Site icon Vistara News

Penalty to Post Master : ಅಂಚೆ ವಿಳಂಬದಿಂದ ಕೈತಪ್ಪಿದ ಮ್ಯಾನೇಜರ್‌ ಹುದ್ದೆ; ಪೋಸ್ಟ್‌ ಮಾಸ್ಟರ್‌ಗೆ 3.10 ಲಕ್ಷ ರೂ. ದಂಡ

Penalty to post Master

ಬೆಂಗಳೂರು: ಕೊಪ್ಪಳ ಜಿಲ್ಲೆಯ ಆ ವ್ಯಕ್ತಿಗೆ ಸಮಯಕ್ಕೆ ಸರಿಯಾಗಿ ಸಂದರ್ಶನದ ಪತ್ರ (Interview letter) ಬಂದಿದ್ದರೆ ಅವರು ಖಾಸಗಿ ಬ್ಯಾಂಕ್‌ನ ಮ್ಯಾನೇಜರ್‌ (Private Bank Manager) ಹುದ್ದೆ ಸಿಕ್ಕಿಬಿಡುತ್ತಿತ್ತು. ಆದರೆ, ಅಂಚೆ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ (Negligence of Postal staff) ಆ ಉದ್ಯೋಗವೇ ತಪ್ಪಿ ಹೋಗಿದೆ. ಇದೀಗ ಉದ್ಯೋಗ ಕೈತಪ್ಪಿದ (Missed job) ವ್ಯಕ್ತಿಗೆ 3.10 ಲಕ್ಷ ರೂ. ಪರಿಹಾರ ನೀಡುವಂತೆ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ (Customer readdresal commission) ಆದೇಶ ನೀಡಿದೆ.

ಮ್ಯಾನೇಜರ್‌ ಹುದ್ದೆಯ ಸಂದರ್ಶನ ಪತ್ರವನ್ನು ಸಕಾಲದಲ್ಲಿ ತಲುಪಿಸದೆ ಉದ್ಯೋಗದ ಅವಕಾಶವನ್ನು ವಂಚಿತಗೊಳಿಸಿದ ಕಾರಣಕ್ಕಾಗಿ ಪೋಸ್ಟ್‌ ಮಾಸ್ಟರ್‌ಗೆ ಈ ದಂಡವನ್ನು ವಿಧಿಸಲಾಗಿದೆ.

ಕೊಪ್ಪಳ ಜಿಲ್ಲೆಯವರಾದ 32 ವರ್ಷದ ಈ ವ್ಯಕ್ತಿ 2014ರಲ್ಲಿ ಖಾಸಗಿ ಬ್ಯಾಂಕ್‌ನ ಮ್ಯಾನೇಜರ್‌ ಹುದ್ದೆಗೆ ಅರ್ಜಿ ಹಾಕಿ ಬಳಿಕ ಪರೀಕ್ಷೆ ಬರೆದಿದ್ದರು. ಪ್ರತಿಭಾವಂತರಾಗಿದ್ದ ಅವರು ಉತ್ತಮ ಅಂಕವನ್ನು ಗಳಿಸಿದ್ದರು. ಈ ಅಂಕದ ಆಧಾರದ ಮೇಲೆ ಅವರನ್ನು ಉದ್ಯೋಗಕ್ಕೆ ಬಹುತೇಕ ಆಯ್ಕೆ ಮಾಡಲಾಗಿತ್ತು. ಇದಕ್ಕಾಗಿ ಒಂದು ಸಂದರ್ಶನ ಆಯೋಜನೆಯಾಗಿತ್ತು. ಮೂಲ ಅಂಕಪಟ್ಟಿ ಮತ್ತು ಇತರ ದಾಖಲೆಗಳನ್ನು ಆ.13ರೊಳಗೆ ಸಲ್ಲಿಸುವಂತೆ ಬ್ಯಾಂಕ್‌ ಸೂಚಿತ್ತು. ನಿಜವೆಂದರೆ ಬ್ಯಾಂಕ್‌ ಈ ಪತ್ರವನ್ನು 2014ರ ಜುಲೈ 24ರಂದು ಭಾರತೀಯ ಅಂಚೆಯ ಮೂಲಕ ರವಾನೆ ಮಾಡಿತ್ತು. ಆದರೆ ಈ ಪತ್ರ ಅಭ್ಯರ್ಥಿಯ ಕೈ ಸೇರಿದ್ದು ಆ.28ರಂದು.

ಅವರು ದಾಖಲೆಗಳನ್ನು ಸಲ್ಲಿಸಲು ಅಂತಿಮ ದಿನಾಂಕ ಇದ್ದಿದ್ದು ಆಗಸ್ಟ್‌ 13. ಅದಕ್ಕಿಂತಲೂ 15 ದಿನ ತಡವಾಗಿ ಪತ್ರ ಅವರನ್ನು ತಲುಪಿದೆ. ಸಕಾಲದಲ್ಲಿ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗದೆ ಇದ್ದುದರಿಂದ ಈ ವ್ಯಕ್ತಿಗೆ ಮ್ಯಾನೇಜರ್‌ ಹುದ್ದೆಯ ಅವಕಾಶವೇ ಕೈತಪ್ಪಿ ಹೋಗಿದೆ.

