ಬೆಂಗಳೂರು: ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿರುವ ಏರ್‌ಟೆಲ್ ತನ್ನ 5ಜಿ ಸೇವೆಯನ್ನು ವಿಸ್ತರಣೆ ಮಾಡುತ್ತಿದ್ದು, ಉದ್ಯೋಗ ನೇಮಕಾತಿಯನ್ನು ಹೆಚ್ಚಿಸಲು ಉದ್ದೇಶಿಸಿರುವುದಾಗಿ ತಿಳಿಸಿದೆ. 5ಜಿ ರೇಡಿಯೊ ಅಕ್ಸೆಸ್ ನೆಟ್‌ವರ್ಕ್, ರೇಡಿಯೋ ಫ್ರೀಕ್ವೆನ್ಸಿ ಎಂಜಿನಿಯರ್ ಹುದ್ದೆಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. (Airtel 5G hiring) ಏರ್‌ಟೆಲ್ 5ಜಿ ತಂತ್ರಜ್ಞಾನ ಕುರಿತ ತರಬೇತಿಯನ್ನೂ ಒದಗಿಸುತ್ತಿದ್ದು, 20,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ನೀಡಿದೆ. ಐಪಿ ತಂತ್ರಜ್ಞಾನದ ಬಗ್ಗೆ ನುರಿತರನ್ನಾಗಿಸಲು ಸಹಕಾರಿಯಾಗಿದೆ.
ಏರ್‌ಟೆಲ್ ಸ್ಟೆಪ್ ಇನ್ ಎಂಬ ಮತ್ತೊಂದು ಉಪಕ್ರಮವನ್ನು ಆರಂಭಿಸಿದ್ದು, ವೃತ್ತಿಯಲ್ಲಿ ಬಿಡುವು ತೆಗೆದುಕೊಂಡಿದ್ದವರಿಗೆ ಮತ್ತೆ ಸಂಸ್ಥೆಗೆ ಸೇರಿಕೊಳ್ಳಲು ಬಯಸುವವರಿಗೆ ಆದ್ಯತೆ ನೀಡಲಿದೆ. ಮಕ್ಕಳ ಆರೈಕೆ ಮತ್ತಿತರ ಕಾರಣಕ್ಕೆ ಕೆಲಸ ಬಿಟ್ಟಿದ್ದವರಿಗೆ ಮತ್ತೆ ಕರಿಯರ್ ಅವಕಾಶ ಕಂಡುಕೊಳ್ಳಲು ಇದು ಸಹಾಯಕ. 600ಕ್ಕೂ ಹೆಚ್ಚು ಮಹಿಳೆಯರು ಇದರ ಪ್ರಯೋಜನ ಪಡೆದಿದ್ದಾರೆ ಎಂದು ಕಂಪನಿ ತಿಳಿಸಿದೆ.
ಏರ್‌ಟೆಲ್ ಪ್ರಸಕ್ತ ಸಾಲಿನಲ್ಲಿ ಕರೆಗಳು, ಡೇಟಾ ದರಗಳನ್ನು ವೃದ್ಧಿಸಲಿದೆ ಎಂದು ಬಾರ್ಷಿಲೋನಾದಲ್ಲಿ ಇತ್ತೀಚೆಗೆ ಕಂಪನಿಯ ಸಿಇಒ ಸುನಿಲ್ ಮಿತ್ತಲ್ ತಿಳಿಸಿದ್ದರು. ಟೆಲಿಕಾಂ ಬಿಸಿನೆಸ್‌ನಲ್ಲಿ ಹಾಕಿದ ಬಂಡವಾಳಕ್ಕೆ ಪ್ರತಿಫಲ ಕಡಿಮೆಯಾದ್ದರಿಂದ ದರ ಹೆಚ್ಚಳ ಅನಿವಾರ್ಯ ಎಂದು ತಿಳಿಸಿದ್ದರು.