ನವದೆಹಲಿ: ಭಾರತೀಯ ರೈಲ್ವೆಯು ಜಗತ್ತಿನಲ್ಲೇ ಅತಿ ಹೆಚ್ಚು ಜನರಿಗೆ ಉದ್ಯೋಗ ನೀಡಿದ ಸರ್ಕಾರಿ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿದೆ. ಆದರೂ, ಇಂತಹ ಬೃಹತ್ ರೈಲ್ವೆ ಇಲಾಖೆಯಲ್ಲಿಯೇ 2.74 ಲಕ್ಷ ಉದ್ಯೋಗಗಳು ಖಾಲಿಯಿದ್ದು, ಭರ್ತಿ ಕುರಿತು ರೈಲ್ವೆ ಇಲಾಖೆಯು ಮಹತ್ವದ ಸುಳಿವು ನೀಡಿದೆ. ಶೀಘ್ರದಲ್ಲಿಯೇ ರೈಲ್ವೆ ಇಲಾಖೆಯ ಖಾಲಿ (Railway Jobs) ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಇದರಿಂದಾಗಿ ಲಕ್ಷಾಂತರ ಜನರಿಗೆ ಶೀಘ್ರದಲ್ಲಿಯೇ ಉದ್ಯೋಗ ಸಿಗಲಿದೆ ಎಂಬ ಅಂದಾಜಿದೆ.
ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಮಧ್ಯಪ್ರದೇಶದ ಚಂದ್ರಶೇಖರ್ ಗೌರ್ ಎಂಬುವರು ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಮಾಹಿತಿ ಕೋರಿದ್ದು, ಅದರಂತೆ ರೈಲ್ವೆ ಇಲಾಖೆಯು ಮಾಹಿತಿ ನೀಡಿದೆ. “ರೈಲ್ವೆ ಇಲಾಖೆಯಲ್ಲಿ ಪ್ರಸ್ತುತ 2.74 ಲಕ್ಷ ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ 1.7 ಲಕ್ಷ ಹುದ್ದೆಗಳು ಸೇಫ್ಟಿ ಕೆಟಗರಿಯಲ್ಲಿ ಖಾಲಿ ಇವೆ” ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಸೇಫ್ಟಿ ಕೆಟಗರಿಯಲ್ಲಿಯೇ 9.82 ಲಕ್ಷ ಹುದ್ದೆಗಳಿದ್ದು, ಸದ್ಯ 8.04 ಲಕ್ಷ ನೌಕರರು ಈ ಕೆಟಗರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಲೆವೆಲ್ 1, ಗ್ರೂಪ್ ಸಿ ಸೇರಿ ಒಟ್ಟು 2,74,580 ಹುದ್ದೆಗಳು ಖಾಲಿ ಇವೆ. 2022ರ ಡಿಸೆಂಬರ್‌ನಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಸಂಸತ್ತಿಗೆ ಮಾಹಿತಿ ನೀಡಿದ್ದರು. ದೇಶದ ರೈಲ್ವೆ ಇಲಾಖೆಯಲ್ಲಿ 3.12 ಲಕ್ಷ ನಾನ್-ಗೆಜೆಟೆಡ್ ಪೋಸ್ಟ್‌ಗಳು ಖಾಲಿ ಇವೆ ಎಂದು ತಿಳಿಸಿದ್ದರು.
ಇದನ್ನೂ ಓದಿ: Jobs News : ಉಪನ್ಯಾಸಕರ ಹಾಗೂ ಪ್ರೌಢ ಶಾಲಾ ಶಿಕ್ಷಕರ ನೇಮಕ; ವಯೋಮಿತಿ ಹೆಚ್ಚಿಸಿದ ಸರ್ಕಾರ
ಶೀಘ್ರವೇ ನೇಮಕಕ್ಕೆ ಕ್ರಮ
ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳ ಭರ್ತಿಗೆ ಇಲಾಖೆಯು ಕ್ರಮ ತೆಗೆದುಕೊಳ್ಳಲಿದೆ ಎಂದು ರೈಲ್ವೆ ವಕ್ತಾರ ಅಮಿತಾಭ್ ಶರ್ಮಾ ಮಾಹಿತಿ ನೀಡಿದ್ದಾರೆ. “ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಸೇರಿ ಆಯಾ ಪ್ರಕ್ರಿಯೆಗಳಂತೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ” ಎಂದು ತಿಳಿಸಿದ್ದಾರೆ. ಹಾಗಾಗಿ, ದೇಶದ ಲಕ್ಷಾಂತರ ಅಭ್ಯರ್ಥಿಗಳಲ್ಲಿ ಹೊಸ ಭರವಸೆ ಮೂಡಿದೆ.