೂ ಮೀಸಲಾತಿ ಕೊಡಲಾಗಿದ್ದು, ಹೊಸದಾಗಿ ಅಗ್ನಿವೀರರೂ ಸೇರ್ಪಡೆಗೊಳ್ಳಲಿದ್ದಾರೆ.
ಅಗ್ನಿಪಥ್‌ದಡಿ ಸೇನೆಗೆ ಆಯ್ಕೆಯಾಗಿ, ನಾಲ್ಕು ವರ್ಷಗಳ ಬಳಿಕ ನಿವೃತ್ತರಾಗುವವರಿಗೆ ರಕ್ಷಣಾ ವಲಯದ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಸೂಕ್ತ ನಿಯಮಗಳನ್ನು ರೂಪಿಸಲಾಗುವುದು. ಈಗಿರುವ ನೇಮಕಾತಿ ನಿಯಮಗಳಿಗೆ ಅಗತ್ಯ ತಿದ್ದುಪಡಿ ಮಾಡಲಾಗುವುದು. ಹಾಗೇ, ವಯಸ್ಸಿನ ಮಿತಿಯಲ್ಲೂ ವಿನಾಯಿತಿ ಕೊಡಲಾಗುವುದು ಎಂದೂ ರಕ್ಷಣಾ ಸಚಿವಾಲಯ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಅಗ್ನಿಪಥ್ ವಿರೋಧವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ, ರಾಜನಾಥ್ ನೇತೃತ್ವದಲ್ಲಿ ಸೇನಾ ಮುಖ್ಯಸ್ಥರ ಸಭೆ