ಬೆಂಗಳೂರು: ರಾಜಧಾನಿ ಬೆಂಗಳೂರು ಅರಮನೆ ಮೈದಾನದಲ್ಲಿ (Bangalore Palace Ground) ಫೆಬ್ರವರಿ 26 ಮತ್ತು 27ರಂದು ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ನಡೆದ ಯುವ ಸಮೃದ್ಧಿ ಸಮ್ಮೇಳನದಲ್ಲಿ (Job Fair) ಸುಮಾರು 9,651 ಉದ್ಯೋಗ ಆಕಾಂಕ್ಷಿಗಳಿಗೆ ಸ್ಥಳದಲ್ಲೇ ಉದ್ಯೋಗ (Direct Job) ನೀಡುವ ಮೂಲಕ ಹೊಸ ದಾಖಲೆ ಬರೆದಿದ್ದೇವೆ ಎಂದು ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ (Dr Sharanaprakash Pateel) ಹೇಳಿದರು.
ಬುಧವಾರ ವಿಕಾಸ ಸೌಧದ ತಮ್ಮ ಕಚೇರಿಯಲ್ಲಿ ಯುವ ಸಮೃದ್ಧಿ ಸಮ್ಮೇಳನದ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 53,913 ಪುರುಷರು, 32,494 ಮಹಿಳೆಯರು, ಇತರೆ 42 ಸೇರಿದಂತೆ ಒಟ್ಟು ಆನ್‍ಲೈನ್ ಮೂಲಕ 86,451 ಅಭ್ಯರ್ಥಿಗಳು ಹೆಸರನ್ನು ನೋಂದಣಿ ಮಾಡಿಕೊಂಡಿದ್ದರು. ಸಮ್ಮೇಳನಕ್ಕೆ 44527 ಅಭ್ಯರ್ಥಿಗಳು ಹಾಜರಾಗಿದ್ದರು. ಇದರಲ್ಲಿ ಶೈಕ್ಷಣಿಕ ಅರ್ಹತೆಗನುಗುಣವಾಗಿ ಒಟ್ಟು 9,651 ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ನೀಡಿದ್ದೇವೆ ಎಂದು ಪಾಟೀಲ್ ಮಾಹಿತಿ ನೀಡಿದರು.
16,865 ಅರ್ಜಿಗಳು ಪರಿಶೀಲನೆ ಹಂತದಲ್ಲಿವೆ. 2,457 ಅರ್ಜಿಗಳನ್ನು ತಾಂತ್ರಿಕ ಕಾರಣಗಳಿಂದ ತಿರಸ್ಕರಿಸಲಾಗಿದೆ. 15,461 ಅಭ್ಯರ್ಥಿಗಳು ಸಂದರ್ಶನಕ್ಕೊಳಗಾಗಿದ್ದರು. ಅಭ್ಯರ್ಥಿಗಳ ಪೂರ್ಣ ವಿವರಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಇವರಿಗೂ ಕೂಡ ಉದ್ಯೋಗ ನೀಡಲಾಗುತ್ತದೆ. ಒಟ್ಟಾರೆ ಎರಡು ದಿನ ನಡೆದ ಸಮ್ಮೇಳನ ನಮ್ಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದರು.
Job Fair : ಯಾವ ಯಾವ ವಲಯದಲ್ಲಿ ಉದ್ಯೋಗ ಸಿಕ್ಕಿದೆ?
ಸಮ್ಮೇಳನದಲ್ಲಿ ವೈಮಾನಿಕ ಮತ್ತು ನಾಗರಿಕ ವಲಯದಿಂದ 26
ಕೃಷಿ 6, ಉಡುಪು ವಲಯ 6, ಆಟೋಮೆಟಿವ್ 74
ಸೌಂದರ್ಯ ವಲಯ 3, ಆರೋಗ್ಯ ಕ್ಷೇತ್ರ 27
ಎಲೆಕ್ಟ್ರಾನಿಕ್ ವಲಯ 29, ಜವಳಿ 1, ಟೆಲಿಕಾಂ 19,
ಸೇವಾ ವಲಯ 36, ಮೂಲಭೂತ ಉಪಕರಣಗಳ ವಲಯ 1
ಸೇರಿದಂತೆ ವಿವಿಧ ವಲಯಗಳಲ್ಲಿ ಉದ್ಯೋಗ ನೀಡಲಾಗಿದೆ.
ಇದನ್ನೂ ಓದಿ : Job News: ಶೀಘ್ರ 1 ಸಾವಿರ ಗ್ರಾಮ ಲೆಕ್ಕಾಧಿಕಾರಿಗಳ ನೇಮಕ; ವೇತನದಲ್ಲೂ ಹೆಚ್ಚಳ!
