ನವ ದೆಹಲಿ: ಕೇಂದ್ರ ಸರ್ಕಾರವು ಇತ್ತೀಚೆಗೆ ಪ್ರಕಟಿಸಿದ ಸೇನಾ ನೇಮಕಾತಿ ಯೋಜನೆ ʼಅಗ್ನಿಪಥ್ʼ (Agnipath) ಅಡಿಯಲ್ಲಿ ಮೊದಲಿಗೆ ಭಾರತೀಯ ವಾಯುಪಡೆಯು (ಐಎಎಫ್) ʼಅಗ್ನಿವೀರʼ ರನ್ನು (ಸೈನಿಕರನ್ನು) ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಿದ್ದು, ಇದುವರೆಗೆ ೧.೮೩ ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ.
ಕಳೆದ ಆರು ದಿನಗಳ ಹಿಂದೆ (ಜೂ. ೨೪) ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಜೂನ್ ೨೮ರ ಸಂಜೆಯವರೆಗೆ 1,83,634 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ವಾಯುಪಡೆಯು ಟ್ವಿಟ್ಟರ್‌ನಲ್ಲಿ ತಿಳಿಸಿದೆ. ಅರ್ಜಿ ಸಲ್ಲಿಸಲು ಜುಲೈ ೫ (ಸಂಜೆ ೫ ಗಂಟೆಯವರೆಗೆ ಮಾತ್ರ) ಕೊನೆಯ ದಿನವಾಗಿರುತ್ತದೆ. ಇನ್ನೂ ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸುವಂತೆ ವಾಯು ಪಡೆಯು ಕೋರಿದೆ.
ವಾಯಪಡೆಗೆ ಈ ವರ್ಷ ೩,೦೦೦ ಅಗ್ನಿವೀರರನ್ನು ನೇಮಿಸಿಕೊಳ್ಳಲಿದೆ. ಅರ್ಹ ಪುರುಷ ಅಭ್ಯರ್ಥಿಗಳು ಮಾತ್ರ ಈ ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದ್ದು, ಆಸಕ್ತರು ಈ ನೇಮಕ ಪ್ರಕ್ರಿಯೆಗಾಗಿ ವಿಶೇಷವಾಗಿ ಆರಂಭಿಸಿರುವ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವೆಬ್ ವಿಳಾಸ ಇಂತಿದೆ; https://agnipathvayu.cdac.in
ಇತ್ತ ಗಮನಿಸಿ
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಕ ದಿನಾಂಕ : ೨೪-೦೬-೨೦೨೨
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ೦೫-೦೭-೨೦೨೨ (ಸಂಜೆ ೫ ಗಂಟೆಯವರೆಗೆ ಮಾತ್ರ)
ಮೊದಲ ಹಂತದ ಪರೀಕ್ಷೆ ಆರಂಭ: ಜುಲೈ ಕೊನೆಯ ವಾರ
ಅಗ್ನಿವೀರರ ಮೊದಲ ನೇಮಕ: ೧೧-೧೨-೨೦೨೨
ಅರ್ಜಿ ಶುಲ್ಕ : ೨೫೦ ರೂ. (ಆನ್‌ಲೈನ್‌ನಲ್ಲಿಯೇ ಪಾವತಿಸಬಹುದಾಗಿದೆ)
ಮಾಹಿತಿಗೆ ದೂರವಾಣಿ ಸಂಖ್ಯೆ: 20-25503105/25503106
ಹೆಚ್ಚಿನ ಮಾಹಿತಿಗೆ ವೆಬ್ ಸೈಟ್: https://indianairforce.nic.in/agniveer/
ಅರ್ಜಿ ಸಲ್ಲಿಸಲು ವೆಬ್: https://agnipathvayu.cdac.in
ಅಗ್ನಿಪಥ್ ಯೋಜನೆ ಪ್ರಕಟಿಸಿದ ನಂತರ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆ ನಡೆದಿದ್ದರೂ ಈ ನೇಮಕಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಭಾರತೀಯ ಸೇನೆ ಮತ್ತು ಭಾರತೀಯ ನೌಕಾಪಡೆ ಕೂಡ ಜುಲೈನಲ್ಲಿ ನೇಮಕ ಪ್ರಕ್ರಿಯೆ ಆರಂಭಿಸಲಿವೆ. ಭಾರತೀಯ ಸೇನೆಯು ನೇಮಕಕ್ಕಾಗಿ ನಡೆಸಲಾಗುವ ರ‍್ಯಾಲಿಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ.
ಇದನ್ನೂ ಓದಿ| Agnipath | ಭಾರತೀಯ ವಾಯುಪಡೆಗೆ ಅಗ್ನಿವೀರರ ನೇಮಕ ಇಂದಿನಿಂದಲೇ ಶುರು