ಅಂಚೆ ಇಲಾಖೆಯ ಸೇವಾ ನ್ಯೂನತೆ ಮತ್ತು ನಿರ್ಲಕ್ಷ್ಯದಿಂದಾಗಿಯೇ ತನಗೆ ಬ್ಯಾಂಕ್‌ ಸಂದರ್ಶನ ಮತ್ತು ಉದ್ಯೋಗ ಅವಕಾಶ ಕೈ ತಪ್ಪಿ ಹೋಗಿದೆ ಎಂದು ಆಪಾದಿಸಿದ ಕೊಪ್ಪಳದ ಈ ವ್ಯಕ್ತಿ ಬೆಂಗಳೂರಿನ ಬಸವ ಭವನದಲ್ಲಿರುವ ಬೆಂಗಳೂರಿನ ರಾಜ್ಯ ಗ್ರಾಹಕ ವ್ಯಾಜ್ಯ ಆಯೋಗಕ್ಕೆ 2015ರಲ್ಲಿ ದೂರು ನೀಡಿದ್ದರು.

ಅಂಚೆ ಇಲಾಖೆಯ ವಾದವೇನು?

ಸಕಾಲದಲ್ಲಿ ಪತ್ರವನ್ನು ತಲುಪಿಸದೆ ಇರುವುದಕ್ಕೆ ಅಂಚೆ ಇಲಾಖೆ ಕೆಲವೊಂದು ಕಾರಣಗಳನ್ನು ನೀಡಿ ವಾದ ಮಂಡನೆಯನ್ನು ಮಾಡಿದೆ.

  1. ಪತ್ರದಲ್ಲಿನ ವಿಳಾಸದಲ್ಲಿ ವ್ಯತ್ಯಾಸದಿಂದ ನಿರ್ದಿಷ್ಟ ಅವಧಿಯಲ್ಲಿ ಪತ್ರ ತಲುಪಿಸಲು ಸಾಧ್ಯವಾಗಿಲ್ಲ.
  2. ಕರ್ತವ್ಯ ನಿರ್ವಹಿಸುತ್ತಿದ್ದ ಪೋಸ್ಟ್‌ ಮಾಸ್ಟರ್‌ ಈ ಸಂದರ್ಭದಲ್ಲಿ ಇಲಾಖಾ ತರಬೇತಿಯಲ್ಲಿದ್ದರು.
  3. ಈ ವೇಳೆ ಹೊಸದಾಗಿ ತಾತ್ಕಾಲಿಕವಾಗಿ ಕರ್ತವ್ಯ ನಿಯೋಜನೆಗೊಂಡವರಿಗೆ ವಿಳಾಸದಲ್ಲಿನ ವ್ಯತ್ಯಾಸದಿಂದ ನಿರ್ದಿಷ್ಟ ಅವಧಿಯಲ್ಲಿ ಪತ್ರ ತಲುಪಿಸಲು ಸಾಧ್ಯವಾಗಿಲ್ಲ.

ಆದರೆ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಅಂಚೆ ಇಲಾಖೆಯ ವಾದವನ್ನು ಪುರಸ್ಕಾರ ಮಾಡಲಿಲ್ಲ. ಎರಡು ಕಡೆಯ ವಾದಗಳನ್ನು ಆಲಿಸಿದ ಆಯೋಗ ಗ್ರಾಹಕ ಸೇವೆಯಲ್ಲಿ ವ್ಯತ್ಯಯವಾಗಿರುವುದನ್ನು ಖಚಿತಪಡಿಸಿಕೊಂಡು ದೂರುದಾರನಿಗೆ 3.10 ಲಕ್ಷ ರೂ. ಪರಿಹಾರ ನೀಡಲು ಸೂಚಿಸಿದೆ.

ಇದರಲ್ಲಿ 2 ಲಕ್ಷ ರೂ. ಪರಿಹಾರವಾಗಿದ್ದರೆ, ಶೇ.6ರ ಬಡ್ಡಿದರದಲ್ಲಿ ಒಟ್ಟು 8ವರ್ಷಕ್ಕೆ 90,000 ರೂ.ವನ್ನು ಹೆಚ್ಚುವರಿಯಾಗಿ ನೀಡಬೇಕಾಗಿದೆ. ನ್ಯಾಯಾಲಯದ ಪರಿಹಾರ ವೆಚ್ಚ 20,000 ರೂ. ಹೀಗೆ ಒಟ್ಟು 3.10 ಲಕ್ಷ ರೂ. ಪರಿಹಾರವಾಗಿ ನೀಡುವಂತೆ ಅಂಚೆ ಇಲಾಖೆಗೆ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: Accident compensation : ಅಪಘಾತದಿಂದ ಕಾಲು ಕಳೆದುಕೊಂಡು, ನಿರುದ್ಯೋಗಿಯಾದ ವ್ಯಕ್ತಿಗೆ 1.5 ಕೋಟಿ ರೂ. ಪರಿಹಾರ

Exit mobile version