Job Fair : ರಾಜ್ಯದ ಮೂರು ವಿಭಾಗಗಳಲ್ಲಿ ಇನ್ನು ಉದ್ಯೋಗ ಮೇಳ
ಮೊದಲ ಹಂತದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಯಶಸ್ವಿ ಯುವ ಸಮೃದ್ಧಿ ಸಮ್ಮೇಳನ ನಡೆದಿರುವ ಹಿನ್ನಲೆಯಲ್ಲಿ ಇನ್ನು ಮುಂದೆ ರಾಜ್ಯದ ಮೂರು ಪ್ರಮುಖ ವಿಭಾಗಗಳಲ್ಲಿ ಯುವ ಸಮೃದ್ಧಿ ಸಮ್ಮೇಳನ ನಡೆಸಲಾಗುವುದು ಎಂದು ಶರಣಪ್ರಕಾಶ್ ಪಾಟೀಲ್ ಹೇಳಿದರು. ಕಲಬುರಗಿ, ಬೆಳಗಾವಿ ಮತ್ತು ಮೈಸೂರಿನಲ್ಲಿ ಉದ್ಯೋಗ ಮೇಳವನ್ನು ನಡೆಸಲಾಗುವುದು. ಇದಕ್ಕಾಗಿ ಈಗಾಗಲೇ ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ಕೊಪ್ಪಳ, ಮೈಸೂರಿನಲ್ಲಿ ಎರಡು ತರಬೇತಿ ಕೇಂದ್ರ ಸ್ಥಾಪನೆ
ವಿಭಾಗವಾರು ಉದ್ಯೋಗ ಮೇಳ ನಡೆಸುವ ಮಾದರಿಯಂತೆ ರಾಜ್ಯದ ಎರಡು ಕಡೆ ಉದ್ಯೋಗ ಆಕಾಂಕ್ಷಿಗಳಿಗೆ ತರಬೇತಿ ಕೇಂದ್ರ ಪ್ರಾರಂಭಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ಹಾಗೂ ಮೈಸೂರಿನಲ್ಲಿ ಈ ಎರಡು ತರಬೇತಿ ಕೇಂದ್ರಗಳು ಪ್ರಾರಂಭವಾಗಲಿವೆ. ವಿವಿಧ ವೃತ್ತಿಪರ ಕೋರ್ಸ್‍ಗಳನ್ನು ಮುಗಿಸಿದ ಸುಮಾರು 25 ಸಾವಿರ ಯುವಕರಿಗೆ ಉದ್ಯೋಗ ನೀಡಲಾಗುತ್ತದೆ. ಈಗಾಗಲೇ ಇದಕ್ಕೆ ಇಲಾಖೆ ವತಿಯಿಂದ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪಾಟೀಲ್ ಹೇಳಿದರು.
ಕೇರಳ ಮಾದರಿಯಲ್ಲಿ ಸಾಗರೋತ್ತರ ಕಂಪನಿ ಪ್ರಾರಂಭ
ವಿದೇಶಿ ಕಂಪನಿಗಳಿಗೆ ಬೇಕಾದ ಮಾನವ ಸಂಪನ್ಮೂಲ ಒದಗಿಸಿಕೊಡಲು ಅನುಕೂಲವಾಗುವಂತೆ ರಾಜ್ಯ ಸರ್ಕಾರವು ಕೇರಳ ಮಾದರಿಯಲ್ಲಿ ಸಾಗರೋತ್ತರ ಕಂಪನಿ ಪ್ರಾರಂಭಿಸಲಿದೆ ಎಂದು ಶರಣಪ್ರಕಾಶ್ ಪಾಟೀಲ್ ಪ್ರಕಟಿಸಿದರು.
ಕೇರಳದಲ್ಲಿ ಈಗಾಗಲೇ ಸಾಗರೋತ್ತರ ಕಂಪನಿ ರಚನೆ ಮಾಡಲಾಗಿದೆ. ಇದೇ ಮಾದರಿಯನ್ನು ಇಟ್ಟುಕೊಂಡು ಕರ್ನಾಟಕದಲ್ಲೂ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದರು.
ಎಂಜಿನಿಯರಿಂಗ್, ಡಿಪ್ಲೊಮಾ, ಐಟಿಐ ಸೇರಿದಂತೆ ವೃತ್ತಿಪರ ಕೋರ್ಸ್‍ಗಳನ್ನು ಮುಗಿಸಿದ ಉದ್ಯೋಗ ಆಕಾಂಕ್ಷಿಗಳಿಗೆ ಸಾಗರೋತ್ತರ ಕಂಪನಿಗಳ ಮೂಲಕ ಮಾಹಿತಿ ಕೊಡಲಾಗುವುದು. ಈಗಾಗಲೇ 49 ಕಂಪನಿಗಳು ಮುಂದೆ ಬಂದಿವೆ ಎಂದು ತಿಳಿಸಿದರು.
ಐಬಿಎಂ ಕಂಪನಿಯವರೇ 5 ಲಕ್ಷ ಉದ್ಯೋಗ ಆಕಾಂಕ್ಷಿಗಳಿಗೆ ತರಬೇತಿ ನೀಡಲು ಮುಂದೆ ಬಂದಿದ್ದಾರೆ. ಸಾಗರೋತ್ತರ ಕಂಪನಿಯು ಸಂವಹನ ಮಾಧ್ಯಮವಾಗಿ ರಾಜ್ಯದಲ್ಲಿ ಲಭ್ಯವಿರುವ ಮಾನವ ಸಂಪನ್ಮೂಲಗಳ ಬಗ್ಗೆ ಮಾಹಿತಿ ನೀಡಲಿದೆ. ಇದರಿಂದ ಉದ್ಯೋಗ ಆಕಾಂಕ್ಷಿಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅಲೆಯುವುದು ತಪ್ಪುತ್ತದೆ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಅಭಿಪ್ರಾಯಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಕೌಶಲಾಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಎಂ.ಕನಗವಲ್ಲಿ ಮತ್ತು ಎಕ್ಸಿಕ್ಯುಟಿವ್ ಡೈರೆಕ್ಟರ್ ಸಿ.ಆರ್ ಕೃಷ್ಣ ಕುಮಾರ್ ಉಪಸ್ಥಿತರಿದ್ದರು.
Our @INCKarnataka government is organising a mega job fair to connect our youth with employers. More than 75000 candidates, ~600 companies with 1 lakh jobs registered.
— Rajeev Gowda (@rajeevgowda) February 26, 2024
Happy to see energised youngsters actively participating.
One key focus area is upskilling. Our government… pic.twitter.com/Smfb1m8SjX